More

    ಅಣ್ಣ-ಅತ್ತಿಗೆ ಅಮ್ಮನ ಸರಿಯಾಗಿ ನೋಡಿಕೊಳ್ತಿಲ್ಲ… ಪ್ಲೀಸ್​ ಕಾನೂನಿನಡಿ ಪರಿಹಾರ ಹೇಳಿ…

    ಅಣ್ಣ-ಅತ್ತಿಗೆ ಅಮ್ಮನ ಸರಿಯಾಗಿ ನೋಡಿಕೊಳ್ತಿಲ್ಲ... ಪ್ಲೀಸ್​ ಕಾನೂನಿನಡಿ ಪರಿಹಾರ ಹೇಳಿ... ಪ್ರಶ್ನೆ: ಮೇಡಂ ನನ್ನ ಕುಟುಂಬದಲ್ಲಿ ಅಮ್ಮ ಅಪ್ಪ ಅಣ್ಣಾ ನಾನು. ನನ್ನ ಮದ್ವೆ ಆಗಿದೆ, ಅಣ್ಣನ ಮದುವೆ ಕೂಡ ಆಗಿದೆ. ನನ್ನ ತಾಯಿ ಮಾತ್ರಾ ಮನೇಲಿ ದುಡಿಯೋದು ಅಂದ್ರೆ ಕೂಲಿ ಕೆಲಸ ಮಾಡ್ತಾರೆ. ಅಪ್ಪ ವಯಸ್ಸಾಗಿದೆ ಹಾಗಾಗಿ ಮನೇಲಿ ಇರ್ತಾರೆ. ಅಣ್ಣಾ ಗದ್ದೆ ಕೆಲಸ ಮಾಡ್ತಾರೆ. ಗದ್ದೆ ಕೆಲಸ ಬಿಟ್ಟು ಮತ್ತೆ ಯಾವ ಕೆಲಸಕ್ಕೂ ಹೋಗೋದಿಲ್ಲಾ.
    ಅಮ್ಮ ದುಡದಿರೋ ದುಡ್ಡಿನಲ್ಲೇ ಪ್ರತಿ ವಾರ ಸಂತೆ ಮನೆ ತಿನಿಸು ಎಲ್ಲದನ್ನು ತರೋದು. ಅಣ್ಣನ ಮದುವೆಗೆ ಸಂಘದಲ್ಲಿ ಸಾಲ ಮಾಡಿದ್ದಾರೆ ಅದನ್ನ ಪ್ರತಿ ವಾರ ಅಮ್ಮನೇ ತುಂಬೋದು. ಆದ್ರೂ ಮನೇಲಿ ಸೊಸೆ ಅಣ್ಣಾ ಅಮ್ಮನಿಗೆ ಬೈತಾರೆ. ಅಪ್ಪ ಯಾರಿಗೂ ಏನು ಹೇಳೋದಿಲ್ಲ.

    ಸೊಸೆ ಅಮ್ಮನಿಗೆ ಊಟ ಟೀ ಏನು ಕೊಡೋದಿಲ್ಲ. ಅಪ್ಪ ಅಣ್ಣಾ ಕೂಡ ಸೊಸೆಗೆ ಏನು ಹೇಳೋದಿಲ್ಲ. ನಾನು ಅಂದ್ರೆ ಮಗಳು, ತುಂಬಾ ದೂರ ಇದ್ದೇನೆ ನನ್ನ ಗಂಡ ಆರ್ಮಿ ಅವ್ರ ಜೊತೆ ಬೇರೆ ರಾಜ್ಯಕ್ಕೆ ಬಂದಿದ್ದೇನೆ. ಅಮ್ಮನಿಂಗೆ ಹೇಗೆ ಅವರೆಲ್ಲ ಚೆನ್ನಾಗಿ ನೋಡಿಕೊಳ್ಳೋ ಹಾಗೆ ಮಾಡಬೇಕು. ನಂಗೆ ಸರಿಯಾದ ಮಾರ್ಗದರ್ಶನ ಕೊಡಿ ಮೇಡಂ.

    ಉತ್ತರ: ಮನುಷ್ಯನ ದೈನಂದಿನ ಸ್ವಭಾವ ಹಾಗು ಸಂದರ್ಭಾಧಾರಿತ ವರ್ತನೆಗಳನ್ನು ಕಾನೂನಿನ ಮೂಲಕ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಕಾನೂನಿನ ಮೂಲಕ ಕೌಟುಂಬಿಕ ವ್ಯವಸ್ಥೆಗೆ ಸೇರಿದ ವಿಷಯಗಳ ಬಗ್ಗೆ ಒಬ್ಬರ ನಿರೀಕ್ಷೆಗಳನ್ನು ಮತ್ತೊಬ್ಬರು ಈಡೇರಿಸುವಂತೆ ಪ್ರತಿ ದಿನವೂ ನೋಡಿಕೊಳ್ಳಲು ಆಗುವುದಿಲ್ಲ.

    ನಿಮ್ಮ ತಾಯಿಗೆ ಅವರ ಮಗ ಸೊಸೆಯಿಂದ ಮಾನಸಿಕ ಕ್ರೂರತೆ ಹೆಚ್ಚಾಗಿದೆ ಎನ್ನಿಸಿದರೆ ಆಕೆ ತನ್ನ ಮಗನ ಮನೆಯಿಂದ ಬೇರೆ ಬಂದು ವಾಸಮಾಡಬಹುದು. ತನ್ನ ಸಂಪಾನೆಯಲ್ಲಿ ತಾನು ಪ್ರತ್ಯೇಕವಾಗಿ ಇರಬಹುದು. ಅಥವಾ ವಯಸ್ಸಾಗಿದೆ, ತಾನು ಇನ್ನು ಸಂಪಾದಿಸುವುದಿಲ್ಲ ಎಂದು ನಿರ್ಧಾರ ಮಾಡಿದರೆ , ಆಗ ಆಕೆ ತನ್ನ ಮಗನ ವಿರುದ್ಧ ಜೀವನಾಂಶಕ್ಕೂ ಪ್ರಕರಣ ದಾಖಲಿಸಬಹುದು. ಗದ್ದೆ ನಿಮ್ಮ ತಂದೆಯದಾದರೆ, ಅವರು ಅದನ್ನು ಮಾರಿ ತಾನು ಮತ್ತು ತನ್ನ ಹೆಂಡತಿ ಪ್ರತ್ಯೇಕವಾಗಿ ಇರುತ್ತೇವೆ ಎನ್ನುವ ನಿರ್ಧಾರವನ್ನು ಮಾಡಬಹುದು.

    ಸೊಸೆಯಿಂದ ತನ್ನ ಕನಿಷ್ಠ ನಿರೀಕ್ಷೆಗಳು ಈಡೇರಲಿ ಎನ್ನುವುದು ನಿಮ್ಮ ತಾಯಿಯ ಸಣ್ಣ ಕೋರಿಕೆಯೇ ಆದರೂ, ಅವರಿಗೆ ತಮ್ಮ ಸೊಸೆಯನ್ನು ಈ ವಿಷಯದಲ್ಲಿ ಒತ್ತಾಯ ಮಾಡುವ ಹಕ್ಕು ಇರುವುದಿಲ್ಲ. ಒಂದು ವೇಳೆ ನಿಮ್ಮ ತಂದೆಗೆ ನಿಮ್ಮ ತಾಯಿಯನ್ನು ಪೋಷಿಸುವ ಶಕ್ತಿ ಇಲ್ಲದೇ ಹೋದರೆ, ನಿಮ್ಮ ತಾಯಿಗೆ ನಿಮ್ಮ ತಮ್ಮ ಜೀವನಾಂಶ ಕೊಡುವಂತೆ ನ್ಯಾಯಾಲಯ ಆದೇಶವನ್ನೂ ಮಾಡಬಹುದು.

    ಆದರೆ ಇದರಿಂದ ಸಬಂಧಗಳು ಇನ್ನೂ ಹರಿದುಹೋಗುವ ಸಂಭವಗಳು ಹೆಚ್ಚು. ಅದಕ್ಕೆ ಬದಲಿಗೆ ನಿಮ್ಮ ತಾಯಿಯವರು ತಮ್ಮ ತಾಲ್ಲೂಕಿನ ಕಾನೂನು ಸೇವಾ ಕೇಂದ್ರಕ್ಕೆ ಹೋಗಿ ಒಂದು ಅರ್ಜಿ ಕೊಡಲಿ. ತನಗೂ ತನ್ನ ಮಗನಿಗೂ ಸೊಸೆಗೂ ಮಧ್ಯೆ ಇರುವ ಸಮಸ್ಯೆಯನ್ನು ಪರಿಹರಿಸಿಕೊಡಬೇಕು ಎಂದು ಅರ್ಜಿಯಲ್ಲಿ ಕೇಳಿಕೊಳ್ಳಲಿ. ಕೇಂದ್ರದವರು ನಿಮ್ಮ ತಮ್ಮ ಮತ್ತು ಆತನ ಹೆಂಡತಿಯನ್ನೂ ಕರೆಯಿಸಿ ಮಾತಾಡುತ್ತಾರೆ.

    ಸಂಧಾನಕಾರರ ನೇತೃತ್ವದಲ್ಲಿ ಮಾತಾಡಿದಾಗ ನಿಮ್ಮ ತಮ್ಮ ಮತ್ತು ಆತನ ಪತ್ನಿಯ ವರ್ತನೆಯಲ್ಲಿ ಪರಿವರ್ತನೆಯಾಗಬಹುದು. ಅದರಿಂದ ಪ್ರಯೋಜನ ಆಗದಿದ್ದರೆ ಆಗ ನಿಮ್ಮ ತಾಯಿ ಕಾನೂನು ಕ್ರಮ ಕೈಗೆತ್ತಿಕೊಳ್ಳಲಿ.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

    ಮಕ್ಕಳು ನೋಡಿಕೊಳ್ಳದಿದ್ರೆ ಪಿತ್ರಾರ್ಜಿತ ಆಸ್ತಿ ಮಾರಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts