More

    ಮಾದರಿ ನೆಹರು ಕ್ರೀಡಾಂಗಣ ನಿರ್ಮಾಣ

    ಶಿವಮೊಗ್ಗ: ನೆಹರು ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣವನ್ನು ದೇಶದ ಮಾದರಿ ಕ್ರೀಡಾಂಗಣಗಳಲ್ಲೊಂದಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಗುರುವಾರ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಬಳಿಕ ಮಾತನಾಡಿ, ಜಿಲ್ಲಾಡಳಿತ, ಸ್ಮಾರ್ಟ್​ಸಿಟಿ ಯೋಜನೆ ನಿರ್ದೇಶಕರು ಹಾಗೂ ಕ್ರೀಡಾಸಂಸ್ಥೆಗಳ ಪ್ರತಿನಿಧಿಗಳ ಸಲಹೆ ಪಡೆದು ಸ್ಮಾರ್ಟ್​ಸಿಟಿ ಯೋಜನೆಯಡಿ ವಿವಿಧ ಹಂತಗಳಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಉದ್ದೇಶಿತ ಕಾಮಗಾರಿಗಳು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದರು.

    ನಿರೀಕ್ಷೆಯಂತೆ ಎಲ್ಲ ಕೆಲಸ ಪೂರ್ಣಗೊಂಡ ನಂತರ ಕ್ರೀಡಾಂಗಣದ ಉಸ್ತುವಾರಿ, ನಿರ್ವಹಣೆ ಹಾಗೂ ಮೇಲ್ವಿಚಾರಣೆಗೆ ಅಧಿಕಾರಿಗಳು, ಕ್ರೀಡಾಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಆಸಕ್ತ ಸಾರ್ವಜನಿಕರ ಸಮಿತಿ ರಚಿಸಲು ಉದ್ದೇಶಿಸಲಾಗಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

    ಈ ಸಮಿತಿ ನಿರ್ವಹಣೆಯ ಖರ್ಚು ವೆಚ್ಚ ಹಾಗೂ ಆಗಾಗ್ಗೆ ಬರುವ ಸಮಸ್ಯೆಗಳು, ಅನುದಾನ ಹಾಗೂ ಶಾಶ್ವತ ನಿರ್ವಹಣೆ ಕುರಿತು ಅಗತ್ಯ ನಿರ್ಣಯ ಕೈಗೊಳ್ಳಲಿದೆ ಎಂದರು.

    ಯುವ ಕ್ರೀಡಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಲಕ-ಬಾಲಕಿಯರಿಗಾಗಿ ಪ್ರತ್ಯೇಕ ವಸತಿ ನಿಲಯ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದೆ. ಸ್ಮಾರ್ಟ್​ಸಿಟಿಯಂತೆಯೇ ಸ್ಮಾರ್ಟ್ ಕ್ರೀಡಾಂಗಣವೂ ಆಗಲಿದೆ. ತಜ್ಞರ ಅಭಿಪ್ರಾಯ ಪಡೆದು ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್ ಟ್ರ್ಯಾಕ್ ಅಭಿವೃದ್ಧಿಪಡಿಸಲಾಗುವುದು ಎಂದರು.

    ಅಂತಾರಾಷ್ಟ್ರೀಯ ಮಟ್ಟದ ಸಿಂಥೆಟಿಕ್ ಟ್ರ್ಯಾಕ್: ಒಳಾಂಗಣ ಕ್ರೀಡಾಂಗಣದಲ್ಲಿ ಆರು ಷಟಲ್​ಬ್ಯಾಡ್ಮಿಂಟನ್ ಅಂಕಗಳಿದ್ದು, ಅವುಗಳಲ್ಲಿ ಎರಡು ಸಿಂಥೆಟಿಕ್ ಟ್ರ್ಯಾಕ್ ನಿರ್ವಿುಸಲು ಉದ್ದೇಶಿಸಲಾಗಿದೆ. ಹ್ಯಾಂಡ್​ಬಾಲ್, ಫುಟ್​ಬಾಲ್, ಕಬಡ್ಡಿ, ಹಾಕಿ ಕೋರ್ಟ್, ವಾಕಿಂಗ್ ಟ್ರ್ಯಾಕ್ ನಿರ್ವಿುಸಲು ಯೋಜಿಸಲಾಗಿದೆ. ಈ ಎಲ್ಲ ಕಾಮಗಾರಿಗಳು ಮುಂದಿನ 2-3 ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

    ಡಿಸಿ ಕೆ.ಬಿ.ಶಿವಕುಮಾರ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಯುವ ಸಬಲೀಕರಣ ಕ್ರೀಡಾ ಇಲಾಖೆ ನಿರ್ದೇಶಕ ಮಂಜುನಾಥ್, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್ ಜ್ಯೋತಿಪ್ರಕಾಶ್, ದಿವಾಕರಶೆಟ್ಟಿ, ಬಳ್ಳೆಕೆರೆ ಸಂತೋಷ್, ಮಾಲತೇಶ್ ಸೇರಿ ಕ್ರೀಡಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಕೋಚ್​ಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts