More

    ರಷ್ಯನ್ ಕಾರ್ಯತಂತ್ರಗಳು, ಇರಾನೀ ಡ್ರೋನ್‌ಗಳು, ಚೀನಾ ಸಹಕಾರ: ಯೂಕ್ರೇನಲ್ಲಿ ಶತ್ರುಗಳನ್ನು ಎದುರಿಸುತ್ತಿದೆ ಪಾಶ್ಚಾತ್ಯ ಜಗತ್ತು

    ರಷ್ಯನ್ ಕಾರ್ಯತಂತ್ರಗಳು, ಇರಾನೀ ಡ್ರೋನ್‌ಗಳು, ಚೀನಾ ಸಹಕಾರ: ಯೂಕ್ರೇನಲ್ಲಿ ಶತ್ರುಗಳನ್ನು ಎದುರಿಸುತ್ತಿದೆ ಪಾಶ್ಚಾತ್ಯ ಜಗತ್ತು| ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ರಷ್ಯಾ ಮತ್ತು ಯೂಕ್ರೇನ್ ಕದನ ಆರಂಭವಾಗಿ ಒಂಬತ್ತು ತಿಂಗಳುಗಳೇ ಕಳೆದಿವೆ. ಈ ಅವಧಿಯಲ್ಲಿ ರಷ್ಯಾ ಕೊನೆಗೂ ಯೂಕ್ರೇನ್ ಮೇಲೆ ನಿರ್ಣಯಾತ್ಮಕ ಆಕ್ರಮಣ ನಡೆಸಿದೆ. ಮಿಲಿಟರಿ ವಿದ್ಯಾರ್ಥಿಗಳಿಗೆ, ಕಾರ್ಯತಂತ್ರಗಾರರಿಗೆ ಈ ಯುದ್ಧದಿಂದ ಹಲವು ಅಧ್ಯಾಯಗಳಲ್ಲಿ ಬರೆದಿಡುವಷ್ಟು ಪಾಠಗಳು ಲಭ್ಯವಾಗಿದೆ! ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್‌ಗಳು (ಯುಎವಿ) ಏಕಾಂಗಿಯಾಗಿ ಅಧಿಕಾರ ಕೇಂದ್ರವನ್ನು ಬದಲಾಯಿಸುವ ಸಾಮರ್ಥ್ಯ ತೋರಿಸುತ್ತಿವೆ. ಉಕ್ರೇನ್ ಡ್ರೋನ್‌ಗಳನ್ನು ಬಳಸಿ ರಷ್ಯಾದ ಟ್ಯಾಂಕ್‌ಗಳ ಮೇಲೆ ದಾಳಿ ನಡೆಸಿತು. ಅದಕ್ಕೆ ಪ್ರತಿಯಾಗಿ ಈಗ ರಷ್ಯನ್ ಸೇನೆ ಇರಾನ್ ನಿರ್ಮಿತ ಆತ್ಮಹತ್ಯಾ ಡ್ರೋನ್‌ಗಳನ್ನು ಬಳಸಿ ಉಕ್ರೇನ್‌ನಲ್ಲಿನ ತನ್ನ ಗುರಿಗಳನ್ನು ನಾಶಪಡಿಸುತ್ತಿದೆ. ಈ ಡ್ರೋನ್‌ಗಳನ್ನು ಕುರಿತು ಸಂಶೋಧನೆ ನಡೆಸಿದ ತಜ್ಞರು ಇರಾನ್ ನಿರ್ಮಿತ ಸುಸೈಡ್ ಡ್ರೋನ್‌ಗಳಲ್ಲಿರುವ ಪಾಶ್ಚಾತ್ಯ ಬಿಡಿಭಾಗಗಳನ್ನು ಚೀನಾ ಪೂರೈಸಿರುವುದಾಗಿ ಪತ್ತೆಹಚ್ಚಿದ್ದಾರೆ.

    ರಷ್ಯಾ – ಇರಾನ್ ಬಂಧಕ್ಕೆ ಬಲ ನೀಡುತ್ತಿರುವ ಚೀನಾ

    ರಷ್ಯಾ ಮತ್ತು ಯೂಕ್ರೇನ್ ಮಧ್ಯ ನಡೆಯುತ್ತಿರುವ ಸಮರದ ಸಂದರ್ಭದಲ್ಲಿ ರಷ್ಯಾ ಇರಾನ್ ನಿರ್ಮಿತ ಆಯುಧಗಳನ್ನು ಬಳಸುವುದನ್ನು ಮೊದಲ ಬಾರಿಗೆ ಸೆಪ್ಟೆಂಬರ್‌ನಲ್ಲಿ ಗಮನಿಸಿದ್ದಾಗಿ ಉಕ್ರೇನ್ ಹೇಳಿತು. ಆ ಬಳಿಕ ರಷ್ಯಾ ಇರಾನ್ ನಿರ್ಮಿತ ಡ್ರೋನ್‌ಗಳನ್ನು ಬಳಸಿ ಉಕ್ರೇನಿನ ಮಹತ್ವದ ವಿದ್ಯುತ್ ಘಟಕಗಳ ಮೇಲೆ ದಾಳಿ ನಡೆಸಿ, ಯೂಕ್ರೇನ್ ಅಪಾರವಾಗಿ ವಿದ್ಯುತ್ ಕೊರತೆ ಅನುಭವಿಸುವಂತೆ ಮಾಡಿತು. ಇದೇ ಮೊದಲ ಬಾರಿಗೆ, ಇತ್ತೀಚಿನ ದಿನಗಳಲ್ಲಿ ಇರಾನ್ ತಾನು ರಷ್ಯಾಗೆ ಡ್ರೋನ್‌ಗಳನ್ನು ಒದಗಿಸಿರುವುದಾಗಿ ಒಪ್ಪಿಕೊಂಡಿತು. ಆದರೆ ಅವುಗಳನ್ನು ತಾನು ರಷ್ಯಾ – ಯೂಕ್ರೇನ್ ಕದನ ಆರಂಭವಾಗುವ ಸಾಕಷ್ಟು ಮೊದಲೇ ಒದಗಿಸಿರುವುದಾಗಿ ಹೇಳಿಕೆ ನೀಡಿತ್ತು.

    ಆದರೆ ಯೂಕ್ರೇನ್ ರಾಜಧಾನಿ ಕೀವ್‌ನಲ್ಲಿನ ಯೂಕ್ರೇನ್ ಮಿಲಿಟರಿ ಅಧಿಕಾರಿಗಳು ಅವರು ವಶಪಡಿಸಿಕೊಂಡ ಇರಾನ್ ನಿರ್ಮಿತ ಡ್ರೋನ್‌ಗಳನ್ನು ಕಳಚಿ ಪರಿಶೀಲಿಸಿದರು. ಆದರೆ ಅವುಗಳ ಪ್ರೊಪೆಲ್ಲರ್‌ಗಳಲ್ಲಿ ನಿರ್ಮಾಣವಾದ ಅವಧಿ ಇದೇ ವರ್ಷದ ಫೆಬ್ರವರಿ ಎಂದು ನಮೂದಾಗಿತ್ತು. ಪ್ರೊಪೆಲ್ಲರ್‌ಗಳು ಡ್ರೋನ್ ನಿರ್ಮಾಣದಲ್ಲಿ ಬೇಕಾಗುವ ಹಲವು ಬಿಡಿಭಾಗಗಳಲ್ಲಿ ಒಂದಾಗಿರುವುದರಿಂದ, ಈ ದಿನಾಂಕದ ಪ್ರಕಾರ ಇರಾನ್ ಡ್ರೋನ್‌ಗಳನ್ನು ರಷ್ಯಾ ದಾಳಿ ಆರಂಭಿಸಿದ ಬಳಿಕ ಉತ್ಪಾದಿಸಿರದಿದ್ದರೂ, ಬಳಿಕವೇ ರಷ್ಯಾಗೆ ಪೂರೈಸಿತ್ತು ಎನ್ನುವುದನ್ನು ಸೂಚಿಸುತ್ತದೆ.

    ಮೂಲಗಳ ಪ್ರಕಾರ, ರಷ್ಯಾ ಇರಾನಿನಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನೂ ಖರೀದಿಸುವ ಉದ್ದೇಶ ಹೊಂದಿತ್ತು. ಅವುಗಳ ಪ್ರಕಾರ ಇರಾನ್ ಈಗಾಗಲೇ ರಷ್ಯಾಗೆ 450 ಡ್ರೋನ್‌ಗಳನ್ನು ಪೂರೈಸಿದೆ. ಮುಂದಿನ ದಿನಗಳಲ್ಲಿ ಇರಾನ್ ರಷ್ಯಾಗೆ 1,000 ಆಯುಧಗಳನ್ನು ಕಳುಹಿಸಿಕೊಡುವ ಯೋಜನೆ ಹಾಕಿಕೊಂಡಿದೆ. ಅವುಗಳಲ್ಲಿ ಫತೇಹ್ – 110 ಹಾಗೂ ಜೋಲ್‌ಫಾಘರ್ ಭೂಮಿಯಿಂದ ಭೂಮಿಗೆ ದಾಳಿ ನಡೆಸುವ ಕ್ಷಿಪಣಿಗಳೂ ಸೇರಿದ್ದು, ಇದನ್ನು ರಷ್ಯಾ ಯೂಕ್ರೇನ್ ಸೇನಾಪಡೆಗಳು ಮತ್ತು ನಗರಗಳ ಮೇಲೆ ದಾಳಿ ನಡೆಸಲು ಬಳಸುವ ಗುರಿ ಹೊಂದಿದೆ. ಇವುಗಳು ಸಣ್ಣ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿದ್ದು, ಕ್ರಮವಾಗಿ 300 ಹಾಗೂ 700 ಕಿಲೋಮೀಟರ್ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ.

    ಯೂಕ್ರೇನ್ ಗುಪ್ತಚರ ಇಲಾಖೆಯ ಅಧಿಕಾರಿಗಳ ಪ್ರಕಾರ, ಇರಾನ್ ಅಂದಾಜು 200 ಯುದ್ಧ ಡ್ರೋನ್‌ಗಳನ್ನು ರಷ್ಯಾಗೆ ನವೆಂಬರ್ ಆರಂಭದಲ್ಲಿ ಪೂರೈಸಲು ಯೋಜನೆ ಹಾಕಿಕೊಂಡಿದೆ. ಇದರಲ್ಲಿ ಅರಾಶ್ – 2 ಕಾಮಿಕೇಜ್ ಡ್ರೋನ್‌ಗಳು, ಮೊಹಾಜೆರ್ – 6 ರಿಕನಯಸೆನ್ಸ್ ಹಾಗೂ ಶಹೀದ್ – 136 ಹಾಗೂ ಕಾಂಬ್ಯಾಟ್ ಯುಎವಿಗಳೂ ಸೇರಿವೆ. ರಷ್ಯಾ ತನ್ನ ಕಾರ್ಯತಂತ್ರದ ಭಾಗವಾಗಿ ಯೂಕ್ರೇನಿನ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಈ ಕಾರ್ಯಾಚರಣೆಗೆ ಮತ್ತು ಯುದ್ಧರಂಗದಲ್ಲಿ ಸತತ ಹಿನ್ನಡೆಗಳ ಬಳಿಕ ಮೇಲುಗೈ ಸಾಧಿಸುವಲ್ಲಿ ರಷ್ಯಾಗೆ ಇರಾನಿನ ಆಯುಧಗಳು ಅತ್ಯಂತ ಸಹಕಾರಿಯಾಗಿವೆ.

    ಯೂಕ್ರೇನ್ ಅಧ್ಯಕ್ಷ, ವೊಲೋಡಿಮಿರ್ ಝೆಲೆನ್ಸ್ಕಿ ಪ್ರಕಾರ, ಅಕ್ಟೋಬರ್ ಬಳಿಕ ಇರಾನಿನ ತಂತ್ರಜ್ಞಾನ ಯೂಕ್ರೇನಿನ 30%ಕ್ಕೂ ಹೆಚ್ಚು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲು ಸಹಕರಿಸಿದೆ. ಯೂಕ್ರೇನ್ ಅಧಿಕಾರಿಗಳು ವಿದ್ಯುತ್ ಗ್ರಿಡ್ ಸ್ಥಿರಗೊಳಿಸಲು ನಿತ್ಯ ವಿದ್ಯುತ್ ಕಡಿತ ಮಾಡುತ್ತಿದ್ದರೂ, ರಷ್ಯಾದ ದಾಳಿ ಇದೇ ರೀತಿ ಮುಂದುವರಿದರೆ ಶೂನ್ಯ ತಾಪಮಾನಕ್ಕಿಂತಲೂ ಕಡಿಮೆ ಇರುವ ಚಳಿಗಾಲದ ಸಮಯದಲ್ಲಿ ಯೂಕ್ರೇನಿನ ಹಲವು ಪ್ರದೇಶಗಳಲ್ಲಿ ಸಂಪೂರ್ಣ ವಿದ್ಯುತ್ ವ್ಯತ್ಯಯ ಉಂಟಾಗಬಹುದು.

    ಇನ್​ಸ್ಟಿಟ್ಯೂಟ್ ಫಾರ್ ಸೈನ್ಸ್ ಆ್ಯಂಡ್ ಇಂಟರ್‌ನ್ಯಾಷನಲ್ ಸೆಕ್ಯುರಿಟಿಯ ವರದಿಯ ಪ್ರಕಾರ, ಈ ಆಯುಧಗಳನ್ನು ಪಾಶ್ಚಾತ್ಯ ವಿನ್ಯಾಸದ ಆಧಾರದಲ್ಲಿ ಚೀನಾ ನಿರ್ಮಿಸಿರುವ ಬಿಡಿಭಾಗಗಳನ್ನು ಬಳಸಿ ನಿರ್ಮಿಸಲಾಗಿದೆ. ಸಂಶೋಧಕರ ಪ್ರಕಾರ, ಶಹೀದ್ – 136 ಡ್ರೋನ್‌ನಲ್ಲಿ ಬೀಜಿಂಗ್ ಮೈಕ್ರೋಪೈಲಟ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಸಂಸ್ಥೆ ನಿರ್ಮಿಸಿರುವ ಇಂಜಿನ್ ಬಳಸಲಾಗಿದೆ. ಆದರೆ ಅದು ಜರ್ಮನ್ ಇಂಜಿನ್‌‌ನ ವಿನ್ಯಾಸದ ನಕಲಿಯಾಗಿದೆ ಎನ್ನಲಾಗುತ್ತದೆ. ಮತ್ತಷ್ಟು ಸಂಶೋಧಕರು ಇರಾನ್ ಚೀನಾ ನಿರ್ಮಿತ ಇಂಜಿನ್ನಿನ ನಕಲು ನಿರ್ಮಿಸಿದೆ ಎನ್ನುತ್ತಾರೆ. ಉದಾಹರಣೆಗೆ ಶಹೀದ್ – 131 ಇಂಜಿನ್‌ನಲ್ಲಿ ಬ್ರಿಟಿಷ್ ವಿನ್ಯಾಸವನ್ನು ನಕಲು ಮಾಡಿರುವ ಚೀನಾದ ಇಂಜಿನ್ನಿನ ರಿವರ್ಸ್ ಇಂಜಿನಿಯರಿಂಗ್ ಮಾಡಲಾಗಿದೆ. ಈ ಡ್ರೋನ್ ರಷ್ಯಾದ ಬತ್ತಳಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತದೆ. ಇದು ಗುರಿಯೆಡೆಗೆ ಸಾಗಿ, ಅಲ್ಲಿ ತನ್ನನ್ನು ತಾನು ಸ್ಫೋಟಿಸುತ್ತದೆ.

    ಈ ಸಣ್ಣ ಸಿಸ್ಟಮ್‌ಗಳಲ್ಲಿ ಸಿಡಿಮದ್ದುಗಳನ್ನು ಅಳವಡಿಸಿರಲಾಗಿದ್ದು, ಅವುಗಳು ಸಾಮಾನ್ಯ ಡ್ರೋನ್‌ಗಳಂತೆಯೇ ಹಾರಾಟ ನಡೆಸುತ್ತವೆ. ಆದರೆ ಅವುಗಳು ದೀರ್ಘಕಾಲ ಗಾಳಿಯಲ್ಲಿ ತೇಲಾಡುವ ಸಾಮರ್ಥ್ಯ ಹೊಂದಿರುವ ಲಾಯ್ಟರಿಂಗ್ ಮ್ಯುನಿಷನ್‌ಗಳಾಗಿವೆ. ಅಂದರೆ ಅವುಗಳು ಒಂದು ಜಾಗದ ಮೇಲೆ ದೀರ್ಘಕಾಲದ ತನಕ ಹಾರುತ್ತ, ಆ ಬಳಿಕ ಗುರಿಯೆಡೆಗೆ ಸಾಗಿ ಅಲ್ಲಿ ಸಿಡಿಯುತ್ತವೆ. ಆದ್ದರಿಂದ ಅವುಗಳನ್ನು ಸುಸೈಡ್ ಡ್ರೋನ್‌ಗಳು ಅಥವಾ ಕಾಮಿಕೇಜ್ ಡ್ರೋನ್‌ಗಳೆಂದು ಕರೆಯುತ್ತಾರೆ.

    ಪಾಶ್ಚಾತ್ಯ ಗುಪ್ತಚರ ಸಂಸ್ಥೆಗಳು ನೀಡಿರುವ ಮಾಹಿತಿಗಳ ಪ್ರಕಾರ, ರಷ್ಯಾ ಮತ್ತು ಇರಾನ್‌ಗಳು ಯೂಕ್ರೇನ್‌ನಲ್ಲಿ ಶಹೀದ್ – 136 ಡ್ರೋನ್‌ಗಳನ್ನು ಬಳಸಿರುವುದನ್ನು ತಿರಸ್ಕರಿಸಿವೆ. ರಷ್ಯಾ ಅಧಿಕಾರಿಗಳ ಪ್ರಕಾರ, ಒಂದು ತಿಂಗಳ ಹಿಂದೆ ರಷ್ಯಾದ ಅಧಿಕಾರಿಗಳು ಇರಾನಿಗೆ ತೆರಳಿ ಈ ಆಯುಧಗಳನ್ನು ಬಳಸುವುದು ಹೇಗೆ ಎಂದು ತಿಳಿದುಕೊಂಡು ಬಂದಿದ್ದಾರೆ. ಇರಾನ್ ಮಿಲಿಟರಿ ಅಧಿಕಾರಿಗಳು ಇತ್ತೀಚೆಗೆ ರಷ್ಯಾ ಅತಿಕ್ರಮಿಸಿಕೊಂಡಿರುವ ಕ್ರಿಮಿಯಾಗಿ ತೆರಳಿ, ವ್ಲಾಡಿಮಿರ್ ಪುಟಿನ್ ಪಡೆಗಳಿಗೆ ಡ್ರೋನ್‌ಗಳನ್ನು ಬಳಸುವ ಕುರಿತು ಸಹಾಯ ಮಾಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಹೀದ್ – 136ಗಳನ್ನು ಬಳಸಿ, ಯೂಕ್ರೇನಿನ ನಗರಗಳ ಮೇಲೆ ದಾಳಿ ನಡೆಸಿ, ಯೂಕ್ರೇನಿಗರಲ್ಲಿ ಭಯ ಮೂಡಿಸಲು ಪ್ರಯತ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಷ್ಯಾ ಸೇನೆ ಹಿನ್ನಡೆ ಅನುಭವಿಸಿದ ಕಾರಣ, ಗಡಿಯಾಚೆಗಿನ ನಗರಗಳ ಮೇಲೂ ದಾಳಿ ನಡೆಸಲಾಗಿದೆ.

    ಇರಾನ್ ಕಳೆದ ಹಲವು ವರ್ಷಗಳಿಂದ ಡ್ರೋನ್‌ಗಳ ಪ್ರಮುಖ ಬಳಕೆದಾರ ಹಾಗೂ ರಫ್ತುದಾರ ರಾಷ್ಟ್ರವಾಗಿದೆ. ಇರಾನ್ ಮೇಲೆ ಮಿಲಿಟರಿ ಡ್ರೋನ್‌ಗಳು ಮತ್ತು ಏರ್‌ಕ್ರಾಫ್ಟ್‌ಗಳ ಆಮದು ಮಾಡದಂತೆ ನಿರ್ಬಂಧವಿರುವುದರಿಂದ, ಸ್ವತಃ ಬೃಹತ್ ಯುದ್ಧ ವಿಮಾನಗಳನ್ನು ತಯಾರಿಸಲು ಸಾಧ್ಯವಾಗದಿರುವುದರಿಂದ, ಇರಾನ್ ಯುದ್ಧ ಡ್ರೋನ್‌ಗಳನ್ನು ನಿರ್ಮಿಸುವಲ್ಲಿ ಅಸಾಧಾರಣ ಸಾಮರ್ಥ್ಯ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿತು. 2014ರಲ್ಲಿ ಒಂದು ಬ್ಲಾಗ್ ಬರಹದಲ್ಲಿ ಇರಾನ್ ಒಂದು ಡ್ರೋನ್ ಪವರ್ ಆಗಿದೆ ಹಾಗೂ ಅದರ ಬಳಿ ಹಲವು ವಿಧದ ಯುದ್ಧ ಸಾಮರ್ಥ್ಯ ಸಾಬೀತುಪಡಿಸಿದ ಡ್ರೋನ್‌ಗಳಿವೆ ಎಂದು ವರದಿ ಮಾಡಲಾಗಿತ್ತು. ಇರಾನ್ ಸಾಮಾನ್ಯವಾಗಿ ತನ್ನ ಡ್ರೋನ್‌ಗಳನ್ನು ಯೆಮೆನ್‌ನ ಹೌತಿಗಳಿಗೆ, ಲೆಬೆನಾನ್‌ನ ಹೆಜ್ಬೊಲ್ಲಾಗಳಿಗೆ ರಫ್ತು ಮಾಡುತ್ತದೆ. ಅವರು ಈ ಡ್ರೋನ್‌ಗಳನ್ನು ಸೌದಿ ಅರೇಬಿಯಾ ಮತ್ತು ಇಸ್ರೇಲ್‌ ಮೇಲೆ ದಾಳಿ ಮಾಡಲು ಬಳಸುತ್ತಾರೆ. ಇರಾನ್ ವ್ಯಾಪಾರದ ಉದ್ದೇಶದಿಂದ ಡ್ರೋನ್‌ಗಳನ್ನು ಈಕ್ವೆಡಾರ್, ವೆನೆಜುವೆಲಾ ಹಾಗೂ ಆಫ್ರಿಕಾ ಖಂಡದ ಕೆಲವು ಮಿತ್ರ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ.

    ರಷ್ಯಾ ಬಳಿ ಈಗಾಗಲೇ ಕಡಿಮೆ ವೆಚ್ಚದ ಹಲವು ಸಣ್ಣಪುಟ್ಟ ಡ್ರೋನ್‌ಗಳಿವೆ. ಓರ್ಲಾನ್ – 10 (ಈಗಲ್) ಅದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ. ಇದು 10 ಮೀಟರ್ ಅಗಲದ ರೆಕ್ಕೆಯನ್ನು ಹೊಂದಿದ್ದು, ಪಿಸ್ಟನ್ ಇಂಜಿನ್ ಬಳಸಿ 16 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು. ಇದು ಸುಲಭವಾಗಿ ರಷ್ಯನ್ ರಾಕೆಟ್‌ಗಳಿಗೆ ಅವುಗಳ ದಾಳಿಯ ಗುರಿಗಳನ್ನು ಗುರುತಿಸಿ, ಅವುಗಳ ಮೇಲೆ ದಾಳಿ ನಡೆಸುವಂತೆ ಮಾಡುತ್ತದೆ. ಡ್ರೋನ್ ನಿರ್ದೇಶಿತ ದಾಳಿಗಳು ಮೂರು ನಿಮಿಷಗಳ ಒಳಗೆ ನಡೆಯುತ್ತವೆ. ಆದರೆ ಇತರ ಕ್ರಮಗಳ ಮೂಲಕ ನಡೆಸುವ ದಾಳಿಗೆ ಅರ್ಧ ಗಂಟೆ ಸಮಯ ಬೇಕಾಗುತ್ತದೆ. ಉಕ್ರೇನಿನ ವಿದ್ಯುತ್ ಘಟಕಗಳ ಮೇಲೆ ದಾಳಿ ನಡೆಸಲು ಹಲವು ಈಗಲ್ ಡ್ರೋನ್‌ಗಳು ಸಿದ್ಧವಾಗಿವೆ.

    ಇರಾನಿನ ಬಲವರ್ಧನೆಯಲ್ಲಿ ಚೀನಾದ ಪಾತ್ರ

    ಇರಾನಿನ ಡ್ರೋನ್ ಸಾಮರ್ಥ್ಯದ ಕುರಿತಾಗಿ ನಡೆದ ಹೆಚ್ಚಿನ ಸಂಶೋಧನೆಗಳು ಇರಾನಿನ ಡ್ರೋನ್ ಉತ್ಪಾದನೆ ಮತ್ತು ಪೂರೈಕೆ ಪ್ರಕ್ರಿಯೆಯಲ್ಲಿ ಚೀನಾದ ಪಾತ್ರವನ್ನು ಸಾಬೀತುಪಡಿಸಿವೆ. ಚೀನಾದ ಕಂಪನಿಗಳು ಪ್ರಾಥಮಿಕವಾಗಿ ಇರಾನಿನ ಯುಎವಿ ಹಾಗೂ ಡ್ರೋನ್ ಕಾರ್ಯಕ್ರಮಗಳಲ್ಲಿ ನಿರ್ಬಂಧದ ಹೊರತಾಗಿಯೂ ಪಾಶ್ಚಾತ್ಯ ಉತ್ಪಾದನಾ ಮಾದರಿಯ ಬಿಡಿಭಾಗಗಳನ್ನು ಒದಗಿಸುತ್ತವೆ. ಆದರೆ ಚೀನಾ ಹೇಗೆ ಪಾಶ್ಚಾತ್ಯ ವಿನ್ಯಾಸಗಳನ್ನು ಪಡೆದುಕೊಳ್ಳುತ್ತದೆ ಎನ್ನುವುದು ಇಂದಿಗೂ ಅಸ್ಪಷ್ಟವಾಗಿದೆ.

    ಪ್ರಸ್ತುತ ಅಭಿಪ್ರಾಯಗಳ ಪ್ರಕಾರ, ಚೀನಾ ಅದು ಹೇಗೋ ಪಾಶ್ಚಾತ್ಯ ವಿನ್ಯಾಸಗಳನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಅವುಗಳನ್ನು ದೇಶೀಯವಾಗಿ ಉತ್ಪಾದಿಸುತ್ತಿದೆ. ಅವುಗಳಲ್ಲಿ ಆಯ್ದ ವಿನ್ಯಾಸಗಳನ್ನು ಇರಾನಿಗೆ ರಫ್ತು ಮಾಡುತ್ತದೆ. ಆದರೆ ಚೀನಾ ಯಾವ ಹಂತದಲ್ಲಿ ಇರಾನಿನ ಡ್ರೋನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತದೆ ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ಪಾಶ್ಚಾತ್ಯ ರಾಷ್ಟ್ರಗಳು ಈಗ ಇರಾನ್ ಮೇಲೆ ಮುಗಿಬಿದ್ದಿರುವುದು ಇರಾನ್ ಡ್ರೋನ್‌ಗಳಲ್ಲಿ ಚೀನೀ ಬಿಡಿಭಾಗಗಳ ಉಪಸ್ಥಿತಿಯ ಕುರಿತ ಮಾಹಿತಿ ಕೊರತೆಯ ಕಾರಣದಿಂದ ಎನ್ನಲೂ ಸಾಧ್ಯವಿಲ್ಲ.

    ಶಹೀದ್ – 136 ಹಾಗೂ ಮೊಹಾಜೆರ್ – 6 ಡ್ರೋನ್‌ಗಳು ಪಾಶ್ಚಾತ್ಯ ಬಿಡಿಭಾಗಗಳನ್ನು ಬಳಸುವುದರಿಂದ, ಪಾಶ್ಚಾತ್ಯ ಗುಪ್ತಚರ ಸಂಸ್ಥೆಗಳು ಕಸ್ಟಮ್ಸ್ ಮುಖಾಂತರ ಅವುಗಳನ್ನು ಪತ್ತೆಹಚ್ಚಲು ಸಾಧ್ಯವಿದೆ. ಒಂದು ವೇಳೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಇರಾನಿನ ಆಯುಧ ಜಾಲವನ್ನು ಶೋಧಿಸುವ ಉದ್ದೇಶ ಇದ್ದರೆ, ಅವುಗಳು ಇರಾನಿಗೆ ಪಾಶ್ಚಾತ್ಯ ಬಿಡಿಭಾಗಗಳ ಪೂರೈಕೆದಾರರು, ಆ ಬಳಿಕ ಟ್ರೇಡಿಂಗ್ ಕಂಪನಿಗಳು, ವಿತರಕರು, ಸಾಗಾಣಿಕಾ ಸಂಸ್ಥೆಗಳು, ಇರಾನ್ ಜೊತೆ ಸ್ನೇಹ ಹೊಂದಿರುವ ಏಜೆಂಟ್‌ಗಳು, ಹಾಗೂ ಕೊನೆಯದಾಗಿ ಇರಾನಿನಲ್ಲಿ ಈ ಖರೀದಿಗಳನ್ನು ನಡೆಸುತ್ತಿರುವವರನ್ನು ಪತ್ತೆಹಚ್ಚಬೇಕಿದೆ.

    ಆದರೆ ಪ್ರಸ್ತುತ ಸನ್ನಿವೇಶದಲ್ಲಿ, ರಷ್ಯಾ ಯೂಕ್ರೇನ್ ಯುದ್ಧ ಮುಗಿಯುವ ಮೊದಲು ಈ ಕೆಲಸವನ್ನು ಪೂರೈಸುವುದು ಅತ್ಯಂತ ಕಷ್ಟಕರವಾಗಿದೆ.

    ‘ಡಾ.ಬ್ರೋ’ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡಿಗರ ಆಗ್ರಹ; ಏನಂತಾರೆ ‘ನಮಸ್ಕಾರ ದೇವರು’?

    ಆಸ್ಟ್ರೇಲಿಯನ್‌ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts