More

    ಆಡುವ ಕೈಯಲ್ಲಿ ಪ್ಯಾಡು! ಚಿಕ್ಕ ವಯಸ್ಸಿನಲ್ಲೇ ದೊಡ್ಡವರಾಗ್ತಿರೋ ಮಕ್ಕಳ ಪಾಡು…

    ಸಾಮಾನ್ಯವಾಗಿ ಹೆಣ್ಣುಮಕ್ಕಳು 14-15ನೇ ವಯಸ್ಸಿನ ಆಸುಪಾಸು ಋತುಮತಿಯಾದರೆ ಅದು ಸಹಜ ಕ್ರಿಯೆ. ಬಾಲಕಿಯೊಬ್ಬಳು ಸ್ತ್ರೀಯಾಗಿ ರೂಪುಗೊಳ್ಳುವ ಕ್ರಿಯೆ ಇದು. ಆದರೆ ಇತ್ತೀಚಿನ ವರ್ಷಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಋತುಮತಿಯಾಗುತ್ತಿದ್ದಾರೆ. ಕರೊನಾದಿಂದಾಗಿ ಈ ಸಮಸ್ಯೆ ದುಪ್ಪಟ್ಟಾಗಿದೆ. ಇದಕ್ಕೆ ಕಾರಣವೇನು? ಪರಿಹಾರವೇನು? ಅಮ್ಮಂದಿರ ಪಾತ್ರವೇನು?

    | ಸುಚೇತನಾ ನಾಯ್ಕ

    ಐದನೇ ತರಗತಿಯ ನೇಹಾ ಅದೊಂದು ದಿನ ಗಾಬರಿಯಿಂದ ‘‘ಅಮ್ಮಾ ಅಮ್ಮಾ ನನಗೆ ಒಂದು ಮಾಡುವ ಜಾಗದಿಂದ ರಕ್ತ ಬರುತ್ತಿದೆ… ಏನೋ ಆಗಿಬಿಟ್ಟಿದೆ’’ ಎಂದು ಅಳುತ್ತಾ ಹೇಳಿದಾಗ ಅಮ್ಮ ಕಂಗಾಲಾಗಿ ಹೋದಳು. ಅದೇನಾಗಿದೆ ಎಂದು ತಿಳಿಯದ ಆ ಕಂದ ಗಾಬರಿಯಲ್ಲಿದ್ದರೆ, ಅದು ಏನು ಎಂದು ತಿಳಿದ ಈ ಅಮ್ಮನಿಗೆ ದಿಗ್ಭ್ರಮೆ! ‘ಮಗಳಿಗಿನ್ನೂ 10 ವರ್ಷವಷ್ಟೇ ತುಂಬಿದೆ. ಇಷ್ಟು ಬೇಗ…? ಮಗಳಿಗೆ ಏನು ಹೇಳುವುದು?’ ಎಂದು ಅರೆಕ್ಷಣ ಗರಬಡಿದವಳಂತೆ ಅಮ್ಮ ನಿಂತರೆ, ‘‘ಅಮ್ಮಾ ಅಮ್ಮಾ ಅದೇನು ರಕ್ತ? ನನಗೇನಾಯಿತು’’ ಎಂದು ಒಂದೇ ಸಮನೆ ಅಳುತ್ತಿದ್ದಾಳೆ ಮಗಳು…

    ಇದು ನೇಹಾ ಒಬ್ಬಳ ಕಥೆಯಲ್ಲ. ಬಹು ಹಿಂದಿನಿಂದಲೂ ಇಂಥ ಪ್ರಕರಣಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದರೆ, ಇಂದು ಬಹುತೇಕ ಮನೆಗಳ ಕಥೆಯಾಗಿ ಹೋಗಿದೆ. ಪ್ರತಿ 500 ಮಂದಿ ಬಾಲಕಿಯರಲ್ಲಿ ಓರ್ವ ಬಾಲಕಿ 8-9ನೇ ವಯಸ್ಸಿನಲ್ಲಿಯೇ ಋತುಮತಿಯಾಗುತ್ತಿದ್ದಾಳೆ ಎಂದು ದಿ ಜರ್ನಲ್ ಆಫ್ ಹ್ಯೂಮನ್ ರಿಪ್ರೊಡಕ್ಷನ್ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ. ಅದರಲ್ಲಿಯೂ ಕರೊನಾದಿಂದ ಈ ಸಮಸ್ಯೆ ದುಪ್ಪಟ್ಟಾಗಿದೆಯಂತೆ. ಮೊದಲೇ ಮೊಬೈಲ್ ಫೋನ್ ದಾಸರಾಗಿರುವ ಮಕ್ಕಳು, ಇದೀಗ ಕರೊನಾದಿಂದಾಗಿ ದೈಹಿಕ ಚಟುವಟಿಕೆಗಳಿಗೆ ತಿಲಾಂಜಲಿ ಇತ್ತು, ಮನೆಯಲ್ಲಿಯೇ ಕುಳಿತು ಬೇಡದ ಆಹಾರಗಳ ಸೇವನೆ ಮಾಡುತ್ತಾ ಬೊಜ್ಜು ಬರಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ದೊಡ್ಡವರಾಗುತ್ತಿರುವ ಪ್ರಕರಣಗಳು ದುಪ್ಪಟ್ಟು ಆಗಿದೆ ಎನ್ನುತ್ತಿದ್ದಾರೆ ವೈದ್ಯರು. ಇಂಥ ಸಮಯದಲ್ಲಿ ಪಾಲಕರು ಅದರಲ್ಲಿಯೂ ತಾಯಿಯಾದವಳು ತೋರುವ ಧೈರ್ಯ ಮುಖ್ಯವಾದದ್ದು. ಸಂಬಂಧಿಕರು ಏನಂದಾರು? ಅಕ್ಕಪಕ್ಕದವರಿಗೆ ಗೊತ್ತಾದರೆ ಏನು ಗತಿ ಎಂದೆಲ್ಲಾ ಮನಸ್ಸಿಗೆ ತಂದುಕೊಳ್ಳದೇ ಇದು ಬಹುತೇಕ ಮನೆಗಳ ಸಮಸ್ಯೆ ಎಂದುಕೊಂಡು ಮಗಳಿಗೆ ತಿಳಿಹೇಳಬೇಕಿದೆ. ನೀವೂ ಆಘಾತಕ್ಕೊಳಗಾಗಿ, ಮಗಳನ್ನೂ ಆಘಾತಗೊಳಿಸುವ ಬದಲು ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಬೇಕಿದೆ. ಅಮ್ಮನಿಲ್ಲದ ಕಂದನಾದರೆ, ಅಪ್ಪನೇ ಅಮ್ಮನ ಸ್ಥಾನವನ್ನು ತುಂಬಿ ಮಗಳಿಗೆ ಧೈರ್ಯ ಹೇಳಬೇಕಿದೆ.

    ಧಾರಾವಾಹಿ, ಸಿನಿಮಾ ಪ್ರಭಾವ ಬೀರುತ್ತವೆಯೆ?

    ಆಡುವ ಕೈಯಲ್ಲಿ ಪ್ಯಾಡು! ಚಿಕ್ಕ ವಯಸ್ಸಿನಲ್ಲೇ ದೊಡ್ಡವರಾಗ್ತಿರೋ ಮಕ್ಕಳ ಪಾಡು...ಮಕ್ಕಳು ಅತಿಬೇಗನೆ ಋತುಮತಿಯಾಗುವುದಕ್ಕೂ ಧಾರಾವಾಹಿ, ಸಿನಿಮಾಗಳಿಗೂ ಸಂಬಂಧವಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಆದರೆ ಅವೆರಡಕ್ಕೂ ಸಂಬಂಧ ಇದೆ ಎನ್ನುತ್ತಾರೆ ಆಪ್ತ ಸಮಾಲೋಚಕಿ ಸುನಿತಾ ರಾವ್. ಹಿಂದೆಲ್ಲಾ ಪ್ರೀತಿ, ಪ್ರೇಮದ ವಿಷಯಗಳು ಅಥವಾ ಗಂಡá-ಹೆಣ್ಣಿನ ನಡುವಿನ ಸಂಬಂಧಗಳನ್ನು ಬಹಳ ಗುಪ್ತವಾಗಿ ಇಡಲಾಗುತ್ತಿತ್ತು. ಆದರೆ ಇದೀಗ ಧಾರಾವಾಹಿ, ಸಿನಿಮಾ, ಸ್ಮಾರ್ಟ್​ಫೋನ್ ಮಾತ್ರವಲ್ಲದೆ ನಮ್ಮ ಸುತ್ತಮುತ್ತ ನಡೆಯುವ ಇಂಥ ಘಟನೆಗಳಿಂದ ಮಕ್ಕಳಿಗೆ ಎಲ್ಲವೂ ತಿಳಿಯುತ್ತಿದೆ. ಗಂಡು- ಹೆಣ್ಣಿನ ಸಂಬಂಧದ ಸನ್ನಿವೇಶಗಳು ಬಂದಾಗ ಸಹಜವಾಗಿ ಹಾಮೋನ್​ಗಳಲ್ಲಿ ಏರುಪೇರಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ದೇಹ ದೊಡ್ಡವರಂತೆ ವರ್ತಿಸುವ ಕಾರಣ, ಅತಿ ಬೇಗನೆ ಋತುಮತಿಯಾಗುತ್ತಿದ್ದಾರೆ ಎನ್ನುತ್ತಾರೆ ಸುನಿತಾ.

    ಆತಂಕ ತಂದ ಅಧ್ಯಯನ ವರದಿಗಳು…

    • ಅತಿ ಚಿಕ್ಕ ಪ್ರಾಯದಲ್ಲಿ ಮಕ್ಕಳು ಋತುಮತಿಯಾದರೆ, ಎದುರಾಗುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ಅವರು 40ನೇ ವಯಸ್ಸಿಗೆ ಮೊದಲೇ ಲೈಂಗಿಕ ಜೀವನದಿಂದ ವಿಮುಖರಾಗಿಬಿಡುತ್ತಾರೆ. ಇದಕ್ಕೆ ರಜೋನಿವೃತ್ತಿ ಎನ್ನಲಾಗುತ್ತದೆ. ಲೈಂಗಿಕ ಜೀವನದಲ್ಲಿ ಸಂತೃಪ್ತಿ ಇಲ್ಲದೇ ಸಾಂಸಾರಿಕ ಜೀವನದಲ್ಲಿಯೂ ವಿರಸಗಳು ಮೂಡುವ ಸಾಧ್ಯತೆ ಹೆಚ್ಚಾಗುತ್ತವೆ ಎಂದು ಯುಕೆ ಬಯೋಬ್ಯಾಂಕ್ ಸಂಸ್ಥೆ ನಡೆಸಿರುವ ಅಧ್ಯಯನ ತಿಳಿಸಿದೆ. 12 ವರ್ಷಕ್ಕಿಂತ ಮುನ್ನ ಋತುಮತಿಯಾದವರಲ್ಲಿ ಆನಂತರದ ವರ್ಷಗಳಲ್ಲಿ ಋತುಮತಿಯಾದವರಿಗಿಂತ ಶೇಕಡಾ 10ರಷ್ಟು ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚು ತಲೆದೋರುವುದಾಗಿ ಸತತ ನಾಲ್ಕು ವರ್ಷ ನಡೆಸಿದ ಈ ಅಧ್ಯಯನದಲ್ಲಿ ದೃಢಪಟ್ಟಿದೆ.
    • ಚಿಕ್ಕವಯಸ್ಸಿನಲ್ಲಿ ಋತುಮತಿಯಾದವರು ಟೈಪ್ 2 ಮಧುಮೇಹಕ್ಕೆ ಒಳಗಾಗುವಂತಹ ಸಾಧ್ಯತೆ ಹೆಚ್ಚು ಎಂದು ಡಯಾಬಿಟಿಕ್ ಮೆಡಿಸಿನ್ ಎಂಬ ಸಂಶೋಧನೆಯಿಂದ ಬಹಿರಂಗಗೊಂಡಿದೆ. 4,600 ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಿ ಈ ಅಧ್ಯಯನ ನಡೆಸಲಾಗಿದೆ.
    • 12 ವಯಸ್ಸಿಗಿಂತ ಮೊದಲೇ ಋತುಚಕ್ರಕ್ಕೆ ಒಳಗಾಗಿದ್ದ ಹೆಣ್ಣುಮಕ್ಕಳಲ್ಲಿ ಗರ್ಭಧಾರಣೆ ವೇಳೆ ಪ್ರಿಕ್ಲಾಂಪ್ಸಿ ಸಮಸ್ಯೆ ಬರುವ ಸಾಧ್ಯತೆ ಶೇ. 28ರಷ್ಟು ಇರುವುದು ಎಂದು ಜರ್ನಲ್ ಆಫ್ ಕ್ಲಿನಿಕಲ್ ಆಂಡ್ ಡಯಾಗ್ನಸ್ಟಿಕ್ ರಿಸರ್ಚ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿ ಹೇಳಿದೆ (ಪ್ರಿಕ್ಲಾಂಪ್ಸಿಯ ಎಂದರೆ ಗರ್ಭಧಾರಣೆಯ ಸಂದರ್ಭದಲ್ಲಿ ರಕ್ತದೊತ್ತಡ ಹೆಚ್ಚಾಗಿ ಮತ್ತು ಮೂತ್ರದಲ್ಲಿ ಪ್ರೊಟೀನ್ ಕಂಡುಬರುವ ಸಮಸ್ಯೆಯಾಗಿದೆ. ಇದು ಮುಂದೆ ಪಾರ್ಶ್ವವಾಯುವಿಗೂ ಕಾರಣವಾಗಬಹುದು).
    • ಸಣ್ಣ ವಯಸ್ಸಿನಲ್ಲಿಯೇ ಋತುಮತಿಯಾದ ಮಹಿಳೆ ಯರಲ್ಲಿ ಥೈರಾಯ್ಡ್ ಮತ್ತು ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಹೆಚ್ಚಾಗುವುದು ಎಂದು ಅಮೆರಿಕನ್ ಜರ್ನಲ್ ಆಫ್ ಎಪಿಡರ್ವಿುನಾಲಜಿಯಲ್ಲಿ ಪ್ರಕಟಗೊಂಡಿದೆ.

    ಮನಸ್ಸಿನ್ನೂ ಎಳೆಯದೇ…

    ಎಳವೆಯಲ್ಲಿ ಮಗಳು ಋತುಮತಿಯಾದರೆ ಆಕೆಯ ಮೇಲೆ ಗಮನ ಹೆಚ್ಚಿರಲಿ. ಮಗಳು ದೈಹಿಕವಾಗಿ ದೊಡ್ಡವಳಾದರೂ ಮನಸ್ಸಿನ್ನೂ ಎಳವೆಯಲ್ಲೇ ಇರುತ್ತದೆ. ಪ್ರೌಢತ್ವ ಹೊಂದಿರದ ಮನಸ್ಸು ದೇಹದ ಬದಲಾವಣೆಯಿಂದಾಗಿ ತೊಳಲಾಟದಲ್ಲಿ ಸಿಲುಕಿ ಕೊಳ್ಳುತ್ತದೆ. ಕೆಲವು ಮಕ್ಕಳು ಖಿನ್ನತೆಗೂ ಹೋಗಬಹುದು. ಬಹುಬೇಗನೇ ಲೈಂಗಿಕ ಆಸೆ ಹುಟ್ಟುವುದು ಇನ್ನೊಂದು ಸಮಸ್ಯೆ. ಆಕರ್ಷಣೆಯೊಂದೇ ಕಾಣಿಸುತ್ತದೆಯೇ ವಿನಾ ತಪ್ಪು ಯಾವುದು, ಸರಿ ಯಾವುದು ಎಂದು ಯೋಚಿಸುವ ಪರಿಪಕ್ವತೆ ಮನಸ್ಸಿಗೆ ಇರುವುದಿಲ್ಲ. ಅದ್ದರಿಂದ ಅಮ್ಮಂದಿರು ನಿಧಾನವಾಗಿ ಎಲ್ಲವನ್ನೂ ಮಗಳಿಗೆ ಹೇಳಬೇಕು.

    ಅಮ್ಮನ ಕರ್ತವ್ಯವೇನು?

    • ಮಗುವಿಗೆ ಎಳವೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಎದೆಹಾಲು ಕುಡಿಸಿ
    • ಗರ್ಭಿಣಿಯಾಗಿರುವಾಗ ಸೋಯಾ ಪದಾರ್ಥಗಳಿಂದ ದೂರವಿರಿ.
    • ಗರ್ಭಿಣಿ ಯಾಗಿದ್ದಾಗ ಸಾವಯವ ತರಕಾರಿ, ಹಣ್ಣುಗಳನ್ನು ಸೇವಿಸಿ
    • ಪ್ಲಾಸ್ಟಿಕ್ ಬಾಟಲಿ ನೀರಿನ ಸೇವನೆ ಬೇಡವೇ ಬೇಡ
    • ಹೈಬ್ರಿಡ್ ತಳಿಯ ಹಸುಗಳ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬದಲು ನಾಟಿ ತಳಿಯ ಹಸುಗಳ ಹಾಲನ್ನು ಮಕ್ಕಳಿಗೆ ನೀಡಿ
    • ಏರ್ ಫ್ರೆಷನರ್​ನಿಂದ ಮಗುವನ್ನು ದೂರವಿರಿಸಿ

    ಎಳೆವಯಸ್ಸಿನಲ್ಲಿಯೇ ಏಕೆ?

    • ಎಳೆವಯಸ್ಸಿನಲ್ಲಿ ಋತುಮತಿಯಾಗುವುದಕ್ಕೆ ಕಾರಣಗಳು ಹಲವು. ಅವುಗಳಲ್ಲಿ ನಮ್ಮ ಕೈಮೀರಿರುವ ಕೆಲವು ಸನ್ನಿವೇಶಗಳಿದ್ದರೆ, ನಾವೇ ತಂದುಕೊಂಡ ಕಾರಣಗಳೂ ಸಾಕಷ್ಟಿವೆ.
    • ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರಕ್ರಮ
    • ಲೈಂಗಿಕತೆ ಕುರಿತು ಮಕ್ಕಳಿಗೆ ಅತಿ ಸುಲಭದಲ್ಲಿ ಸಿಗುತ್ತಿರುವ ವಿಷಯಗಳು
    • ಹೆಚ್ಚಿನ ಚಾಕೋಲೆಟ್‌ಗಳು ಕಾಮೋತ್ತೇಜಕ ಗುಣ ಹೊಂದಿರುವ ಕಾರಣ, ಮಕ್ಕಳ ಹಾರ್ಮೋನ್‌ಗಳಲ್ಲಿ ಏರುಪೇರು ಉಂಟುಮಾಡುತ್ತವೆ. ಜತೆಗೆ ದೇಹ ಬೆಳವಣಿಗೆಯಲ್ಲಿಯೂ ಇದು ಅಪಾಯಕಾರಿ
    • ಪೌಲ್ಟ್ರಿ ಮಾಂಸದ ಅತಿಯಾದ ಸೇವನೆ
    • ಹೈಬ್ರಿಡ್ ತರಕಾರಿಗಳ ಸೇವನೆ
    • ಪ್ಲಾಸ್ಟಿಕ್​ನ ಅತಿಯಾದ ಬಳಕೆ
    • ಚಿಕ್ಕ ಪ್ರಾಯದಲ್ಲಿಯೇ ಮಾನಸಿಕ ಒತ್ತಡಕ್ಕೆ ಒಳಗಾಗುವುದು
    • ಸೋಯಾ ಪದಾರ್ಥಗಳ ಅತಿಯಾದ ಬಳಕೆ
    • ನೀರಿನಲ್ಲಿರುವ ಫ್ಲೋರೈಡ್ ಅಂಶ https://www.vijayavani.net/supreme-court-has-given-major-order-supporting-woman/

        

    ಹಾಬಿಯೇ ಜಾಬ್!; ಮನೆಯಲ್ಲಿದ್ದುಕೊಂಡೇ ಗಳಿಸಲು ಮಹಿಳೆಯರಿಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts