

ಮುಂಬೈ: ನಿನ್ನೆ (ನ. 07) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಟೂರ್ನಿಯ 39ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ದ್ವಿಶತಕ (ಅಜೇಯ 201 ರನ್ 128 ಎಸೆತ 21 ಬೌಂಡರಿ 10 ಸಿಕ್ಸರ್) ಸಿಡಿಸಿದರು. 91 ರನ್ಗಳಿಗೆ 7 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಆಸಿಸ್ ಸೋಲಿನ ದವಡೆಯಲ್ಲಿ ಸಿಲುಕ್ಕಿತ್ತು. ಇಂತಹ ನಿರ್ಣಾಯಕ ಪಂದ್ಯದಲ್ಲಿ, ಗಾಯದ ಸಮಸ್ಯೆಯನ್ನೂ ಲೆಕ್ಕಿಸದೇ ಏಕಾಂಗಿಯಾಗಿ ನಿಂತು ಆಫ್ಘಾನ್ ಬೌಲರ್ಗಳ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಮ್ಯಾಕ್ಸಿ, ದ್ವಿಶತಕ ಸಾಧನೆಯ ಜತೆಗೆ ಗೆಲುವು ತಂದುಕೊಟ್ಟಿದ್ದಲ್ಲದೆ, ತಮ್ಮ ತಂಡವನ್ನು ಸೆಮೀಸ್ ಹಂತಕ್ಕೆ ತೆಗೆದುಕೊಂಡು ಹೋದರು.
ಮ್ಯಾಕ್ಸಿ ಆಡಿದ ಈ ಅದ್ಭುತ ಇನ್ನಿಂಗ್ಸ್ ಗುಂಗಿನಿಂದ ಕ್ರೀಡಾಭಿಮಾನಿಗಳು ಇನ್ನೂ ಹೊರಬಂದಿಲ್ಲ. ಕ್ರಿಕೆಟ್ ದಿಗ್ಗಜರೇ ಮ್ಯಾಕ್ಸಿ ರನ್ ಮಾರುತ್ತಕ್ಕೆ ಮನಸೋತಿದ್ದಾರೆ. ಒಂದೆಡೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ತಮ್ಮ ದೇಶಕ್ಕಾಗಿ ಬ್ಯಾಟ್ ಬೀಸಿದ ಮ್ಯಾಕ್ಸಿಗೆ ಇಡೀ ಕ್ರೀಡಾ ಬಳಗವೇ ತಲೆಬಾಗಿದ್ದು, ವಿಶ್ವಕಪ್ ಇತಿಹಾಸದಲ್ಲೇ ಇದೊಂದು ಅತ್ಯುತ್ತಮ ಇನ್ನಿಂಗ್ಸ್ ಆಗಿ ಉಳಿಯಲಿದೆ. ಇದೆಲ್ಲದರ ನಡುವೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಮ್ಯಾಕ್ಸಿಯ ಬ್ಯಾಟಿಂಗ್ ಆರ್ಭಟಕ್ಕೆ ಗಾಯದ ಸಮಸ್ಯೆಯೂ ಒಂದು ರೀತಿಯಲ್ಲಿ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಗಾಯಗೊಂಡ ಕಾಲಿನಿಂದಲೇ ಮ್ಯಾಕ್ಸ್‌ವೆಲ್ ಮ್ಯಾಕ್ಸಿಮಮ್ ರನ್ ಸಿಡಿಸಿದರು. ಈ ಬಗ್ಗೆ ತಮ್ಮ ಎಕ್ಸ್ (ಈ ಹಿಂದೆ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಚಿನ್, ಬಹುಶಃ ಮ್ಯಾಕ್ಸ್‌ವೆಲ್‌ಗೆ ಅವರ ಬಲಗಾಲಿನಲ್ಲಿ ಸೆಳೆತವು ತಲೆಯನ್ನು ಸ್ಥಿರವಾಗಿಡಲು ಸಹಾಯ ಮಾಡಿರಬಹುದು ಎಂದಿದ್ದಾರೆ. ಕಾಲಿನ ಗಾಯದಿಂದಾಗಿ ಮ್ಯಾಕ್ಸಿ ಕ್ರೀಸ್ನಲ್ಲಿ ಕದಲುತ್ತಿರಲಿಲ್ಲ. ಹೀಗಾಗಿ ಅವರು ತಲೆಯು ಕೂಡ ಸ್ಥಿರವಾಗಿ ಉಳಿದಿತ್ತು. ಇದರಿಂದಾಗಿ ಚೆಂಡನ್ನು ಸರಿಯಾದ ರೀತಿಯಲ್ಲಿ ಸಂಪರ್ಕಿಸಲು ಸಹಾಯ ಮಾಡಿದೆ ಎನ್ನುತ್ತಾರೆ ಸಚಿನ್. ಮ್ಯಾಕ್ಸ್‌ವೆಲ್ ಅತ್ಯುತ್ತಮ ಕೈ ಮತ್ತು ಕಣ್ಣಿನ ಸಮನ್ವಯ ಹಾಗೂ ಬ್ಯಾಟ್ ವೇಗವನ್ನು ಹೊಂದಿದ್ದು, ಇದು ಗಾಯಗೊಂಡ ಕಾಲಿನೊಂದಿಗೆ ಸಂಯೋಜನೆಗೊಂಡು ಆಕ್ರಮಣಕಾರಿ ಆಟವಾಡಲು ಸಹಕಾರಿಯಾಯಿತು ಎಂದು ಸಚಿನ್ ವಿಶ್ಲೇಷಣೆ ಮಾಡಿದ್ದಾರೆ.
ಇನ್ನೊಂದೆಡೆ ಪಾಕಿಸ್ತಾನದ ಮಾಜಿ ನಾಯಕ ಶೋಯಿಬ್ ಮಲ್ಲಿಕ್ ಕೂಡ ಇದೇ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಬಲವಾದ ಹೊಡೆತದಲ್ಲಿ ಮ್ಯಾಕ್ಸಿ ಕಿಂಗ್ ಆಗಿದ್ದು, ತೋಳಿನ ವಿಸ್ತರಣೆಯೊಂದಿಗೆ ಶ್ರೇಷ್ಠವಾದ ಬ್ಯಾಟಿಂಗ್ ವೇಗವನ್ನು ಹೊಂದಿದ್ದಾರೆ ಎಂದು ಮಲ್ಲಿಕ್ ಹೇಳಿದ್ದಾರೆ. ಪವರ್ ಹಿಟ್ಟಿಂಗ್ ಅಥವಾ ಬಲವಾದ ಹೊಡೆತಕ್ಕೆ ಕಾಲಿನ ಚಲನೆಯ ಅಗತ್ಯವೇ ಇರುವುದಿಲ್ಲ ಎಂದು ಮಲ್ಲಿಕ್ ಹೇಳಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಫ್ಘಾನ್ ಪಡೆ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ಗಳನ್ನು ಕಲೆಹಾಕಿತು. ಗುರಿ ಬೆನ್ನತ್ತಿದ ಆಸಿಸ್ ಪಡೆ ಟ್ರೆವಿಸ್ ಹೆಡ್ (0), ಮಿಚೆಲ್ ಮಾರ್ಷ್ (24) ಡೇವಿಡ್ ವಾರ್ನರ್ (18), ಜೋಶ್ ಇಂಗ್ಲಿಸ್ (0), ಮಾರ್ನಸ್ ಲಬುಶೇನ್ (14), ಮಾರ್ಕ್ ಸ್ಟೋನಿಸ್ (6) ಮತ್ತು ಮಿಚೆಲ್ ಸ್ಟಾರ್ಕ್ (3) ಕೇವಲ 91 ರನ್ಗೆ ಪ್ರಮುಖ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಕ್ಷರಶಃ ಸೋಲಿನ ದವಡೆಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಗ್ಲೇನ್ ಮ್ಯಾಕ್ಸ್‌ವೆಲ್ ಅಬ್ಬರಿಸಿ ಬೊಬ್ಬಿರಿದರು. ಮ್ಯಾಕ್ಸಿ ಮಾರುತಕ್ಕೆ ಆಫ್ಘಾನ್ ಬೌಲರ್ಗಳು ತತ್ತರಿಸಿದರು. ಮ್ಯಾಕ್ಸಿ ತಾನು ಎದುರಿಸಿದ 128 ಎಸೆತಗಳಲ್ಲಿ 21 ಬೌಂಡರಿ ಮತ್ತು 10 ಸಿಕ್ಸರ್ ನೆರವಿನೊಂದಿಗೆ 201 ರನ್ ಗಳಿಸಿ ಅಜೇಯರಾಗಿ ಉಳಿದರು. ಗಮನಾರ್ಹ ಸಂಗತಿ ಏನೆಂದರೆ, ಮ್ಯಾಕ್ಸಿ ಆಸಿಸ್ ಪಡೆಯ ಸಮೀಸ್ ಪ್ರವೇಶವನ್ನು ಖಚಿತಪಡಿಸಿದರು. ಮ್ಯಾಕ್ಸಿ ಆಟಕ್ಕೆ ಸಾಥ್ ನೀಡಿದ ನಾಯಕ ಪ್ಯಾಟ್ ಕ್ಯುಮಿನ್ಸ್ 68 ಎಸೆತಗಳಲ್ಲಿ ಕೇವಲ 12 ರನ್ ಗಳಿಸುವ ಮೂಲಕ ತಾಳ್ಮೆಯ ಆಟದೊಂದಿಗೆ ವಿಕೆಟ್ ಕಾಪಾಡಿಕೊಂಡರು. ಅವರು ಕೂಡ ಅಜೇಯರಾಗಿ ಉಳಿದರು. ಅಂತಿಮವಾಗಿ 46.5 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸುವ ಮೂಲಕ 3 ವಿಕೆಟ್ಗಳ ಅಂತರದಿಂದ ವಿರೋಚಿತ ಗೆಲುವು ದಾಖಲಿಸಿತು. (ಏಜೆನ್ಸೀಸ್)