More

    ಸಂಚಲನ ಸೃಷ್ಟಿಸಿರುವ ಪೆಗಾಸಸ್‌ ಕೇಸ್‌: ಕೇಂದ್ರಕ್ಕೆ ಹಿನ್ನಡೆ- ತನಿಖೆಗೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸಿದ ‘ಸುಪ್ರೀಂ’

    ನವದೆಹಲಿ: ದೇಶದಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ಇಸ್ರೇಲ್ ಮೂಲದ ಪೆಗಾಸಸ್​ ಆ್ಯಪ್​ ಮೇಲೆ ಗೂಢಚಾರಿಕೆ ಆರೋಪ ಪ್ರಕರಣ ಕುರಿತ ವಿಚಾರಣೆಗೆ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸುವಂತೆ ಸು‍ಪ್ರೀಂಕೋರ್ಟ್‌ ಆದೇಶಿಸಿದೆ.

    ಇದರ ತನಿಖೆಗೆ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ತನಿಖಾ ಸಂಸ್ಥೆಯನ್ನು ರಚಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್‌ ಮಾನ್ಯ ಮಾಡಿದೆ. ಇದರಿಂದಾಗಿ ಅರ್ಜಿ ವಜಾಮಾಡುವಂತೆ ಕೋರಿದ್ದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇದು ದೇಶದ ಭದ್ರತೆಗೆ ಸಂಬಂಧಿಸಿದ ನಾಜೂಕಿನ ವಿಷಯ. ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಸರ್ಕಾರ ಯಾವ ಸಾಫ್ಟ್‌ವೇರ್‌ ಬಳಸುತ್ತಿದೆ ಎಂದು ಹೇಳುವುದು ಅಸಾಧ್ಯ ಎಂದು ಕೇಂದ್ರದ ವಾದವಾಗಿತ್ತು. ಆದರೆ ಈ ವಾದವನ್ನು ಕೋರ್ಟ್ ಮಾನ್ಯ ಮಾಡಲಿಲ್ಲ.

    ‘ಪೆಗಾಸಸ್ ತಂತ್ರಾಂಶ ಬಳಸಿ ಗೂಢಚಾರಿಕೆ ಪ್ರಕರಣದಲ್ಲಿ ಕಾನೂನು ಎತ್ತಿ ಹಿಡಿಯುವುದೇ ನಮ್ಮ ಉದ್ದೇಶ. ಪ್ರತಿಯೊಬ್ಬ ಭಾರತೀಯನಿಗೂ ಖಾಸಗಿತನದ ರಕ್ಷಣೆ ನೀಡಬೇಕು. ನಾವು ಮಾಹಿತಿಯ ಯುಗದಲ್ಲಿ ಬದುಕುತ್ತಿದ್ದೇವೆ. ರಾಜಕೀಯ ಚರ್ಚೆಗೆ ಹೋಗದೇ ಮೌಲ್ಯ ಎತ್ತಿ ಹಿಡಿಯಲು ಶ್ರಮಪಡಬೇಕು’ ಎಂದು ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠ ಆದೇಶಿಸಿದೆ.

    ಈ ಕುರಿತ ತನಿಖೆಗೆ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ನೇತೃತ್ವದಲ್ಲಿ ಮೂವರು ತಜ್ಞರ ಸಮಿತಿಯನ್ನು ಕೋರ್ಟ್‌ ರಚಿಸಿದೆ. ಅಲೋಕ್ ಜೋಷಿ ಮತ್ತು ಸಂದೀಪ್ ಒಬೇರಾಯ್ ಈ ಸಮಿತಿಯ ಸದಸ್ಯರಾಗಿರಲಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, 8 ವಾರಗಳಲ್ಲಿ ವರದಿ ನೀಡುವಂತೆ ಕೋರ್ಟ್‌ ಹೇಳಿದೆ.

    ಈ ತೀರ್ಪಿನಲ್ಲಿ ನಾವು ಖಾಸಗಿತನದ ಹಕ್ಕಿನ ಬಗ್ಗೆ ಚರ್ಚಿಸಿದ್ದೇವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭಾರಿ ಪರಿಣಾಮ ಬೀರುತ್ತೆ. ಶಾಸನದ ಮಾನ್ಯತೆ ಇಲ್ಲದೇ ಖಾಸಗಿತನದ ಹಕ್ಕಿನಲ್ಲಿ ಮೂಗುತೂರಿಸುವಿಕೆಗೆ ಅವಕಾಶವಿಲ್ಲ ಎಂದು ಕೋರ್ಟ್‌ ಹೇಳಿದೆ.

    ಏನಿದು ಪೆಗಾಸಸ್‌ ಕೇಸ್‌?
    ಇಸ್ರೇಲ್‌ ಮೂಲದ ಸ್ಪೈವೇರ್ ಬಳಸಿ 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳ ಮೊಬೈಲ್‌ ಫೋನ್‌ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂಬ ವಿಸ್ತೃತ ಸರಣಿ ವರದಿಗಳನ್ನು ‘ದಿ ವೈರ್’ ಪ್ರಕಟಿಸಿತ್ತು. ಪೆಗಾಸಸ್‌ ಸ್ಪೈ ವೇರ್‌ ಬಳಸಿಕೊಂಡು ಅಪರಿಚಿತ ಏಜೆನ್ಸಿಯೊಂದು ಯಶಸ್ವಿಯಾಗಿ ಹ್ಯಾಕ್ ಮಾಡಲಾಗಿದೆ ಎಂದು ಈ ವರದಿ ಹೇಳಿತ್ತು. 40 ಪತ್ರಕರ್ತರು, ಮೂವರು ವಿರೋಧ ಪಕ್ಷದ ನಾಯಕರು, ಓರ್ವ ಸಾಂವಿಧಾನಿಕ ಅಧಿಕಾರಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಇಬ್ಬರು ಹಾಲಿ ಸಚಿವರು, ರಕ್ಷಣಾ ಪಡೆಗಳು ಹಾಲಿ ಮತ್ತು ಮಾಜಿ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಮತ್ತು ಕೆಲ ಉದ್ಯಮಿಗಳು ಸೇರಿದಂತೆ ಹಲವರ ಮೇಲೆ ಪೆಗಾಸಸ್​ ಸಾಫ್ಟ್​ವೇರ್​ ಮೂಲಕ ಹ್ಯಾಕ್​ ಮಾಡಲಾಗಿದೆ ಎಂದು ಅದರಲ್ಲಿ ವರದಿಯಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಹೆಸರನ್ನು ಸಹ ಪ್ರಕಟಿಸುವುದಾಗಿ ತಿಳಿಸಿತ್ತು.

    ಆದರೆ, ಈ ವರದಿಗಳನ್ನು ಭಾರತ ಸರ್ಕಾರ ತಳ್ಳಿಹಾಕಿದ್ದು, ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಕೆಡಿಸುವ ಊಹೆಗಳು ಮತ್ತು ಉತ್ಪ್ರೇಕ್ಷೆಗಳ ಆಧಾರದ ಮೇಲೆ ವರದಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು. ಆದ್ದರಿಂದ ಸುಪ್ರೀಂಕೋರ್ಟ್‌ನಲ್ಲಿ ಕೂಡ ತನಿಖೆ ಅಗತ್ಯವಿಲ್ಲ ಎಂದು ಕೇಂದ್ರ ಹೇಳಿತ್ತು.
    ಪೆಗಾಸಸ್​ ಒಮ್ಮೆ ಫೋನ್​ನಲ್ಲಿ ಇನ್​ಸ್ಟಾಲ್​ ಆದರೆ, ಬಳಕೆದಾರರ ಸಂಪೂರ್ಣ ಮಾಹಿತಿಯನ್ನು ಬೇಹುಗಾರಿಕೆ ಮಾಡುತ್ತದೆ. ವಾಟ್ಸ್​ಆ್ಯಪ್​ನಲ್ಲಿ ಮಾಡಿದ ಸಂಪೂರ್ಣ ಚಾಟ್ಸ್​ ಅನ್ನು ಪೆಗಾಸಸ್​ ಎನ್‌ಕ್ರಿಪ್ಟ್ ಮಾಡುತ್ತದೆ. ಮಸೇಜ್​ ರೀಡಿಂಗ್​, ಕಾಲ್​ ಟ್ರ್ಯಾಕಿಂಗ್​, ಬಳಕೆದಾರರ ಚಟುವಟಿಕೆ ಮೇಲೆ ನಿಗಾ ಇಡುತ್ತದೆ. ಅಲ್ಲದೆ, ಸ್ಥಳದ ಮಾಹಿತಿಯನ್ನು ಕಲೆಹಾಕುತ್ತದೆ. ಫೋನ್​ನಲ್ಲಿರುವ ಕ್ಯಾಮೆರಾ ವಿಡಿಯೋಗಳನ್ನು ಲಭ್ಯವಾಗುವಂತೆ ಮಾಡುತ್ತದೆ ಮತ್ತು ಮೈಕ್ರೋಫೋನ್​ ಮೂಲಕ ಫೋನ್​ನ ಎಲ್ಲ ಚಟುವಟಿಕೆಯನ್ನು ತಿಳಿಸುತ್ತದೆ.

    ಪೆಗಾಸಸ್​ ಫೋನ್​ ಹ್ಯಾಕ್​ ಮಾಡುವುದು ಹೇಗೆ?
    ಪೆಗಾಸಸ್​ ದಾಳಿ ಮಾಡುವುದು ಕಣ್ಣಿಗೆ ಕಾಣುವುದಿಲ್ಲ. ತನ್ನ ಫೋನ್​ ಪೆಗಾಸಸ್​ನೊಂದಿಗೆ ರಾಜಿ ಮಾಡಿಕೊಂಡಿದೆ ಎಂಬ ಸಣ್ಣ ಸುಳಿವು ಕೂಡ ಬಳಕೆದಾರರಿಗೆ ತಿಳಿದಿರುವುದಿಲ್ಲ. ಯಾವ ಫೋನ್​ಗೆ ಹ್ಯಾಕ್​ ಮಾಡಬೇಕೆಂದು ಹ್ಯಾಕರ್​ ನಿರ್ಧರಿಸುತ್ತಾನೋ, ಆ ಫೋನ್​ಗೆ ಮೊದಲು ದುರುದ್ದೇಶಪೂರಿತ ವೆಬ್‌ಸೈಟ್ ಲಿಂಕ್​ ಅನ್ನು ಕಳುಹಿಸಲಾಗುತ್ತದೆ. ಬಳಕೆದಾರ ಲಿಂಕ್​ ಅನ್ನು ಕ್ಲಿಕ್​ ಮಾಡಿದಾಗ ಗೊತ್ತಿಲ್ಲದಂತೆ ಪೆಗಾಸಸ್​ ಆತನ ಮೊಬೈಲ್​ನಲ್ಲಿ ಇನ್​ಸ್ಟಾಲ್​ ಆಗುತ್ತದೆ. ಇಷ್ಟೇ ಅಲ್ಲದೆ, ವಾಟ್ಸ್​ಆ್ಯಪ್​ನಂತಹ ಆ್ಯಪ್​ಗಳ ಮೂಲಕ ವಾಯ್ಸ್​ ಕಾಲ್​ನಲ್ಲಿರುವ ಸೆಕ್ಯೂಟಿರಿ ಬಗ್​ ಮೂಲಕವು ಇನ್​ಸ್ಟಾಲ್​ ಮಾಡಲಾಗುತ್ತದೆ. ಅಲ್ಲದೆ, ಕೇವಲ ಮಿಸ್​ ಕಾಲ್​ ಕೊಡುವ ಮೂಲಕವೂ ಸಾಫ್ಟ್​ವೇರ್​ ಇನ್​ಸ್ಟಾಲ್​ ಮಾಡಬಹುದಾಗಿದೆ. ಒಂದು ಸಲ ಆ್ಯಪ್​ ಇನ್​​ಸ್ಟಾಲ್​ ಆದರೆ, ಕಾಲ್​ ಲಾಗ್​ನಲ್ಲಿರುವ ನಂಬರ್​ ಅನ್ನು ಡಿಲೀಟ್​​ ಮಾಡುತ್ತದೆ. ಇದರಿಂದ ಬಳಕೆದಾರರಿಗೆ ಮಿಸ್​ ಕಾಲ್​ ಬಂದಿರುವುದೇ ಗೊತ್ತಾಗುವುದಿಲ್ಲ.

    ಉದ್ಯೋಗ ಕೊಡಿಸುವ ನೆಪದಲ್ಲಿ ಅತ್ಯಾಚಾರ ಆರೋಪ: ಸ್ಯಾಂಡಲ್‌ವುಡ್‌ ನಟ ಶೇಷಗಿರಿ ಅರೆಸ್ಟ್‌

    ಉದ್ಯೋಗ ಪಡೆಯಲು ಲಕ್ಷಲಕ್ಷ ಲಂಚ ಕೊಡ್ತೀರಾ? ನೇಮಕಾತಿ ಪತ್ರ ಹಿಡಿದು ಹೋದವರಿಗೆ ಏನ್‌ ಗತಿಯಾಯ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts