More

    ಲಾಕ್‌ಡೌನ್ ಮುನ್ನ ಮುಗಿಬಿದ್ದ ಜನ

    1. ಮಂಗಳೂರು: ಕರೊನಾ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ರಾತ್ರಿ 8 ಗಂಟೆಯಿಂದ ಜುಲೈ 23ರ ತನಕ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಆದರೆ ಲಾಕ್‌ಡೌನ್ ಜಾರಿಗೂ ಮೊದಲು ಬುಧವಾರ ಬೆಳಗ್ಗಿನಿಂದಲೇ ಮಳೆಯನ್ನೂ ಲೆಕ್ಕಿಸದೆ ಅಂಗಡಿ, ಮಾರುಕಟ್ಟೆಗಳಲ್ಲಿ ಜನ ದೈಹಿಕ ಅಂತರ ಮರೆತು ಮುಗಿಬಿದ್ದು ಖರೀದಿ ಭರಾಟೆಯ ಭಾಗವಾದರು.
      ಲಾಕ್‌ಡೌನ್ ಸಾಧ್ಯತೆಯ ಸುಳಿವು ಸಿಕ್ಕಿದ್ದರಿಂದ ಸೋಮವಾರದಿಂದಲೇ ಮಾರುಕಟ್ಟೆಗಳಲ್ಲಿ ಜನಜಂಗುಳಿ ಇತ್ತು. ಗುರುವಾರದಿಂದ ಬೆಳಗ್ಗೆ 8ರಿಂದ 11 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಬುಧವಾರ ಸೂಪರ್ ಮಾರ್ಕೆಟ್, ಮಾಂಸದಂಗಡಿ, ತರಕಾರಿ ಅಂಗಡಿಗಳು ಗ್ರಾಹಕರಿಂದ ತುಂಬಿದ್ದವು. ಕೆಲವು ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿತ್ತು. ತಾಲೂಕು ಕೇಂದ್ರಗಳಲ್ಲೂ ಇದೇ ಸ್ಥಿತಿ ಇತ್ತು. ಮಂಗಳೂರು ನಗರ ಸಹಿತ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
      * ಮೀನು ಮಾರಾಟ: ನಾಡ ದೋಣಿಗಳಲ್ಲಿ ತೆರಳಿ ಹಿಡಿದ ತಾಜಾ ಬಂಗುಡೆ, ಸಿಗಡಿ, ಬೆರಕೆ, ಮಾಂಜಿ ಮೊದಲಾದ ಮೀನುಗಳ ಖರೀದಿ ಭರಾಟೆ ಪಣಂಬೂರು ಬೀಚ್‌ನಲ್ಲಿ ಜೋರಾಗಿತ್ತು. ಗುರುವಾರದಿಂದ ಮೀನು ಸಿಗಲಾರದೆಂದು ನೂರಾರು ಮಂದಿ ಬೆಲೆಯನ್ನು ಲೆಕ್ಕಿಸದೆ ಮೀನು ಖರೀದಿಸಿದರು.
      * ವೈನ್‌ಶಾಪ್‌ಗಳು ರಶ್: ಬಹುತೇಕ ಮದ್ಯ ಪ್ರಿಯರು ಒಂದು ವಾರಕ್ಕಾಗುವಷ್ಟು ಮದ್ಯ ಖರೀದಿಸಿ ಕೊಂಡೊಯ್ದಿದ್ದಾರೆ. ಎರಡು ದಿನಗಳಿಂದ ಎಲ್ಲ ಕಡೆ ಮದ್ಯದಂಗಡಿಗಳಿಗೆ ವ್ಯಾಪಾರ ಹೆಚ್ಚಿದ್ದು, ಕೆಲವು ಬ್ರಾಂಡ್‌ಗಳ ಸ್ಟಾಕ್ ಖಾಲಿಯಾಗಿತ್ತು.

    ತರಕಾರಿ ದರ ದುಪ್ಪಟ್ಟು: ಮಂಗಳೂರು ಸಹಿತ ಜಿಲ್ಲೆಯಲ್ಲಿ ಎರಡು ದಿನಗಳಿಂದ ತರಕಾರಿ, ಹಣ್ಣುಗಳ ದರ ದುಪ್ಪಟ್ಟಾಗಿದೆ. 28 ರೂ. ಇದ್ದ ಟೊಮ್ಯಾಟೊ ದರ 60 ರೂಪಾಯಿಗೆ ಏರಿಕೆಯಾಗಿದೆ. ಇದೇ ರೀತಿ ಬಟಾಟೆ 38ರಿಂದ 50ಕ್ಕೆ, ನೀರುಳ್ಳಿ 19ರಿಂದ 35ಕ್ಕೆ, ಕ್ಯಾರೆಟ್ 50ರಿಂದ 80ಕ್ಕೆ, ಸೋರೆಕಾಯಿ 18ರಿಂದ 40ಕ್ಕೆ, ಕ್ಯಾಪ್ಸಿಕಮ್ 80ರಿಂದ 150ಕ್ಕೆ, ಬೆಂಡೆ 22ರಿಂದ 40, ಹೀರೆಕಾಯಿ 42ರಿಂದ 65, ಬೀನ್ಸ್ 34ರಿಂದ 50, ಸೌತೆ 18ರಿಂದ 30, ಹಾಗಲಕಾಯಿ 63ರಿಂದ 100, ದಾಳಿಂಬೆ 105ರಿಂದ 150, ಮೂಸಂಬಿ 58ರಿಂದ 80, ಬಾಳೆ ಹಣ್ಣು ಕದಳಿ 65ರಿಂದ 80, ನೇಂದ್ರ 53ರಿಂದ 75, ಆ್ಯಪಲ್ 180ರಿಂದ 225 ರೂ.ಗೆ ಹೆಚ್ಚಳ ಕಂಡಿದೆ.
     ಲಾಕ್‌ಡೌನ್ ಕಠಿಣ: ಈ ಬಾರಿಯ ಲಾಕ್‌ಡೌನ್ ಕಠಿಣವಾಗಿರಲಿದೆ. ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬಂದರೆ ಪ್ರಕರಣ ದಾಖಲಿಸಲಾಗುತ್ತದೆ. ಪೊಲೀಸ್ ಅಧೀಕ್ಷಕರು ಹಾಗೂ ಆಯುಕ್ತರು ಎಲ್ಲ ಠಾಣಾಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಿದ್ದು, ಕಾನೂನು ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts