More

    ಗುತ್ತಿಗೆ ನೌಕರರ ಬೇಡಿಕೆ ಪರಿಶೀಲನೆಗೆ ಸಮಿತಿ

    ಸಾಗರ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಒಳ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆ ಪರಿಶೀಲಿಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದ್ದು ಜೂ.17ರಂದು ಬೆಂಗಳೂರಲ್ಲಿ ಸಭೆ ನಡೆಯಲಿದೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದರು.

    ನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಳ, ಹೊರಗುತ್ತಿಗೆ ನೌಕರರ ಸಾಗರ ಶಾಖೆ ಆಯೋಜಿಸಿದ್ದ ಉಪವಿಭಾಗೀಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 32 ಸಾವಿರ ನೌಕರರಿದ್ದು ಇತಿಹಾಸದಲ್ಲಿ ಮೊದಲ ಬಾರಿಗೆ ನಿಮ್ಮ ಬೇಡಿಕೆ ಆಲಿಸಲು ಸರ್ಕಾರ ಸಮಿತಿ ರಚಿಸಿದೆ ಎಂದರು.

    ಉಳುವವನಿಗೆ ಭೂಮಿ ಎನ್ನುವ ತತ್ವವನ್ನು ಸಾಗರ ಪ್ರತಿಪಾದಿಸಿದೆ. ಈಗ ಅದೇ ನೆಲದಲ್ಲಿ ಒಳಗುತ್ತಿಗೆ ಹಾಗೂ ಹೊರಗುತ್ತಿಗೆ ಕೆಲಸ ಮಾಡುತ್ತಿರುವವರಿಗೆ ನೌಕರಿ ಕಾಯಂಗೊಳಿಸಿ ಎನ್ನುವ ಘೊಷಣೆ ಮೊಳಗಿಸಿದ್ದೀರಿ. ಹೋರಾಟದ ನೆಲೆಯಿಂದ ಮುಖ್ಯಮಂತ್ರಿ ಸ್ಥಾನದವರೆಗೂ ಏರಿರುವ ಯಡಿಯೂರಪ್ಪ ಅವರು ನಿಮ್ಮ ಭರವಸೆ ಈಡೇರಿಸುವ ವಿಶ್ವಾಸವಿದೆ ಎಂದು ಹೇಳಿದರು.

    ಅಧ್ಯಯನ ಸಮಿತಿ ಸಭೆಯಲ್ಲಿ ನಿಮ್ಮ ಪರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದಾಗ ವಿಧಾನಪರಿಷತ್​ನಲ್ಲಿ ನಾನು ಮತ್ತು ವಿಧಾನಸಭೆಯಲ್ಲಿ ಶಾಸಕ ಹರತಾಳು ಹಾಲಪ್ಪ ಸೇರಿ ಎಲ್ಲ ಶಾಸಕರು ಧ್ವನಿ ಎತ್ತಿದ್ದಾರೆ. ವರದಿಯ ಅಂಶಗಳ ಅನುಷ್ಠಾನಕ್ಕೆ ಒತ್ತಾಯಿಸುತ್ತೇವೆ ಎಂದರು.

    ನಿಮ್ಮ 14 ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಬೇಡಿಕೆ ಈಡೇರದಿದ್ದಲ್ಲಿ ಪ್ರತಿಭಟನೆ ಅನಿವಾರ್ಯ. ಆದರೆ ಯಡಿಯೂರಪ್ಪ ಅವರು ಇದಕ್ಕೆ ಅವಕಾಶ ಕೊಡಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು.

    ಶಾಸಕ ಹರತಾಳು ಹಾಲಪ್ಪ ಮಾತನಾಡಿ, ನಿಮ್ಮ ಬೇಡಿಕೆ ನ್ಯಾಯಯುತವಾಗಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾಭದ್ರತೆ ನೀಡಲು ನಾನೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಹಿಂದಿನಿಂದಲೂ ನಾನು ಆರೋಗ್ಯ ಇಲಾಖೆಯನ್ನು ಬೆಂಬಲಿಸಿದ್ದೇನೆ. ನಿಮ್ಮ ಅಗತ್ಯ ಏನೆಂಬುದನ್ನು ಕರೊನಾ ಸಂದರ್ಭದಲ್ಲಿ ಇಡೀ ದೇಶಕ್ಕೆ ಮನವರಿಕೆ ಮಾಡಿಕೊಟ್ಟಿದ್ದೀರಿ ಎಂದರು.

    ಸಂಘದ ತಾಲೂಕು ಅಧ್ಯಕ್ಷ ಡಿ.ವಿನೋದ್​ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಎಚ್.ವೈ.ವಿಶ್ವಾರಾಧ್ಯ, ಜಿಲ್ಲಾಧ್ಯಕ್ಷೆ ಡಾ. ಹೇಮಲತಾ, ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ, ಟಿಎಚ್​ಒ ಡಾ. ಕೆ.ಎಸ್.ಮೋಹನ್, ವೈ.ಮೋಹನ್, ಶಶಿಕುಮಾರ್, ಸೌಮ್ಯಾ ಹೆಬ್ಬಾರ್, ಹಸೀನಾ ಅಜೀಂ, ರಮ್ಯಾ ಹೆಗಡೆ, ಕೆ.ಆರ್.ಅವಿನಾಶ್, ಮ.ಸ.ನಂಜುಂಡಸ್ವಾಮಿ, ತೌಫಿಕ್, ಕೆ.ಎನ್.ರಾಘವೇಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts