More

    ಬೆಂಗಳೂರಿನ ಜೈಲಿನಲ್ಲಿದ್ದಾಕೆಗೆ ಸಿಗ್ತು ಪಾಕಿಸ್ತಾನದ ಪೌರತ್ವ: ಜೈಲಲ್ಲೇ ಮಗುಹೆತ್ತ ಈಕೆಯ ಕಥೆಯೇ ಇಂಟರೆಸ್ಟಿಂಗ್‌!

    ಬೆಂಗಳೂರು: ಈಕೆಯ ಹೆಸರು ಸುಮೈರಾ. ಭಾರತಕ್ಕೆ ಅಕ್ರಮವಾಗಿ ನುಸುಳಿ ಬೆಂಗಳೂರಿನ ಸೆಂಟ್ರಲ್‌ ಜೈಲಿನಲ್ಲಿ ಇದ್ದು, ಇಲ್ಲಿಯೇ ಮಗುವನ್ನೂ ಹೆತ್ತ ಈಕೆಯೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಾಳೆ. ಬೆಂಗಳೂರಿನ ಜೈಲಿನಲ್ಲಿ ಇದ್ದಾಗಲೇ ಪಾಕಿಸ್ತಾನವು ಇವಳಿಗೆ ತನ್ನ ದೇಶದ ಪೌರತ್ವವನ್ನೂ ನೀಡಿದೆ.

    ಏನಿದು ಕಥೆ? ಯಾರೀಕೆ? ಬೆಂಗಳೂರಿನ ಜೈಲಿಗೆ ಯಾಕೆ ಹೋದಳು ಎನ್ನುವುದೇ ಕುತೂಹಲದ ವಿಷಯ.

    ಈಕೆಯ ಸ್ಟೋರಿ ಶುರುವಾಗುವುದು 2016ರಿಂದ. ಈಕೆಗೆ ಕೇರಳದ ಪಾಲಕ್ಕಾಡ್ ಮೂಲದ ಮೊಹಮ್ಮದ್ ಶಿಹಾಬ್‌ ಎಂಬಾತನ ಪರಿಚಯವಾದದ್ದು ಕತಾರ್‌ನಲ್ಲಿ. ಇವರಿಬ್ಬರ ನಡುವೆ ಪ್ರೇಮವಾಗಿ ಇಬ್ಬರೂ ಮದುವೆಯಾದರು. ಅಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಈ ಜೋಡಿ ಮದುವೆಯಾಗುತ್ತಿದ್ದಂತೆಯೇ ಅದೇ ಸಾಲಿನ ಸೆಪ್ಟೆಂಬರ್‌ನಲ್ಲಿ ನೇಪಾಳ ಗಡಿ ಮೂಲಕ ಬೆಂಗಳೂರಿಗೆ ಅಕ್ರಮವಾಗಿ ಬಂದು ಕುಮಾರಸ್ವಾಮಿ ಲೇಔಟ್‌ನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದರು. ವೀಸಾ ಇಲ್ಲದೇ, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ಇವರು ನೇಪಾಳದ ಗಡಿ ದಾಟಿ ಪ್ರವೇಶಿಸಿ, ಪಶ್ಚಿಮ ಬಂಗಾಳ ತಲುಪಿ, ನಂತರ ಬೆಂಗಳೂರಿಗೆ ಬಂದಿದ್ದರು.

    ಈ ನಡುವೆಯೇ 2017ರಲ್ಲಿ ಅಕ್ರಮ ವಲಸಿಗರು ನಡೆಸುತ್ತಿದ್ದ ಅಕ್ರಮ ಚಟುವಟಿಕೆಗಳ ಮೇಲೆ ದೃಷ್ಟಿ ಇಟ್ಟಿದ್ದ ಕರ್ನಾಟಕ ಸರ್ಕಾರ, ಅವರನ್ನು ಗುರುತಿಸುವ ದೊಡ್ಡ ಅಭಿಯಾನ ಶುರು ಮಾಡಿತ್ತು. ಆ ಪೈಕಿ ಕೆಲವರು ಈ ಸಂದರ್ಭದಲ್ಲಿ ಪೊಲೀಸರ ವಶಕ್ಕೆ ಸಿಕ್ಕರು. ಅವರ ಪೈಕಿ ಈ ಜೋಡಿ ಕೂಡ ಒಂದು. ಆದರೆ ಪೊಲೀಸರು ಬರುತ್ತಿದ್ದಂತೆಯೇ ಮೊಹಮ್ಮದ್ ಶಿಹಾಬ್‌ ತಪ್ಪಿಸಿಕೊಂಡರೆ ಸುಮೈರಾ ಪೊಲೀಸರ ವಶಕ್ಕೆ ಸಿಕ್ಕಳು. ಈಕೆಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

