More

  ಅಪರಿಚಿತ ವಾಹನ ಡಿಕ್ಕಿ : ತಮ್ಮ ಸಾವು, ಅಣ್ಣ ಪ್ರಾಣಾಪಾಯದಿಂದ ಪಾರು

  ಬೆಂಗಳೂರು: ನೈಸ್ ರಸ್ತೆಯ ಮಂಗನಹಳ್ಳಿ ಸೇತುವೆ ಬಳಿ ಸಹೋದರರು ದ್ವಿಚಕ್ರ ವಾಹನದಲ್ಲಿ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರನಾಗಿದ್ದ ತಮ್ಮ ಮೃತಪಟ್ಟು, ಹಿಂಬದಿ ಸವಾರನಾಗಿದ್ದ ಅಣ್ಣ ಗಾಯಗೊಂಡಿದ್ದಾನೆ.
  ಧಾರವಾಡ ಮೂಲದ ವಿನಾಯಕ(೨೦) ಮೃತ ಸವಾರ. ಈತನ ಅಣ್ಣ ಗಿರೀಶ್(೨೨) ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸೋಮವಾರ ಬೆಳಗ್ಗೆ ಅಂದಾಜು ೭.೫೦ಕ್ಕೆ ಈ ಅಪಘಾತ ಸಂಭವಿಸಿದೆ. ಐಟಿಐ ವ್ಯಾಸಂಗ ಮಾಡಿರುವ ಸಹೋದರರು ಜಿಗಣಿಯಲ್ಲಿ ರೂಮ್ ಬಾಡಿಗೆ ಪಡೆದು ವಾಸವಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದರ ಜತೆಗೆ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಸೋಮವಾರ ಸುಂಕದಕಟ್ಟೆಯ ಕಾಲೇಜೊಂದರಲ್ಲಿ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಸಹೋದರರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು.
  ನೈಸ್ ರಸ್ತೆಯ ಮಂಗನಹಳ್ಳಿ ಸೇತುವೆ ಬಳಿ ತೆರಳುವಾಗ ಹಿಂದಿನಿಂದ ಬಂದಿರುವ ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ರಸ್ತೆಗೆ ಬಿದ್ದ ವಿನಾಯಕನ ಮೇಲೆಯೇ ವಾಹನದ ಚಕ್ರ ಹರಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ಗಿರೀಶ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಆತನ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಬಳಿಕ ಅಪರಿಚಿತ ವಾಹನದ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts