More

    ಪಂಜಾಬ್​ನಲ್ಲಿ ‘ಆಪ್’​ ಇತಿಹಾಸ ಸೃಷ್ಟಿ: ಐದೂವರೆ ತಿಂಗಳು ಗದ್ದುಗೆ ಏರಿದ್ದ ಮೊದಲ ದಲಿತ ಸಿಎಂ ರಾಜೀನಾಮೆ

    ಚಂಡೀಗಢ: ಪಂಜಾಬ್​ನ ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಮತದಾರರು ನಡೆದುಕೊಂಡಿದ್ದು, ಇದೇ ಮೊದಲ ಬಾರಿಗೆ ಆಮ್​ ಆದ್ಮಿ ಪಕ್ಷ (ಆಪ್​) ಅಧಿಕಾರದ ಗದ್ದುಗೆ ಏರಿದೆ. 1962 ರಿಂದ ಯಾವುದೇ ಪಕ್ಷವು ಪಂಜಾಬ್‌ನಲ್ಲಿ 90 ಕ್ಕಿಂತ ಹೆಚ್ಚು ಸ್ಥಾನಗಳನ್ನು ಇಲ್ಲಿ ಗೆದ್ದಿರಲಿಲ್ಲ, ಇದರಲ್ಲಿಯೂ ಇತಿಹಾಸ ಸೃಷ್ಟಿಸಿದ ಆಪ್​, 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದಿದೆ.

    ಇದರ ಬೆನ್ನಲ್ಲೇ ಹಾಲಿ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್​ನ ಮೊದಲ ದಲಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ಚನ್ನಿ ಅವರು ಕಳೆದ ಸೆಪ್ಟೆಂಬರ್​ನಲ್ಲಿ ಈ ಸ್ಥಾನಕ್ಕೆ ಏರಿದ್ದರು. ಮುಖ್ಯಮಂತ್ರಿಯಾಗಿದ್ದ ಅಮರೀಂದರ್​ ಸಿಂಗ್​ ಅವರು ಕಾಂಗ್ರೆಸ್​ ಬಗ್ಗೆ ಅಸಮಾಧಾನಪಟ್ಟುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನಕ್ಕೆ ಚನ್ನಿ ಏರಿದ್ದರು. ಆದರೆ ಅವರು ಈಗ ಹೀನಾಯ ಸೋಲು ಅನುಭವಿಸಿದ್ದಾರೆ. ಚಮ್ಕೌರ್ ಸಾಹಿಬ್ ಮತ್ತು ಭದೌರ್ ಎಂಬ ಎರಡು ಕ್ಷೇತ್ರಗಳಿಂದ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿಎಂ ಚನ್ನಿ ಎರಡೂ ಸ್ಥಾನಗಳಲ್ಲಿ ಸೋಲುಂಡಿದ್ದಾರೆ.

    ಭರ್ಜರಿ ಗೆಲುವಿನಿಂದ ಆಪ್​ ಮುಖ್ಯಮಂತ್ರಿ ಸ್ಥಾನವನ್ನು ಏರಲಿರುವ ಹಿನ್ನೆಲೆಯಲ್ಲಿ ಚನ್ನಿ ಅವರು, ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೂ ನನಗೆ ಸಂಪುಟದಲ್ಲಿ ಮುಂದುವರೆಯುವುದಾಗಿ ಅವರು ಹೇಳಿದರು.

    ಈ ನಡುವೆಯೇ ಟ್ವೀಟ್​ ಮಾಡಿರುವ ಚನ್ನಿ, “ನಾನು ಪಂಜಾಬ್ ಜನರ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಮತ್ತು ಗೆಲುವಿಗಾಗಿ ಆಮ್ ಆದ್ಮಿ ಪಾರ್ಟಿ ಮತ್ತು ಅವರ ಚುನಾಯಿತ ಮುಖ್ಯಮಂತ್ರಿ ಭಗವಂತ್ ಮಾನ್ ಜೀ ಅವರನ್ನು ಅಭಿನಂದಿಸುತ್ತೇನೆ. ಅವರು ಜನರ ನಿರೀಕ್ಷೆಯನ್ನು ಈಡೇರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

    ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ 18 ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಶಿರೋಮಣಿ ಅಕಾಲಿ ದಳ ಮೂರು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಮತ್ತು ಬಿಎಸ್‌ಪಿ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನವನ್ನು ಗೆದ್ದಿವೆ. ಪಕ್ಷೇತರರೊಬ್ಬರು ಗೆದ್ದಿದ್ದಾರೆ.

    ದೇಶದ ಮೊದಲ ಪ್ರಜೆ ಯಾರಾಗಲಿದ್ದಾರೆ? ಬಿಜೆಪಿಗೆ ಒಲಿಯಲಿದೆಯೇ ಅದೃಷ್ಟ?ಶುರುವಾಯ್ತು ಲೆಕ್ಕಾಚಾರ…

    VIDEO: ಕಿವಿ ತೆರೆದು ಕೇಳಿಸಿಕೊಳ್ಳಿ… ಮಾರ್ಚ್​ 11ರಿಂದ ನಿಮ್ಮ ಕೌಂಟ್​ಡೌನ್​ ಶುರು… ನಿಮ್ಮ ಆಟ ಕ್ಲೋಸ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts