More

    ಸರ್ಕಾರಿ ಉದ್ಯೋಗ ಇಟ್ಟುಕೊಳ್ಳಲೊ? ಪ್ರಿಯಕರನ ಹಿಂದೆ ಹೋಗಲೊ? ಮನಸ್ಸು ಗೊಂದಲದ ಗೂಡಾಗಿದೆ…

    ಸರ್ಕಾರಿ ಉದ್ಯೋಗ ಇಟ್ಟುಕೊಳ್ಳಲೊ? ಪ್ರಿಯಕರನ ಹಿಂದೆ ಹೋಗಲೊ? ಮನಸ್ಸು ಗೊಂದಲದ ಗೂಡಾಗಿದೆ...ನಾನು ಹಿಂದಿ ಬಿಎಡ್ ಮತ್ತು ಡಿಎಡ್ ಮಾಡಿ ಈಗ ಅಂತಿಮ ಬಿಎ ಓದುತ್ತಿದ್ದೇನೆ. ಈಗಾಗಲೇ ಸರ್ಕಾರಿ ಎಂಟ್ರೆನ್ಸ್ ಪರೀಕ್ಷೆ ಪಾಸು ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗಿದ್ದೇನೆ. ನನ್ನ ದೂರದ ಸಂಬಂಧಿ ಅತ್ತೆಯ ಮಗನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಆತ ಸಹ ಬಹಳ ಬುದ್ಧಿವಂತ. ಆದರೆ ಅವರಿಗೆ ನನ್ನಂತೆ ಸರ್ಕಾರಿ ಕೆಲಸ ಸಿಕ್ಕಿಲ್ಲ. ಇದೊಂದೇ ಕಾರಣಕ್ಕೆ ನನ್ನ ಹೆತ್ತವರು ಮತ್ತು ಅಣ್ಣ ನಮ್ಮ ಮದುವೆಗೆ ಒಪ್ಪುತ್ತಿಲ್ಲ.

    ನಾನು ಪ್ರೀತಿಸುವ ಹುಡುಗ ಒಂದು ದೊಡ್ಡ ಮನೆಯನ್ನು ಕಟ್ಟುತ್ತಿದ್ದಾರೆ. ಅದಕ್ಕೆ ಅವರ ಡಾಕ್ಟರ್ ಚಿಕ್ಕಪ್ಪ ಹಣ ಸಹಾಯ ಮಾಡುತ್ತಿದ್ದಾರೆ. ಅವರು ಸಹ ‘ನಾವು ಹೇಳಿದ ಹುಡುಗಿಯನ್ನು ಮದುವೆಯಾದರೆ ಮಾತ್ರ ಮನೆ ಕಟ್ಟಲು ಹಣ ಕೊಡುತ್ತೇನೆ’ ಎನ್ನುತ್ತಿದ್ದಾರಂತೆ. ಈ ಮಧ್ಯೆ ನನ್ನ ಹುಡುಗ ‘ನಾವು ಎಲ್ಲಾದರೂ ಹೋಗಿ ಮದುವೆಯಾಗೋಣ, ನೀನು ಕೆಲಸ ಬಿಟ್ಟುಬಿಡು’ ಎನ್ನುತ್ತಿದ್ದಾರೆ. ನಾನು ಇಷ್ಟೆಲ್ಲ ಕಷ್ಟಪಟ್ಟು ಗಳಿಸಿರುವ ಕೆಲಸವನ್ನು ಹೇಗೆ ಮೇಡಂ ಬಿಟ್ಟುಬಿಡುವುದು? ನಮ್ಮಿಬ್ಬರ ಬದುಕಿಗೆ ಹೀಗೆ ಎಲ್ಲಾ ಕಡೆಯಿಂದಲೂ ಒತ್ತಡಗಳೇ ಬರುತ್ತಿವೆಯಲ್ಲ ಹೇಗೆ ನಿಭಾಯಿಸುವುದು?

    ಉತ್ತರ: ನಿಮ್ಮ ಪತ್ರದಲ್ಲಿ ಮೂರೂ ಸಮಸ್ಯೆಗಳನ್ನು ಗಮನಿಸಿದ್ದೇನೆ. ನಿಮ್ಮ ಮದುವೆಗೆ ‘ಜಾತಿ’ ಅಡ್ಡಬರುತ್ತಿಲ್ಲ. ನಿಮ್ಮ ಮತ್ತು
    ಹುಡುಗನ ಕುಟುಂಬದ ಹಠ ಅಡ್ಡಬರುತ್ತಿದೆ. ಇಂಥ ಕುಟುಂಬದ ಹುಡುಗನನ್ನು ಪ್ರೀತಿಸುವಾಗ ನೀವಿಬ್ಬರು ಮಾನಸಿಕವಾಗಿ ‘ಗಟ್ಟಿ’ ಯಾಗಿರಬೇಕಿತ್ತಲ್ಲವೇ?

    ‘ನನ್ನ ಹುಡುಗನ ಮನೆಯವರು ಬಡವರಲ್ಲ’ ಎನ್ನುತ್ತೀರಿ . ಆದರೆ ನಿಮ್ಮ ಹೆತ್ತವರು ಕೇವಲ ಸರ್ಕಾರಿ ಕೆಲಸವಿಲ್ಲ ಎನ್ನುವ ಕಾರಣವನ್ನೇ ಮುಂದೆ ಮಾಡಿಕೊಂಡು ಹಠ ಮಾಡುತ್ತಿದ್ದೀರಲ್ಲ? ಇದಕ್ಕೆ ಬೇರೆಯದು ಕಾರಣ ಇರಬಹುದಲ್ಲವೇ? ಯಾಕೆಂದರೆ ಕೆಲವು ಕುಟುಂಬಗಳಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರು ಅಸಹನೆಯಿಂದ ಅಗೌರವವನ್ನೇ ತೋರುತ್ತಾರೆ. ಈ ಬಗ್ಗೆಯೂ ನೀವು ಯೋಚನೆ ಮಾಡಬೇಕಿತ್ತು.

    ಇನ್ನು ಎರಡನೆಯ ಸಮಸ್ಯೆ ನಿಮ್ಮ ಹುಡುಗ ಯಾಕೆ ಅಷ್ಟು ದೊಡ್ಡಮನೆಯನ್ನು ಅವರಿವರಿಂದ ಸಹಾಯ ಪಡೆದಾದರೂ ಕಟ್ಟಿಸಬೇಕು? ಒಬ್ಬರಿಂದ ಹಾಗೆ ‘ಹಣದ ಋಣ’ ಪಡೆದರೆ ಅವರ ಹಂಗಿಗೆ ಬಿದ್ದಂತಾಗುವುದಿಲ್ಲವೇ? ಹುಡುಗ ‘ಜಾಣ’ ಎನ್ನುತ್ತೀರಿ! ಜಾಣರು ಮಾಡುವ ಕೆಲಸವೇ ಇದು?

    ಮೂರನೆಯ ಸಮಸ್ಯೆ ನೀವು ಓಡಿ ಹೋಗಿ ಮದುವೆಯಾಗಬೇಕಾದರೆ ನಿಮ್ಮ ಗೆಳೆಯ ನಿಮ್ಮನ್ನು ‘ಕೆಲಸ ಬಿಡು’ ಎನ್ನುವುದು. ಇದಂತೂ ಪೆದ್ದುತನದ ಪರಮಾವಧಿ! ಅಲ್ಲರೀ ಕೈಯಲ್ಲಿರುವ ಕೆಲಸ ಬಿಡು ಎನ್ನುವ ಹುಡುಗ ಜಾಣ ಹೇಗಾಗುತ್ತಾನೆ? ನನಗೆನಿಸುತ್ತದೆ ಇದು ನಿಮ್ಮಿಬ್ಬರ ಕುಟುಂಬಗಳ ಗೋಜಲು.

    ನೀವು ಮದುವೆಯಾದರೆ ಈ ಹಠಗಳು, ತಿರಸ್ಕಾರಗಳು ಯಾವಮಟ್ಟವನ್ನು ಬೇಕಾದರೂ ಮುಟ್ಟಬಹುದು. ಇವೆಲ್ಲವನ್ನೂ ತಡೆದುಕೊಂಡು ನಿಮ್ಮ ಬಾಳನ್ನು ಸುಗಮವಾಗಿ ನಡೆಸಬಹುದು ಎಂದು ನಿಮ್ಮಿಬ್ಬರಿಗೂ ಅನ್ನಿಸುತ್ತದೆಯೇ? ಇಂಥಾ ವಿಷಯಗಳಲ್ಲಿ ‘ನಾನು ಅವನನ್ನು ಬಿಡಲಾರೆ, ಕೆಲಸವನ್ನು ಬಿಡಲಾರೆ’ ಎಂದು ಬರಿ ಭಾವುಕವಾಗಿ ಯೋಚಿಸಬಾರದು.

    ನಿಮ್ಮ ಗೆಳೆಯ ಬುದ್ಧಿವಂತ ಎನ್ನುತ್ತೀರಿ. ಇಬ್ಬರು ಕುಳಿತು ನಿಮ್ಮನಿಮ್ಮ ಬುದ್ಧಿಗಳನ್ನು ತೀಕ್ಷ್ಣವಾದ ನಿಕಷಕ್ಕೆ ಒಡ್ಡಿ, ಸಾಧಕ ಬಾಧಕಗಳನ್ನು
    ಪರಾಮರ್ಶಿಸಿ. ನಿಮ್ಮ ಗೆಳೆಯನೇ ಎರಡು ಮನೆಯ ಹಿರಿಯರನ್ನು ಒಪ್ಪಿಸಿ ನಿಮ್ಮನ್ನು ಮದುವೆಯಾದರೆ ನಿಮ್ಮ ಬಾಳು ಸುಖವಾಗಬಹುದು. ಅಂಥಾದ್ದೊಂದು ನಿಲುವನ್ನು ನೀವಿಬ್ಬರೂ ಬೆಳೆಸಿಕೊಳ್ಳಿ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಮೂರು ಮಕ್ಕಳ ತಂದೆಯ ಪ್ರೀತಿಗೆ ಬಿದ್ದು ಮದುವೆಯಾಗಲಾರದೇ ತೊಳಲಾಡುತ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

    ಯಾರನ್ನೇ ಮದ್ವೆಯಾದ್ರೂ ನನ್ನ ಜತೆ ಕೂಡಲೇಬೇಕು ಎಂದಿದ್ದೇನೆ- ಇದರಲ್ಲಿ ತಪ್ಪೇನಿದೆ ಮೇಡಂ?

    ವಯಸ್ಸಿದ್ದಾಗ ಬೇಡದ್ದೆಲ್ಲಾ ಮಾಡಿದೆ, ಈಗ ಪತ್ನಿ ಹತ್ತಿರ ಸೇರಿಸುತ್ತಿಲ್ಲ: ಸಾಯುವ ಮನಸ್ಸಾಗುತ್ತಿದೆ, ಏನು ಮಾಡಲಿ?

    ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಆದರೂ ಪತ್ನಿ ಒದೀತಾಳೆ, ಹೊಡೀತಾಳೆ… ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts