More

    ದೀಪ ಧ್ಯಾನದ ಮೂಲಕ ಆಂತರಿಕ ಬೆಳಕು ವೃದ್ಧಿ


    ದೀಪ ಧ್ಯಾನದ ಮೂಲಕ ಆಂತರಿಕ ಬೆಳಕು ವೃದ್ಧಿ|ಮಂಡಗದ್ದೆ ಪ್ರಕಾಶ್​ಬಾಬು ಕೆ.ಆರ್.

    ಮನಸ್ಸಿನ ಒತ್ತಡ, ಖಿನ್ನತೆ ಹಾಗೂ ಉದ್ವೇಗಗಳ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುವುದೇ ಧ್ಯಾನ. ಈ ಧ್ಯಾನವು ಪುರಾತನವಾದ ಆಧ್ಯಾತ್ಮಿಕ ಆಚರಣೆಯಾಗಿದ್ದು ಇದು ವಿಕಾಸಗೊಳ್ಳುತ್ತಾ ಬಂದಿದೆ. ಆಧುನಿಕ ಬದುಕಿನಲ್ಲಿ ಮನಸ್ಸಿಗೆ ಶಾಂತಿ ಇಲ್ಲದೆ ಕಾಯಿಲೆ ಹೆಚ್ಚಾಗುತ್ತಿದೆ. ಇದರಿಂದ ದೂರ ಇರಲು ಅಧ್ಯಾತ್ಮ ಜ್ಞಾನ, ಜಪ ಹಾಗೂ ಧ್ಯಾನ ಅವಶ್ಯಕ. ಧ್ಯಾನಗಳಲ್ಲಿ ಅನೇಕ ವಿಧಗಳಿವೆ. ಅದರಲ್ಲಿ ದೀಪಧ್ಯಾನವೂ ಒಂದು. ಪ್ರಾರಂಭದಲ್ಲಿ ಮನಸ್ಸನ್ನು ಏಕಾಗ್ರತೆಗೆ ತೆಗೆದುಕೊಂಡು ಹೋಗುವುದು ಕಷ್ಟ. ಪ್ರಾಥಮಿಕ ಹಂತದ ಧ್ಯಾನಾಸಕ್ತರು ದೀಪಧ್ಯಾನ ಅಭ್ಯಾಸ ಮಾಡುವುದು ಉತ್ತಮ. ಏಕಾಗ್ರತೆಗೆ ಯಾವುದಾದರೂ ಒಂದು ವಸ್ತು ಬೇಕು. ಶ್ರೀ ರಮಣ ಮಹರ್ಷಿ ಅವರ ಬಳಿಗೆ ಒಬ್ಬ ಭಕ್ತ ಹೋಗಿ ‘ಸ್ವಾಮಿ ನನ್ನಲ್ಲಿ ಹಲವಾರು ಎಮ್ಮೆಗಳಿವೆ. ನಾನು ಧ್ಯಾನ ಮಾಡಲು ಹೋದಾಗ ನನ್ನ ಎಮ್ಮೆಗಳೇ ನನ್ನ ಮನಸ್ಸಿಗೆ ಬರುತ್ತವೆ, ಏನು ಮಾಡುವುದು?’ ಎಂದು ಕೇಳಿದಾಗ ರಮಣರು, ‘ನೀನು ಎಮ್ಮೆಯನ್ನು ಕುರಿತು ಧ್ಯಾನ ಮಾಡು, ತಪ್ಪಿಲ್ಲ’ ಎಂದರು. ಏಕೆಂದರೆ ಪ್ರತಿಯೊಂದು ವಸ್ತುವೂ ಪರಬ್ರಹ್ಮವೇ ಆಗಿದೆ. ದೀಪವು ಪ್ರತಿಯೊಬ್ಬರ ಇಷ್ಟದೇವತೆಯ ಸಂಕೇತ ಹಾಗೂ ಜ್ಞಾನದ ಸಂಕೇತ. ಈ ದೀಪಕ್ಕೆ ಜಾತಿ ಮತ ಬೇಧವಿಲ್ಲ. ಸೂರ್ಯನು ಜಾತಿ ಮತ ಬೇಧವಿಲ್ಲದೆ ಪ್ರತಿಯೊಂದರ ಮೇಲೆ ಬೆಳಕನ್ನು ಹರಿಸುವನು. ದೀಪಧ್ಯಾನದಿಂದ ನೇತ್ರಕ್ಕೆ ಏನೂ ತೊಂದರೆ ಆಗುವುದಿಲ್ಲ.

    ದೀಪಧ್ಯಾನದ ಕ್ರಮ: ಮುಖ ತೊಳೆದು ಅಥವಾ ಸ್ನಾನ ಮಾಡಿ ಪದ್ಮಾಸನದಲ್ಲಿ ಅಥವಾ ವಜ್ರಾಸನದಲ್ಲಿ ಕುಳಿತು ಉಸಿರಾಟವನ್ನು ಕ್ರಮಬದ್ಧವಾಗಿ ಮಾಡುವುದು. ಕುಳಿತ ಜಾಗದಿಂದ 6-8 ಅಡಿಗಳ ದೂರದಲ್ಲಿ ದೀಪ ಇರಲಿ. ಮನಸ್ಸನ್ನು ದೀಪದಲ್ಲಿ ಕೇಂದ್ರವಾಗಿಸಿ ಧ್ಯಾನಸ್ಥರಾಗಿ. ಧ್ಯಾನದ ಸಮಯದಲ್ಲಿ ಮನಸ್ಸು ನಿದ್ದೆಗೆ ಹೋಗದಂತೆ ನೋಡಿಕೊಳ್ಳಿ. ಆರಂಭದಲ್ಲಿ ದೀಪಧ್ಯಾನವನ್ನು ಅರ್ಧಗಂಟೆ ಮಾಡಿ, ಕ್ರಮೇಣ ಹೆಚ್ಚಿಸಿಕೊಳ್ಳಬಹುದು. ದೀಪಧ್ಯಾನಕ್ಕೆ ಸೂರ್ಯೋದಯಕ್ಕೆ ಮೊದಲು ಅಥವಾ ಸೂರ್ಯಾಸ್ತವಾದ ನಂತರ ಉತ್ತಮ.

    ಒಂದು ಗಂಟೆ ದೀಪಧ್ಯಾನ ಮಾಡಿದರೆ 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಿ. ಈ ಧ್ಯಾನಕ್ಕೆ ಸೀಮೆಎಣ್ಣೆರಹಿತ ದೀಪವನ್ನು ಉಪಯೋಗಿಸಿ. ತುಪ್ಪ, ಎಳ್ಳೆಣ್ಣೆ, ಹರಳೆಣ್ಣೆ ಹಾಕಿದ ದೀಪವು ಆರೋಗ್ಯಕ್ಕೆ ಉತ್ತಮ. ದೃಷ್ಟಿದೋಷ ಇರುವವರು ವೈದ್ಯರ ಸಲಹೆ ಪಡೆಯುವುದು ಕಡ್ಡಾಯ. ದೀಪಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಸಿಗುತ್ತದೆ. ಆರೋಗ್ಯ ಉತ್ತಮಗೊಳ್ಳುವುದು.

    ಮಾತೆ ಶಾರದಾದೇವಿ ಧ್ಯಾನದ ಬಗ್ಗೆ ಈ ರೀತಿ ಹೇಳುತ್ತಾರೆ: ‘ನಿನ್ನ ಮಾತು, ಕೃತಿ ಹಾಗೂ ಆಧ್ಯಾತ್ಮಿಕ ಸಾಧನೆಯಲ್ಲಿ ಪ್ರಾಮಾಣಿಕನಾಗಿರು. ಹಾಗಿದ್ದರೆ ನೀನು ಧನ್ಯ. ಭಗವಂತನ ಕೃಪೆ ಪ್ರಪಂಚದ ಎಲ್ಲ ಜೀವಿಗಳ ಮೇಲೆ ಯಾವಾಗಲೂ ಹರಿದು ಬರುತ್ತದೆ. ಅದಕ್ಕಾಗಿ ಪ್ರಾಮಾಣಿಕತೆಯಿಂದ ಧ್ಯಾನದ ಅಭ್ಯಾಸ ಮಾಡು. ಆಗ ದೇವರ ಅಪಾರ ಕೃಪೆ ಅರ್ಥವಾಗುವುದು’.

    ದೀಪಗಳ ವೈವಿಧ್ಯ: ಪೂಜಾ ಕಾರ್ಯ ವನ್ನು ನೆರವೇರಿಸುವ ಪ್ರಾರಂಭದಲ್ಲಿ ದೇವರ ಮುಂದೆ ದೀಪ ಹಚ್ಚುತ್ತಾರೆ. ಮುಕ್ತಾಯವೂ ಮಂಗಳಾರತಿಯಿಂದ. ಸುಮಂಗಲೆಯರು ಬೆಲ್ಲದಾರತಿ ಮಾಡಿ ಪೂಜಿಸುವರು.

    ಜಾತ್ರೆ, ಉತ್ಸವ ಸಮಾರಂಭಗಳಲ್ಲಿ ತಂಬಿಟ್ಟಿನ ಆರತಿ ಮಾಡುತ್ತಾರೆ. ಶನಿ ದೇವರಿಗೆ ಎಳ್ಳೆಣ್ಣೆ ದೀಪ ಅತಿಶ್ರೇಷ್ಠ. ಗಂಗಾನದಿಗೆ ಪ್ರತಿದಿನ ವಿವಿಧ ರೀತಿಯಲ್ಲಿ ಆರತಿಯನ್ನು ಮಾಡುತ್ತಾರೆ. ತಟ್ಟೆಗಳಲ್ಲಿ ಬಣ್ಣಬಣ್ಣದಿಂದ ರಂಗೋಲಿಯಲ್ಲಿ ಚಿತ್ರಗಳನ್ನು ಬಿಡಿಸಿ ಆರತಿಯನ್ನು ಬೆಳಗುತ್ತಾರೆ. ಕಾರ್ತಿಕ ಮಾಸದಲ್ಲಿ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ ಮನೆಯ ಮುಂದಿನ ಬಾಗಿಲು ಪಕ್ಕದಲ್ಲಿ ದೀಪ ಹಚ್ಚಿಡುತ್ತಾರೆ. ತುಳಸಿ ಹಬ್ಬದ ದಿನ ನಲ್ಲಕಾಯಿಯ ಆರತಿ ಬೆಳಗುತ್ತಾರೆ. ವ್ಯಕ್ತಿಯು ಮರಣ ಹೊಂದಿದಾಗ ಅವರ ಸಮೀಪ ದೀಪ ಹಚ್ಚುತ್ತಾರೆ. ದೀಪ ಆತ್ಮದ ಸಂಕೇತ.

    ದೀಪಕ್ಕೆ ಹಾಕುವ ಎಣ್ಣೆ ಪ್ರೀತಿಯ ಸಂಕೇತ. ಬತ್ತಿ ಕಾಯಕದ ಸಂಕೇತ. ತಾನು ಉರಿದು ಇತರರಿಗೂ ಬೆಳಕು ನೀಡುವ ದೀಪವು ನಿಷ್ಕಾಮ ಸೇವೆಯನ್ನು ಮಾಡುತ್ತದೆ. ದೀಪ ಬೆಳಗಲು ಮುಖ್ಯವಾಗಿ ಬೆಂಕಿ ಬೇಕು. ನಾನು ಎಂಬ ಸ್ವಾರ್ಥವನ್ನು ಸುಟ್ಟು ಭಸ್ಮ ಮಾಡುವ ಬೆಂಕಿಯ ಕಿಡಿ ತಾಗಿದಾಗ ಮಾತ್ರ ಅರಿವಿನ ದೀಪ ಬೆಳಗುವುದು. ಅಂದರೆ ದೀಪವು ಸೇವೆ ಮತ್ತು ತ್ಯಾಗದ ಅರಿವನ್ನು ನಮಗೆ ತೋರಿಸುತ್ತದೆ. ಒಂದು ದೀಪದಿಂದ ನೂರಾರು, ಸಾವಿರಾರು ದೀಪಗಳನ್ನು ಬೆಳಗಿಸಬಹುದು. ಹಾಗೆಯೇ ಒಬ್ಬ ಜ್ಞಾನಿಯು ನೂರಾರು, ಸಾವಿರಾರು ಅಜ್ಞಾನಿಗಳನ್ನು ಜ್ಞಾನಿಗಳನ್ನಾಗಿ ಪರಿವರ್ತಿಸಬಹುದು.

    ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ |

    ಮೃತ್ಯೋರ್ವ ಅಮೃತಂಗಮಯ ||

    (ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts