ನಸುಕಿನಲ್ಲಿ ಭೀಕರ ಅಪಘಾತ: ಕಾರು ಬೆಂಕಿಗಾಹುತಿ- ರಕ್ಷಿಸಲು ಜನರಿದ್ದಲ್ಲದೇ ಐವರ ಸಜೀವ ದಹನ

accident
Published on

ಲಖನೌ: ಇಂದು ನಸುಕಿನಲ್ಲಿ ಲಖನೌ ಸಮೀಪದ ಯುಮನಾ ಎಕ್ಸ್​ಪ್ರೆಸ್​ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಸಜೀವ ದಹನವಾಗಿರುವ ಘಟನೆ ನಡೆದಿದೆ.

ಲಖನೌದಿಂದ ದೆಹಲಿಯ ಕಡೆ ಪ್ರಯಾಣಿಸುತ್ತಿದ್ದ ಕಾರು ಹಾಗೂ ಕಂಟೈನರ್​ಗೆ ನಡೆದಿರುವ ಡಿಕ್ಕಿಯ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ನಡೆದಿದೆ.

ನಾಗಾಲ್ಯಾಂಡ್​ ನೋಂದಣಿ ಸಂಖ್ಯೆಯುಳ್ಳ ಕಂಟೈನರ್​ ವಿರುದ್ಧ ದಿಕ್ಕಿನಲ್ಲಿ ಬರುತ್ತಿತ್ತು. ಕಾರಿನ ಚಾಲಕನಿಗೆ ಇದರ ಅರಿವು ಆಗಲಿಲ್ಲ. ಕಂಟೈನರ್​ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತು. ಹೊರಕ್ಕೆ ಬರಲಾಗದೇ ಕಾರಿನಲ್ಲಿದ್ದವು ಕೂಗಿಕೊಂಡಿದ್ದಾರೆ.

ಬೆಂಕಿ ದಹದಹಿಸುತ್ತಿದ್ದ ಕಾರಣ, ಸ್ಥಳೀಯರು ಸಮೀಪ ಹೋಗಲು ಭಯಪಟ್ಟಿದ್ದಾರೆ. ರಕ್ಷಣೆಗೆ ಧಾವಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿಗೆ ಕರೆ ಮಾಡಿ, ಅವರು ಒಂದು ಗಂಟೆ ಬಿಟ್ಟು ಬರುವಷ್ಟರಲ್ಲಿ ಕಾರಿನಲ್ಲಿದ್ದವರೆಲ್ಲರೂ ಸುಟ್ಟು ಕರಕಲಾಗಿ ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net