    ಆಗ ಸುಮೈರಾ ತುಂಬು ಗರ್ಭಿಣಿ. ಜೈಲಿನಲ್ಲಿ ಇರುವಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆದರೆ ಅದಾಗಲೇ ಗಂಡ ಮೊಹಮ್ಮದ್ ಶಿಹಾಬ್ ಆಕೆಯನ್ನು ಬಿಟ್ಟು ತಲೆಮರೆಸಿಕೊಂಡಿದ್ದ. ಮೂರು ವರ್ಷಗಳ ಜೈಲಿನ ಶಿಕ್ಷೆ ಮುಗಿಸಿದ ಬಳಿಕ ತನ್ನ ಪುಟ್ಟ ಮಗಳೊಂದಿಗೆ ಸುಮೈರಾ ಬೆಂಗಳೂರಿನ ಬಂಧನ ಕೇಂದ್ರದಲ್ಲಿ ವಾಸವಾಗಿದ್ದಾಳೆ.

    ಇವೆಲ್ಲಾ ಆಗುವ ನಡುವೆಯೇ ಪಾಕಿಸ್ತಾನದ ಪ್ರಮುಖ ಮಾಧ್ಯಮ ಡಾನ್ ಮಾಡಿರುವ ವರದಿಯ ಪ್ರಕಾರ, ಈಕೆಗೆ ಪಾಕಿಸ್ತಾನವು ತನ್ನ ಪೌರತ್ವವನ್ನು ನೀಡಿದೆ ಎನ್ನಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಡೇಟಾಬೇಸ್ ಮತ್ತು ನಿಯಂತ್ರಣ ಪ್ರಾಧಿಕಾರವು ಆಕೆಯ ಕುಟುಂಬದ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ಬೆಂಗಳೂರಿನ ಬಂಧನ ಕೇಂದ್ರದಲ್ಲಿರುವ ಸುಮೈರಾ ಅವರಿಗೆ ಪಾಕಿಸ್ತಾನದ ಪೌರತ್ವ ಪ್ರಮಾಣಪತ್ರವನ್ನು ಪಾಕಿಸ್ತಾನ ಸಚಿವಾಲಯ ನೀಡಿರುವುದಾಗಿ ಪತ್ರಿಕೆ ವರದಿ ಮಾಡಿದೆ. ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಮಹಿಳೆಯ ಸೂಕ್ತ ಪ್ರಯಾಣದ ದಾಖಲೆಯನ್ನು ನೀಡಲಿದೆ. ಈ ಮೂಲಕ ಆಕೆ ತನ್ನ ಮಗಳೊಂದಿಗೆ ಪಾಕಿಸ್ತಾನಕ್ಕೆ ಮರಳಲು ಅವಕಾಶ ನೀಡುತ್ತದೆ ಎಂದು ಪಾಕ್‌ನ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ ಎಂದು ಪತ್ರಿಕೆಯಲ್ಲಿ ಉಲ್ಲೇಖವಾಗಿದೆ.

    ಬೆಂಗಳೂರಿನ ಜೈಲಿನಲ್ಲಿರುವ ಮಹಿಳೆಯ ಪ್ರಕರಣವನ್ನು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಸೆನೆಟರ್ ಇರ್ಫಾನ್ ಸಿದ್ದಿಕಿ ಅವರು ಸೆನೆಟ್‌ನಲ್ಲಿ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಆದರೆ ಬೆಂಗಳೂರಿನ ಜೈಲು ಅಧಿಕಾರಿಗಳು ತಮಗೆ ಈ ಮಾಹಿತಿ ಇಲ್ಲ ಎಂದು ಎರಡು ದಿನಗಳ ಹಿಂದೆ ಹೇಳಿದ್ದರು. ಸುಮೈರಾಗೆ ಪಾಕಿಸ್ತಾನಿ ಪೌರತ್ವವನ್ನು ನೀಡುವ ಬಗ್ಗೆ ಭಾರತ ಸರ್ಕಾರ ಅಥವಾ ಪಾಕಿಸ್ತಾನ ಅಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ. ಶೀಘ್ರದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಮಾಹಿತಿ ಬರಬಹುದು ಎಂದು ತಿಳಿಸಿದ್ದಾರೆ.

    ತುಂಡು ತುಂಡು ಕತ್ತರಿಸೋದಾಗಿ ಹೇಳಿ ಎಸ್ಕೇಪ್‌ ಆದ ಕೈ ಮುಖಂಡ! ಮೂರು ದಿನವಾದ್ರೂ ಪೊಲೀಸರು ಗಪ್‌ಚುಪ್‌?

    ‘ನೀನು ಹೆಚ್ಚು ದಿನ ಬದುಕಲ್ಲ…’ ಹೈಕೋರ್ಟ್‌ ಆದೇಶ ಪಾಲಿಸಿ ಎಂದ ಪ್ರಾಂಶುಪಾಲರಿಗೆ ಜೀವ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts