More

    ಶಬರಿಮಲೆ ಕೇಸ್: ಧಾರ್ಮಿಕ ಸ್ವಾತಂತ್ರ್ಯ ಸಂಬಂಧಿಸಿದ ಕಾನೂನು ಪ್ರಶ್ನೆ ವಿಸ್ತೃತ ಪೀಠಕ್ಕೆ, 17ರಿಂದ ನಿತ್ಯ ವಿಚಾರಣೆ

    ನವದೆಹಲಿ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರಿಗೆ ತಾರತಮ್ಯ ಕುರಿತ ವಿಚಾರ ಮುಂಚೂಣಿಗೆ ಬಂದಿದೆ. ಇದರ ಕಾನೂನು ಪ್ರಶ್ನೆಯ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಸೋಮವಾರ ತೀರ್ಮಾನಿಸಿದೆ. ಇದರಂತೆ, ಫೆ. 17ರಿಂದ ನಿತ್ಯವೂ ಎಂಬಂತೆ ಇದರ ವಿಚಾರಣೆ ನಡೆಯಲಿದೆ.

    ಶಬರಿಮಲೆ ಕೇಸ್​ನ ನ್ಯಾಯವ್ಯಾಪ್ತಿಯ ವಿಮರ್ಶೆಯಲ್ಲಿ ಪಂಚ ಸದಸ್ಯ ನ್ಯಾಯಪೀಠಕ್ಕೆ ಮಿತ ಅಧಿಕಾರ ಇರುವ ಕಾರಣ, ಧಾರ್ಮಿಕ ಸ್ವಾತಂತ್ರ್ಯ ಸಂಬಂಧಿತ ದಾವೆಗಳ ವಿಚಾರಣೆಯನ್ನು ಒಂಭತ್ತು ಸದಸ್ಯರ ನ್ಯಾಯಪೀಠ ನಡೆಸಲಿದೆ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ. ಇದಕ್ಕೆ ಏಳು ಪ್ರಶ್ನೆಗಳನ್ನೂ ಅದು ರೂಪಿಸಿದೆ.
    ವಿವಿಧ ಧರ್ಮಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಅವಕಾಶಕ್ಕೆ ಸಂಬಂಧಿಸಿ ಏಳು ಪ್ರಶ್ನೆಗಳನ್ನು ರೂಪಿಸಿದ್ದು, ಅದರಂತೆ ನಿತ್ಯವೂ ಎಂಬಂತೆ ವಿಚಾರಣೆ ಈ ನ್ಯಾಯಪೀಠದಲ್ಲಿ ನಡೆಯಲಿದೆ. ಈ ಪ್ರಶ್ನೆಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಅವಕಾಶ, ವ್ಯಾಪ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯ ಹಾಗೂ ಧಾರ್ಮಿಕ ನಂಬಿಕೆ ನಡುವಿನ ಸಂಬಂಧ, ನಂಬಿಕೆಗಳ ಕುರಿತ ಧಾರ್ಮಿಕ ವ್ಯಾಖ್ಯೆಗಳು ಕೂಡ ಒಳಗೊಂಡಿವೆ.

    ಒಂಭತ್ತು ಸದಸ್ಯ ನ್ಯಾಯಪೀಠವು ಸಂವಿಧಾನದ ಅನುಚ್ಚೇಧ 25ರ ಪ್ರಕಾರ ಈ ಕೇಸಿನ ವಿಚಾರಣೆ ನಡೆಸಲಿದೆ. ಅದೇ ರೀತಿ, ಅನುಚ್ಚೇಧ 25(2)(ಬಿ) ಪ್ರಕಾರ ಸೆಕ್ಷನ್ ಆಫ್ ಹಿಂದೂಸ್ ಎಂಬುದರ ಅರ್ಥ, ಧಾರ್ಮಿಕ ಆಚರಣೆಗಳ ಕುರಿತ ನ್ಯಾಯಾಂಗದ ವಿಮರ್ಶೆಯನ್ನೂ ಗಮನಿಸಲಿದೆ.
    ಇದಲ್ಲದೇ, ವ್ಯಕ್ತಿಯ ಅಧಿಕಾರ ಅಂದರೆ ಆತ ಯಾವುದೇ ನಿಶ್ಚಿತ ಧರ್ಮಕ್ಕೆ ಅಥವಾ ಧರ್ಮದ ಒಂದು ಪಂಗಡಕ್ಕೆ ಹೊಂದಿದ್ದರೆ ಆ ಸೂಕ್ಷ್ಮ ಅಂಶಗಳನ್ನೂ ಗಮನಿಸಿ, ಧಾರ್ಮಿಕ ನಂಬಿಕೆಗಳ ಪ್ರಶ್ನೆಯ ಜತೆ ನ್ಯಾಯಪೀಠ ವ್ಯವಹರಿಸಲಿದೆ. ಇದಕ್ಕೂ ಮುನ್ನ ಯಾರು ಯಾವ ಅಂಶದ ಪರ ವಾದ ಮಂಡಿಸುವಿರಿ ಎಂಬ ಬಗ್ಗೆ ಮಾಹಿತಿ ಒದಗಿಸುವಂತೆ ಕೋರ್ಟ್​ ನ್ಯಾಯವಾದಿಗಳಿಗೆ ಸೂಚಿಸಿದೆ.

    ಫೆ.17ರಂದು ಈ ಕೇಸ್​ನಲ್ಲಿ ಹಿರಿಯ ನ್ಯಾಯವಾದಿ ಕೆ.ಪರಾಸರನ್ ಅವರ ವಾದ ಮಂಡನೆ ಬಳಿಕ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ.

    ನ್ಯಾಯಪೀಠದಲ್ಲಿ ಇರುವವರು: ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಆರ್. ಬಾನುಮತಿ, ಅಶೋಕ್ ಭೂಷಣ್, ಎಲ್​.ನಾಗೇಶ್ವರ ರಾವ್​, ಎಂ.ಎಂ.ಶಾಂತನಗೌಡರ್, ಎಸ್.ಎ.ನಜೀರ್​, ಆರ್. ಸುಭಾಷ್ ರೆಡ್ಡಿ, ಬಿ.ಆರ್. ಗವಾಯಿ, ಸೂರ್ಯಕಾಂತ್​. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts