ಸಾಧು ಒಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಕಿಡಿಗೇಡಿಗಳು; ವಿಡಿಯೋ ವೈರಲ್

Sadhu Assault
Published on

ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ಸಾಧು ಒಬ್ಬರ ಮೇಲೆ ಇಬ್ಬರು ಯುವಕರು ಅಮಾನುಷವಾಗಿ ಹಲ್ಲೆ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶ ಅಲಿಗಢದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಸಾಧು ಗಜರಾಜ್​​ ಸಿಂಗ್​ ನೀಡಿದ ದೂರಿನ ಮೇರೆಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಲಿಗಢ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಘಟನೆ ನಡೆದ ವೇಳೆ ಮಜೋಲಾ ಗ್ರಾಮದ ಗಬೀಸ್ ಮತ್ತು ರಾಜೇಶ್ ಇಬ್ಬರು ಪಾನಮತ್ತರಾಗಿದ್ದರು. ಈ ವೇಳೆ ಪೆಟ್ರೋಲ್​ ಬಂಕ್​ನಲ್ಲಿದ್ದ ಸಾಧು ಗಜರಾಜ್​​ ಸಿಂಗ್​ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಯಾವ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಈವರೆಗೆ ತಿಳಿದು ಬಂದಿಲ್ಲ. ಗಾಯಗೊಂಡಿರುವ ಸಾಧು ಗಜರಾಜ್​ ಸಿಂಗ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತ ಸಾಧು ಮೇಲಿನ ಹಲ್ಲೆಯನ್ನು ಖಂಡಿಸಿರುವ ನೆಟ್ಟಿಗರು ಯಾವ ಸುಮ್ಮನೆ ಇದ್ದವರ ಮೇಲೆ ಈ ರೀತಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಸರಿಯಲ್ಲ. ಆರೋಪಿಗಳು ಯಾರೇ ಆಗಿದ್ದರೂ ಎಷ್ಟೇ ಪ್ರಭಾವಿಗಳಾಗಿದ್ದರು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿ ಮಾಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net