More

    ಗುಂಡಿಗೆ ಬೀಳುವ ಮುನ್ನ..: ವಿಡಿಯೋ ಕಾಲ್ ಮಾಡಿ ಯಾಮಾರಿಸ್ತಾರೆ, ಹುಷಾರ್!

    ತಂತ್ರಜ್ಞಾನ ಮುಂದುವರೆದಂತೆಲ್ಲಾ ಮೋಸದ ಜಾಲಕ್ಕೆ ಒಳಗಾಗುವವರ ಸಂಖ್ಯೆಯೂ ಏರುತ್ತಲೇ ಇದೆ. ಅದರಲ್ಲಿ ಮಹಿಳೆಯರದೇ ಸಿಂಹಪಾಲು. ಯಾರದ್ದೋ ಮಾತಿನ ಮೋಡಿಗೆ ಒಳಗಾಗಿ, ಆಮಿಷಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುವುದು ದಿನನಿತ್ಯ ನಡೆದೇ ಇದೆ. ಅಪರಿಚಿತ ವ್ಯಕ್ತಿಗಳ ವಾಟ್ಸ್​ಆಪ್ ಕರೆ ಸ್ವೀಕರಿಸಿದ ತಪ್ಪಿಗೆ ದಿನವೂ ನರಕಯಾತನೆ ಅನುಭವಿಸುತ್ತಿರುವ ಹೊಸ ಘಟನೆಗಳು ಈಗ ಬೆಳಕಿಗೆ ಬಂದಿವೆ. ಇದು ಇನ್ನಷ್ಟು ಆತಂಕ ಸೃಷ್ಟಿಸಿದೆ.

    | ಸುಚೇತನಾ ನಾಯ್ಕ

    ಮೊನ್ನೆ ತಾನೇ ಉತ್ತರಪ್ರದೇಶದಲ್ಲಿ ಶುವ್​ಕುಮಾರ್ ಎಂಬ ಕಾಮುಕನನ್ನು ಪೊಲೀಸರು ಬಂಧಿಸಿದ್ದರು. ವಿವಸ್ತ್ರನಾಗಿ ಮಹಿಳೆಯರಿಗೆ ವಾಟ್ಸ್​ಆಪ್ ಕರೆ ಮಾಡಿ ವಿಡಿಯೋ ರೆಕಾರ್ಡಿಂಗ್ ಮೂಲಕ ಅದನ್ನು ಚಿತ್ರೀಕರಿಸಿ ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದ. ಹೀಗೆ ಸಾವಿರಾರು ಮಹಿಳೆಯರು ಈತನ ಕೃತ್ಯಕ್ಕೆ ಬಲಿಯಾಗಿದ್ದಾರೆ.

    ಅಷ್ಟಕ್ಕೂ ಈತ ಹೆಣ್ಣುಮಕ್ಕಳ ನಂಬರ್ ಪಡೆಯುತ್ತಿದ್ದುದು ಎಲ್ಲಿಂದ ಅಂತೀರಾ? ‘ಟ್ರೂ ಕಾಲರ್’ ಆಪ್ ಮೂಲಕ! ತನ್ನ ಮನಸ್ಸಿಗೆ ಕಂಡ ಯಾವುದಾದರೂ 10 ಅಂಕಿಯ ನಂಬರ್ ಒಂದನ್ನು ಈತ ಟ್ರೂಕಾಲರ್​ನಲ್ಲಿ ಟೈಪ್ ಮಾಡುತ್ತಿದ್ದ. ಅಲ್ಲಿ ಹೆಣ್ಣುಮಕ್ಕಳ ಹೆಸರು ಕಂಡುಬಂದರೆ ಸಾಕು, ವಾಟ್ಸ್​ಆಪ್​ನಲ್ಲಿ ವಿಡಿಯೋ ಕಾಲ್ ಮಾಡುತ್ತಿದ್ದ. ಈ ಸಮಯದಲ್ಲಿ ತಾನು ಸಂಪೂರ್ಣ ವಿವಸ್ತ್ರನಾಗಿರುತ್ತಿದ್ದ. ಮಹಿಳೆ ವಿಡಿಯೋ ಕಾಲ್ ಸ್ವೀಕರಿಸಿದ ತಕ್ಷಣ ವಿಡಿಯೋ ರೆಕಾರ್ಡಿಂಗ್ ಬಳಸಿ ಆ ಕರೆಯನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಅವನ ಅವತಾರ ನೋಡಿ ಕರೆ ಕಟ್ ಮಾಡುವಷ್ಟರಲ್ಲಿಯೇ ಅವನ ಬೆತ್ತಲೆ ದೇಹದ ಜತೆಗೆ ಮಹಿಳೆಯರ ವಿಡಿಯೋ ಅಲ್ಲಿ ದಾಖಲಾಗುತ್ತಿತ್ತು. ಅದು ನೋಡುಗರ ಕಣ್ಣಿಗೆ ಹೇಗೆ ಕಾಣಿಸುತ್ತಿತ್ತು ಎಂದರೆ ಯಾವುದೋ ನಗ್ನದೇಹದ ವ್ಯಕ್ತಿಯೊಡನೆ ಈ ಹೆಣ್ಣುಮಕ್ಕಳು ಅಶ್ಲೀಲವಾಗಿ ಮಾತುಕತೆ ನಡೆಸಿರುವಂತೆ ಕಾಣುತ್ತಿತ್ತು!

    ಇದನ್ನೇ ತೋರಿಸಿ ಆ ಮಹಿಳೆಯರಿಗೆ ಧಮ್ಕಿ ಹಾಕಿ ಖುಷಿ ಪಡುತ್ತಿದ್ದ. ಅವರು ಪೊಲೀಸರಿಗೆ ದೂರು ಕೊಡುತ್ತೇನೆ ಎಂದರೆ ಈ ವಿಡಿಯೋ ನಿಮ್ಮ ಮನೆಯವರಿಗೆಲ್ಲಾ ಫಾರ್ವರ್ಡ್ ಮಾಡಿ ಮಾನ ಹರಾಜು ಹಾಕುತ್ತೇನೆ ಎನ್ನುತ್ತಿದ್ದ. ತಮ್ಮ ನಂಬರ್ ಆತನಿಗೆ ಹೇಗೆ ಸಿಕ್ಕಿತು ಎಂದು ತಿಳಿಯದ ಹೆಣ್ಣುಮಕ್ಕಳು ಇವನ ಬಳಿ ಎಲ್ಲರ ನಂಬರ್ ಇರಬಹುದು ಎಂದು ಭಯಪಟ್ಟು ಸುಮ್ಮನಾಗು ತ್ತಿದ್ದರು. ಇಲ್ಲವೇ ಈ ವಿಡಿಯೋ ವೈರಲ್ ಮಾಡಿಬಿಟ್ಟರೆ ಏನು ಗತಿ ಎಂದು ಹೆದರುತ್ತಿದ್ದರು.

    15 ಜಿಲ್ಲೆಗಳ ಸಾವಿರಾರು ಮಹಿಳೆಯರು ಈತನ ಈ ಕೃತ್ಯಕ್ಕೆ ಬಲಿಯಾಗಿದ್ದಾರೆ ಎಂದ ಮೇಲೆ ಇನ್ನೂ ಎಷ್ಟು ಮಂದಿ ಮೋಸ ಹೋಗಿರಬಹುದು ಎಂದು ಊಹಿಸಿ. ಒಂದಿಬ್ಬರು ಮಹಿಳೆಯರು ಧೈರ್ಯ ಮಾಡಿ ದೂರು ಕೊಟ್ಟ ನಂತರ ವಿಷಯ ಬೆಳಕಿಗೆ ಬಂದಿದೆ. ಆದರೆ ದೂರು ಕೊಡದೇ ಇರುವ ಇಂಥ ಅದೆಷ್ಟು ಪ್ರಕರಣಗಳು ಇರಬಹುದು ಅಲ್ಲವೆ?

    ಇದಿಷ್ಟು ವಿಷಯ. ಹಾಗಿದ್ದರೆ ವಾಟ್ಸ್​ಆಪ್ ಕರೆಗಳನ್ನು ಸ್ವೀಕರಿಸಲೇಬಾರದೆ? ಯಾರಾದರೂ ಅದರಲ್ಲಿ ಕರೆ ಮಾಡಿದರೆ ಅವರು ಪುಂಡರೋ, ಸಭ್ಯರೋ ತಿಳಿಯುವುದು ಹೇಗೆ ಎನ್ನುವುದು ಮುಂದಿನ ಪ್ರಶ್ನೆ. ಈ ಪ್ರಶ್ನೆಗೆ ಸೂಕ್ತ ಉತ್ತರ ಸದ್ಯಕ್ಕೆ ಇಲ್ಲ. ಏಕೆಂದರೆ ನಮ್ಮ ವಾಟ್ಸ್​ಆಪ್ ಡಿಸ್​ಪ್ಲೇ (ಡಿಪಿ) ಫೋಟೋ, ಸ್ಟೇಟಸ್ ಯಾರು ನೋಡಬಹುದು ಅಥವಾ ಯಾರು ನೋಡಬಾರದು ಎಂಬ ಸೆಟ್ಟಿಂಗ್ ಮಾಡುವ ಅವಕಾಶ ಇದೆಯೇ ವಿನಾ ವಾಟ್ಸ್ ಆಪ್ ಕರೆಗಳಿಗೆ ಈ ಅವಕಾಶ ಇಲ್ಲ. ಆದರೆ ಒಂದಂತೂ ನೆನಪಿಡಬೇಕು. ಆಡಿಯೋ ಅಥವಾ ವಿಡಿಯೋ ಕಾಲ್ ಮಾಡಿದಾಗ ಮಾಡಿದವರ ಡಿಪಿ ಕಾಣಿಸುತ್ತದೆ. ಆದರೆ ಮೋಸ ಮಾಡುವ ಉದ್ದೇಶದಿಂದ ಕರೆ ಮಾಡುವವರು ಸಾಮಾನ್ಯವಾಗಿ ಯಾವುದೋ ಹುಡುಗಿಯ, ಹೆಣ್ಣುಮಕ್ಕಳ, ಕಣ್ಸೆಳೆಯುವ ಚಿಕ್ಕ ಹುಡುಗನ, ಇಲ್ಲವೇ ಹೂವು, ಪ್ರಾಣಿ, ಪಕ್ಷಿಗಳ ಡಿಪಿ ಹಾಕಿಕೊಂಡಿರುವ ಸಾಧ್ಯತೆಯೇ ಹೆಚ್ಚು.

    ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿರುವವರು ವಾಟ್ಸ್ಆಪ್ ಕರೆ, ವಿಡಿಯೋ ಕಾಲ್ ಮಾಡಿದರೆ ಅವರ ಹೆಸರು ಕಾಣಿಸುತ್ತದೆ, ಆಗ ಸಮಸ್ಯೆಯೇ ಇಲ್ಲ. ಒಂದು ವೇಳೆ ಅಪರಿಚಿತರ ಕರೆ ಬಂದರೆ, ಅದರಲ್ಲಿಯೂ ಅದು ವಿಡಿಯೋ ಕರೆಯಾಗಿದ್ದರೆ, ಮಹಿಳೆಯರು ರಿಸೀವ್ ಮಾಡದಿರುವುದೇ ಒಳ್ಳೆಯದು. ಒಂದು ವೇಳೆ ಕರೆ ಮಾಡಿದವರ ಉದ್ದೇಶ ಸರಿಯಾಗಿದ್ದೇ ಆಗಿದ್ದರೆ, ಖಂಡಿತ ಅವರು ಕರೆ ಸ್ವೀಕರಿಸದ ಸಂದರ್ಭದಲ್ಲಿ ತಮ್ಮ ಪರಿಚಯ ಹೇಳಿ ವಾಟ್ಸ್ ಆಪ್​ನಲ್ಲಿ ಒಂದು ಮೆಸೇಜ್ ಕಳಿಸುತ್ತಾರೆ. ಸುಮ್ಮನೆ ಎಲ್ಲಾ ಕಾಲ್ ರಿಸೀವ್ ಮಾಡಿ ತೊಂದರೆಗೆ ಸಿಲುಕುವ ಬದಲು ಇದೇ ಬೆಸ್ಟ್ ಅಲ್ವಾ?

    ಕುತೂಹಲ ಒಳ್ಳೆಯದೇ, ಆದರೆ…

    ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ಇಲ್ಲವೇ ಮೆಸೆಂಜರ್​ಗೆ ಹಾಯ್, ಹಲೋ, ಗುಡ್ ಮಾರ್ನಿಂಗ್, ಗುಡ್ ನೈಟ್ ಈ ರೀತಿ ಸಂದೇಶಗಳು ಬರುವುದು ಸಹಜ. ಹೀಗೆ ಬಂದಾಗ ಅವರು ಯಾರಿರಬಹುದು ಎಂದು ಕುತೂಹಲ ಕಾಡುವುದು ಸಹಜವೇ. ಹಾಗೆಂದು ರಿಪ್ಲೈ ಮಾಡಲು ಹೋದರೆ ಅವರ ಬಲೆಗೆ ಬೀಳುವ ಸಂಭವವೇ ಹೆಚ್ಚು. ಆದ್ದರಿಂದ ಅಂತಹ ಅಪರಿಚಿತರನ್ನು ಕಡೆಗಣಿಸಿದೇ ಒಳ್ಳೆಯದಲ್ಲವೇ? ದಿನವೂ ಈ ರೀತಿ ಮೆಸೇಜ್ ಬರುತ್ತಿದ್ದರೆ ಬ್ಲಾಕ್ ಮಾಡುವ ಅವಕಾಶವಂತೂ ಇದ್ದೇ ಇದೆ.

    ವಾಟ್ಸ್​ಆ್ಯಪ್​ ಕರೆಗಳೇ ಬೇಡವೆಂದರೆ ಏನು ಮಾಡಬೇಕು?

    ವಾಟ್ಸ್​ಆಪ್ ಕರೆಗಳಿಂದ ತುಂಬಾ ಕಿರಿಕಿರಿಯಾಗುತ್ತಿದೆ ಎಂದಾದರೆ, ಅವುಗಳನ್ನು ಪೂರ್ಣ ನಿಷೇಧಿಸುವ ಅವಕಾಶವಿದೆ. ಅದೇನೆಂದರೆ ಫೋನ್ ಸೆಟ್ಟಿಂಗ್ಸ್​ಗೆ ಹೋಗಿ, ಅಲ್ಲಿ ‘ಆಪ್ಸ್’ ಆಪ್ಷನ್ ಕ್ಲಿಕ್ಕಿಸಿ. ನಂತರ ‘ಸೆಲೆಕ್ಟ್ ವಾಟ್ಸ್​ಆಪ್’ ಆಪ್ಷನ್​ಗೆ ಹೋಗಿ ನಂತರ ‘ಫೋರ್ಸ್ ಸ್ಟಾಪ್’ ಕ್ಲಿಕ್ಕಿಸಬೇಕು. ಹೀಗೆ ಮಾಡಿದರೆ ಯಾವ ವಾಟ್ಸ್ಆಪ್ ಕರೆಗಳನ್ನೂ ನೀವು ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

    ಟ್ರೂಕಾಲರ್ ಕಣ್ಣಿನಿಂದ ಪಾರಾಗೋದು ಹೇಗೆ?

    ಟ್ರೂಕಾಲರ್ ಆಪ್ ಮಾಡಿರುವ ಉದ್ದೇಶ ಒಳ್ಳೆಯದ್ದೇ ಆಗಿದ್ದರೂ ಇದು ಮಹಿಳೆಯರ ಹೆಸರನ್ನು ಕಂಡುಹಿಡಿಯಲು ಪುಂಡ ಪೋಕರಿಗಳಿಗೆ ದಾರಿಯಾಗಿದೆ. ನಿಮ್ಮ ಹೆಸರು ಹೇಳಿ ಕರೆ ಮಾಡಿದಾಗ, ಪರಿಚಯಸ್ಥರೇ ಇರಬೇಕು ಎಂದುಕೊಂಡು ಮಾತನಾಡಿ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಇಂಥ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಸುಲಭ ಉಪಾಯವೂ ಇದೆ. ಅದೇನೆಂದರೆ ಮೊದಲು (ನಿಮಗೆ ಇಷ್ಟವಿಲ್ಲದಿದ್ದರೂ) ಟ್ರೂಕಾಲರ್ ಆಪ್ ಇನ್​ಸ್ಟಾಲ್ ಮಾಡಿ ಕೊಂಡು, ಅದರಲ್ಲಿ ಹೇಳುವ ಎಲ್ಲಾ ಸ್ಟೆಪ್ಸ್ ಅನುಸರಿಸಬೇಕು. ನಂತರ ಈ ಆಪ್​ನ ಎಡಭಾಗದ ಮೇಲುಗಡೆ 3 ಗೆರೆಗಳನ್ನು (ಮೆನು ಬಟನ್) ಕಾಣಬಹುದು. ಅಲ್ಲಿ ಎಡಿಟ್ ಪ್ರೊಫೈಲ್ ಕ್ಲಿಕ್ಕಿಸಿ ಯಾವುದೋ ಒಂದು ಹೆಸರನ್ನು ನೀಡಬಹುದು. ಆಗ ಯಾರೇ ಕಾಲ್ ಮಾಡಿದರೂ ಆ ಹೆಸರೇ ಡಿಸ್​ಪ್ಲೇ ಆಗುತ್ತದೆ.

    ಕೆಥೊಲಿಕ್ ಪಾದ್ರಿಗಳ ಸೆಕ್ಸ್​ ಸ್ಕ್ಯಾಂಡಲ್​: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

    ಹ್ಯಾಕ್​ ಮಾಡಿದ್ದಕ್ಕೂ ಈಕೆಗೆ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ತು; ಮೈಕ್ರೋಸಾಫ್ಟ್​, ಫೇಸ್​ಬುಕ್​ನಿಂದ್ಲೇ ಬಹುಮಾನ

    ನೀವೂ ಕಣ್ತುಂಬಿಸಿಕೊಳ್ಳಬಹುದು ಸರ್ಜಾ ಕುಟುಂಬ ನಿರ್ಮಿಸಿರುವ ಆಂಜನೇಯ ದೇವಸ್ಥಾನದ ಕುಂಭಾಭಿಷೇಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts