More

    ಮೈಸೂರು ಅರಸರಿಗೆ ಸುಪ್ರೀಂನಲ್ಲಿ ಜಯಭೇರಿ: ಸರ್ಕಾರಕ್ಕೆ ದಕ್ಕದ ಸಾವಿರಾರು ಎಕರೆ ಜಮೀನು

    |ರಾಘವ ಶರ್ಮ ನಿಡ್ಲೆ, ನವದೆಹಲಿ

    ಮೈಸೂರಿನ ಕುರುಬರಹಳ್ಳಿಯಲ್ಲಿರುವ 1561.31 ಎಕರೆ ಜಮೀನು ಮೈಸೂರು ಅರಸರಿಗೇ ಸೇರಿದ್ದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಈ ಭೂಮಿಯನ್ನು ವಶಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಅಸಿಂಧುಗೊಳಿಸಿದೆ.

    ಈ ಜಮೀನು ಮೂಲವಾಗಿ ಮೈಸೂರು ಅರಸರಿಗೇ ಸೇರಿದ್ದಾಗಿದೆ ಎಂದು ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಉದಯ್ ಲಲಿತ್ ಮತ್ತು ನ್ಯಾ. ಅಜಯ್ ರಸ್ತೋಗಿ ನೇತೃತ್ವದ ದ್ವಿಸದಸ್ಯ ಪೀಠ, ಈ ಭೂಮಿಯನ್ನು ಮೈಸೂರು ರಾಜಮನೆತನದವರಿಂದ ವಿವಿಧ ವ್ಯಕ್ತಿಗಳು ಖರೀದಿಸಿದ ಎಷ್ಟೋ ದಶಕಗಳ ಬಳಿಕ ಸರ್ಕಾರ ನಿದ್ರಾಸ್ಥಿತಿಯಿಂದ ಎದ್ದು ಕುಳಿತರೆ ಏನೂ ಮಾಡಲಾಗುವುದಿಲ್ಲ. ಹೀಗಾಗಿ, ಈ ಭೂಮಿ ಖರೀದಿದಾರರಿಗೆ ಸೇರಬೇಕು ಎಂಬ ವಾದವನ್ನು ಎತ್ತಿಹಿಡಿದಿದೆ. ಖರೀದಿದಾರರ ಪರವಾಗಿ ಸುಪ್ರೀಂಕೋರ್ಟ್ ವಕೀಲ ನಿಶಾಂತ್ ಪಾಟಿಲ್ ವಾದಿಸಿದ್ದರು.

    ಕುರುಬರಹಳ್ಳಿಯಲ್ಲಿರುವ ಈ ಭೂಮಿಯನ್ನು ಖರಾಬ್ ಜಮೀನು ಎಂದು 2015ರಲ್ಲಿ ಆದೇಶಿಸಿದ್ದ ಜಿಲ್ಲಾಧಿಕಾರಿ ಕ್ರಮವನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿ, ಇದು ಖರೀದಿದಾರರಿಗೆ ಸೇರಬೇಕು ಎಂದು ತಿಳಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸರ್ಕಾರ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ, ಭೂಮಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಕಾನೂನು ಹೋರಾಟಕ್ಕೆ ಮುಂದಾಗಿತ್ತು. ಆದರೆ, ಸುಪ್ರೀಂಕೋರ್ಟ್ ನಲ್ಲೂ ಸರ್ಕಾರಕ್ಕೆ ಹಿನ್ನಡೆಯಾಗಿರುವುದರಿಂದ ಒಂದೂವರೆ ಸಾವಿರ ಎಕರೆ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡಂತಾಗಿದೆ.

    ರಾಜ್ಯ ಸರ್ಕಾರದ ಪರ ವಾದಿಸಿದ ಹಿರಿಯ ವಕೀಲ ರಂಜಿತ್ ಕುಮಾರ್, 1881-1883ರಲ್ಲಿ ಬ್ರಿಟಿಷ್ ಸರ್ಕಾರ ನಡೆಸಿದ್ದ ಸಮೀಕ್ಷೆಯಲ್ಲಿ ಕುರುಬರಹಳ್ಳಿ ಗ್ರಾಮದಲ್ಲಿನ ಭೂಮಿಯನ್ನು ಬಿ-ಖರಾಬ್ ಭೂಮಿ ಎಂದು ವರ್ಗೀಕರಿಸಲಾಗಿತ್ತು ಮತ್ತು 1921ರಲ್ಲಿ ಮತ್ತೊಮ್ಮೆ ನಡೆಸಲಾದ ಸಮೀಕ್ಷೆಯಲ್ಲೂ ಇದನ್ನು ಖರಾಬ್ ಭೂಮಿ ಎಂದು ವರ್ಗೀಕರಿಸಲಾಯಿತು ಎಂದು ವಿವರಣೆ ನೀಡಿದರು. ಆದರೆ, ಸುಪ್ರೀಂಕೋರ್ಟ್ ಈ ವಾದಕ್ಕೆ ಮಾನ್ಯತೆ ನೀಡಿಲ್ಲ.

    71 ವರ್ಷಗಳ ಹಿಂದಿನ ಒಪ್ಪಂದ: 1950ರಲ್ಲಿ ಭಾರತ ಸರ್ಕಾರ ಮತ್ತು ಮೈಸೂರು ಮಹಾರಾಜರ ನಡುವೆ ಈ ಜಮೀನು ಸ್ವಾಧೀನ ಕುರಿತ ಒಂದು ಒಪ್ಪಂದವೇರ್ಪಟ್ಟಿತ್ತು. ಅದರ ಪ್ರಕಾರವಾಗಿ, 1561.31 ಎಕರೆ ಜಮೀನು ಮಹಾರಾಜರಿಗೆ ಸೇರುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. ಹೀಗಾಗಿ, ನಂತರದ ವರ್ಷಗಳಲ್ಲಿ ಜಮೀನನ್ನು ಒಂದೊಂದೇ ಖರೀದಿದಾರರಿಗೆ ಮಾರಾಟ ಮಾಡಲು ಮಹಾರಾಜರ ಮನೆಯವರು ಮುಂದಾಗಿದ್ದರು. 1880-83ರ ಮೂಲ ಸಮೀಕ್ಷೆಯಲ್ಲಿ, ಕುರುಬರಹಳ್ಳಿ ಗ್ರಾಮದಲ್ಲಿ ಒಟ್ಟು 152 ಸಮೀಕ್ಷೆ ಸಂಖ್ಯೆಗಳನ್ನು ರಚಿಸಲಾಗಿದೆ. ಕುರುಬರಹಳ್ಳಿ ಗ್ರಾಮದ ಒಟ್ಟು ವಿಸ್ತೀರ್ಣ 1580 ಎಕರೆ 32 ಗುಂಟೆಗಳು. 1580.32 ಎಕರೆಯಲ್ಲಿ 973 ಎಕರೆ ಮತ್ತು 14 ಗುಂಟಾಗಳನ್ನು ಖರಾಬ್ – ಬಿ ಎಂದು ವರ್ಗೀಕರಿಸಲಾಗಿತ್ತು.

    ಭೂಮಿಯಲ್ಲೀಗ ಏನಿವೆ?: ಈ ಜಮೀನಿನ ವ್ಯಾಪ್ತಿಯಲ್ಲಿ ಕೆರೆಗಳು, ಅರಣ್ಯ ಪ್ರದೇಶ, ಲಲಿತಮಹಲ್ ಅರಮನೆ, ಹೆಲಿಪ್ಯಾಡ್, ರಸ್ತೆಗಳು, ಉದ್ಯಾನವನಗಳು, ಮೃಗಾಲಯ, ರೇಸ್ ಕೋರ್ಸ್, ರಾಜ್ಯ ಆಡಳಿತ ತರಬೇತಿ ಸಂಸ್ಥೆ, ಸರ್ಕಾರಿ ಶಾಲೆಗಳು, ಕಾಲೇಜುಗಳು, ಅಂಗನವಾಡಿ ಕೇಂದ್ರಗಳು ಮುಂತಾದವುಗಳಿವೆ. ಆದರೆ, ಇವೆಲ್ಲವನ್ನೂ ಸರ್ಕಾರ ಖರಾಬ್ ಬಿ ಭೂಮಿ ಎಂದು ವರ್ಗೀಕರಿಸಿತ್ತು. ಈ ವರ್ಗೀಕರಣವನ್ನು ಖರೀದಿದಾರರು ಒಪ್ಪಿಕೊಳ್ಳಲಿಲ್ಲ ಮತ್ತು ಸುಪ್ರೀಂಕೋರ್ಟ್ ಕೂಡ ಸರ್ಕಾರದ ಕ್ರಮ ತಳ್ಳಿಹಾಕಿದೆ.

    ಖರೀದಿದಾರರು ಏನು ವಾದಿಸಿದ್ದರು?:  ಭಾರತ ಸರ್ಕಾರದ ಜತೆಗಿನ ಒಪ್ಪಂದದಂತೆ ಮೈಸೂರಿನ ಮಹಾರಾಜರು ಆಸ್ತಿಯ ಏಕೈಕ ಮಾಲೀಕರು ಎಂದು ವ್ಯಾಖ್ಯಾನಕ್ಕೆ ಇಲ್ಲಿ ಅವಕಾಶವಿಲ್ಲ. ರಾಜ್ಯ ಅಥವಾ ಇತರ ಸಕ್ಷಮ ಪ್ರಾಧಿಕಾರಗಳ ಗಮನಕ್ಕೆ ತಾರದೆಯೇ ಅವರು ಯಾರಿಗೆ ಬೇಕಾದರೂ ಇದನ್ನು ಮಾರಾಟ ಮಾಡಬಹುದು.

    – 1950ರ ಒಪ್ಪಂದಕ್ಕೆ ಮುಂಚಿತವಾಗಿ ಇರುವ ಭೂಮಿಯ ಇತಿಹಾಸ ಮತ್ತು ವರ್ಗೀಕರಣ ಇಲ್ಲಿ ಅಪ್ರಸ್ತುತ. ಏಕೆಂದರೆ ಒಪ್ಪಂದದ ಪ್ರಕಾರ ಅವರಿಗೆ ವೈಯಕ್ತಿಕ ಬಳಕೆಗಾಗಿ ಭೂಮಿಯನ್ನು ನೀಡಲಾಯಿತು.

    – ರಾಜ್ಯದ ದಾಖಲೆಗಳು ತಪ್ಪುದಾರಿಗೆಳೆದಿದೆ. ಏಕೆಂದರೆ ಈ ಭೂಮಿ ಎಂದಿಗೂ ರಾಜ್ಯದ ಸ್ವಾಧೀನದಲ್ಲಿರಲಿಲ್ಲ.

    – ಮಾಲೀಕತ್ವವು ವರ್ಗೀಕರಣಕ್ಕಿಂತ ಭಿನ್ನ. ಪ್ರಸ್ತುತ ಸಂದರ್ಭದಲ್ಲಿ ವರ್ಗೀಕರಣದ ಮೂಲಕ ರಾಜ್ಯ ತನ್ನ ಹಕ್ಕು ಸಾಧಿಸಲು ಹೊರಟಿದೆ. ಆದರೆ, ಸರ್ಕಾರಕ್ಕೆ ಇಲ್ಲಿ ಹಕ್ಕೇ ಇಲ್ಲ. 1950ರ ಒಪ್ಪಂದದ ಅಡಿಯಲ್ಲಿ ಮಹಾರಾಜರಿಂದ ಭೂಮಿಯನ್ನು ಕಾನೂನುಬದ್ಧವಾಗಿ ನೀಡಲಾಗಿದೆ ಮತ್ತು ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ.

    ಸರ್ಕಾರ ಉರುಳಿಸಿದ್ರೆ ಸಚಿವ ಸ್ಥಾನ ಕೊಡಿಸೋ ಆಫರ್​ ಬಂದಿತ್ತು ಎಂದ ಕಾಂಗ್ರೆಸ್​ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts