More

    ಸಾಧು-ಸಂತರ ರಕ್ಷಣೆಗೆ ಸರ್ಕಾರ ಬದ್ಧ

    ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ನಮಗೆಲ್ಲ ನೋವು ತಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ಸರಿಯಾದ ಪಾಠ ಕಲಿಸುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

    ತಾಲೂಕಿನ ಹಲಗಾ ಜೈನ ಬಸದಿಗೆ ಭೇಟಿ ನೀಡಿ, ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರೊಂದಿಗೆ ಮಾತುಕತೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಒತ್ತಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ನಡೆಸುವಾಗ ಪೊಲೀಸ್ ಇಲಾಖೆ ಚೆನ್ನಾಗಿತ್ತು. ಒಂದೂವರೆ ತಿಂಗಳಲ್ಲಿ ಪೊಲೀಸ್ ಇಲಾಖೆ ಮೇಲೆ ಅಪನಂಬಿಕೆ ಏಕೆ ಎಂದು ಟಾಂಗ್ ನೀಡಿದರು. ಇದರಲ್ಲಿ ಕ್ಷುಲ್ಲಕ ರಾಜಕೀಯ ಮಾಡಬಾರದು. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ ಆಗಿದೆ. ಎಲ್ಲದರಲ್ಲೂ ರಾಜಕೀಯ ಮಾಡಿದರೆ ಚೆನ್ನಾಗಿ ಕಾಣುವುದಿಲ್ಲ. ಸಿಬಿಐ ವಹಿಸುವ ಯಾವುದೇ ಸಂದರ್ಭ ಮತ್ತು ಅವಶ್ಯಕತೆ ಇಲ್ಲ ಎಂದರು.

    ಹುಬ್ಬಳ್ಳಿ ತಾಲೂಕಿನ ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಜೈನಮುನಿಗಳಿಗೆ, ಜೈನ ಬಸದಿಗಳಿಗೆ ಸರ್ಕಾರ ರಕ್ಷಣೆ ನೀಡುವಂತೆ ಆಗ್ರಹಿಸಿ ಸಲ್ಲೇಖನ ವ್ರತ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ನವಗ್ರಹ ಕ್ಷೇತ್ರಕ್ಕೆ ಭೇಟಿ ಕೊಟ್ಟಿರುವೆ. ಸ್ವಾಮೀಜಿ ನಾಲ್ಕು ಬೇಡಿಕೆ ಇಟ್ಟಿದ್ದರು. ಜೈನ ಸ್ವಾಮೀಜಿಗಳ ಯಾತ್ರೆ ವೇಳೆ ರಕ್ಷಣೆ ಕೊಡಬೇಕು, ಮುನಿಗಳು ತಂಗಿರುವ ಜಾಗ ಅಧಿಕೃತ ಆಗಬೇಕು, ಜೈನ ಮಂಡಳಿ ಮಾಡಬೇಕು ಎಂದು ಹೇಳಿದ್ದಾರೆ. ಈಗಾಗಲೇ ಹಿಂದುಳಿದ ವರ್ಗಗಳ ಮಂಡಳಿಯ ನಿಗಮ ಇದೆ. ಅದರಂತೆ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜೈನ ಸಮುದಾಯದ ಮಂಡಳಿ ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ. ನಾವು ಜೈನ ಮಂದಿರಕ್ಕೆ ರಕ್ಷಣೆ ಕೊಡುತ್ತೇವೆ ಎಂದರು.

    ಮಹಾರಾಜರ ಹತ್ಯೆಗೆ ಹಣಕಾಸಿನ ವಿಚಾರ ಕಾರಣವಾಗಿರುವ ಕುರಿತು ಮಾಧ್ಯಮಗಳಲ್ಲಿ ಬರುತ್ತಿದೆ. ತನಿಖೆ ನಂತರವೇ ಎಲ್ಲವೂ ಗೊತ್ತಾಗಲಿದೆ. ಹೀಗಾಗಿ ಜೈನ ಸಮುದಾಯದ ಜತೆಗೆ ಸರ್ಕಾರವಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಪ್ರತಿಭಟನೆ ಕೈ ಬಿಡುವಂತೆ ಜೈನ ಸಮಾಜಕ್ಕೆ ಮನವಿ ಮಾಡುತ್ತೇವೆ. ಎಲ್ಲ ಧರ್ಮಗಳ ಸಾಧು-ಸಂತರ ರಕ್ಷಣೆ ನಮ್ಮ ಹೊಣೆ ಎಂದರು.

    ಬಾಲಾಚಾರ್ಯ ಸಿದ್ಧಸೇನ ಮಹಾರಾಜರು ಮಾತನಾಡಿ, ಜೈನ ಸಮುದಾಯ ಮತ್ತೊಬ್ಬರಿಗೆ ಸಹಾಯ ಮಾಡುವ ಸಮುದಾಯ. ಸಾಧುಗಳ ರಕ್ಷಣೆ ಮಾಡಿ ಅನ್ನೋದೇ ನಮ್ಮ ಬೇಡಿಕೆ. ಕರ್ನಾಟಕದಲ್ಲಿ ಈ ರೀತಿ ಇನ್ನೊಮ್ಮೆ ಘಟನೆ ಆಗಬಾರದು. ಕರ್ನಾಟಕದ ಹೆಸರು ಕೆಡಬಾರದು ಎಂದು ಸಾಧು-ಸಂತರ ಪರವಾಗಿ ಗೃಹ ಸಚಿವರಿಗೆ ಮನವಿ ಮಾಡುತ್ತೇವೆ ಎಂದರು. ಹುಬ್ಬಳ್ಳಿ-ಧಾರವಾಡ ಶಾಸಕ ಪ್ರಸಾದ ಅಬ್ಬಯ್ಯ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಹಾಗೂ ಜೈನ ಸಮುದಾಯದ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts