More

    80ರ ಗಡಿ ಮುಟ್ಟಿದ ರೂಪಾಯಿ: 79.98 ರೂ.ಗೆ ದಿನ ಅಂತ್ಯಕ್ಕೆ ವಿನಿಮಯ ದರ ಸ್ಥಿರ

    ನವದೆಹಲಿ: ಡಾಲರ್ ಎದುರು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 80 ರೂ. ಮುಟ್ಟಿ ನಂತರ ತುಸು ಚೇತರಿಕೆ ದಾಖಲಿಸಿದೆ. ವಿದೇಶಿ ವಿನಿಮಯ ಮಾರುಕಟ್ಟೆಯು 79.76 ರೂಪಾಯಿ ಮೂಲಕ ವಹಿವಾಟು ಆರಂಭಿಸಿ, ಮಧ್ಯಂತರದಲ್ಲಿ 80 ರೂ. ಗಡಿ ದಾಟಿತು. ಕಡೆಗೆ 16 ಪೈಸೆ ಇಳಿಕೆ ಆಗಿದ್ದು, 79.98 ರೂ.ಗೆ ದಿನ ಅಂತ್ಯಕ್ಕೆ ವಿನಿಮಯ ದರ ಸ್ಥಿರಗೊಂಡಿತು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರದ ಏರಿಳಿತದಿಂದ ವಿದೇಶಿ ಹೂಡಿಕೆದಾರರು ಷೇರುಪೇಟೆಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ರೂಪಾಯಿ ಅಧಪತನ ಮುಂದುವರಿದು ಈ ವರ್ಷದಲ್ಲಿ ಈವರೆಗೆ ಶೇ. 8ರಷ್ಟು ಕುಸಿತ ಕಂಡಿದೆ.

    ಅಡ್ಡಪರಿಣಾಮ ಏನು?: ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತವು ದೇಶದಲ್ಲಿ ಹಣದುಬ್ಬರ ಮತ್ತು ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ವಿಶೇಷವಾಗಿ ತೈಲ ಮತ್ತು ಅನಿಲ ಬೆಲೆ ಹೆಚ್ಚಲಿದೆ. ದೇಶದ ಅವಶ್ಯಕ ಇರುವ ತೈಲ ಪ್ರಮಾಣದಲ್ಲಿ ಶೇ. 80 ಹೊರಗಿನಿಂದ ಬರುತ್ತದೆ. ಇದರ ಖರೀದಿಗೆ ಹೆಚ್ಚು ಹಣ ವ್ಯಯ ಆಗಲಿದೆ. ವೇಗವಾಗಿ ಬಿಕರಿಯಾಗುವ ಸಾಮಗ್ರಿಗಳ ವಲಯದಲ್ಲಿ ಮಾರಾಟ ಇಳಿಕೆ ಆಗುವ ಸಾಧ್ಯತೆ ಇದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದ ಕಾರಣ ಶೇ. 15ರಷ್ಟು ಏರಿಕೆ ಸಂಭವ ಇದೆ. ಭಾರತ 1.35 ಕೋಟಿ ಟನ್ ಲೀಟರ್ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇ. 63ರಷ್ಟು ಬೇಡಿಕೆ ತಾಳೆ ಎಣ್ಣೆಗೆ ಇದೆ. ಏರ್​ಲೈನ್ಸ್ ನಿರ್ವಹಣೆ ದುಬಾರಿಯಾಗಲಿದೆ. ದೇಶ- ವಿದೇಶದಲ್ಲಿ ಪಡೆಯುವ ವೈಮಾನಿಕ ಸೇವೆಗಳಿಗೆ ಡಾಲರ್​ನಲ್ಲಿ ಪಾವತಿಸಬೇಕಿರುವ ಕಾರಣ ಖರ್ಚಿನ ಬಾಬ್ತು ಅಧಿಕವಾಗಲಿದೆ. ಆಮದು ಮಾಡಿಕೊಳ್ಳು ಎಲೆಕ್ಟ್ರಾನಿಕ್ಸ್ ವಸ್ತುಗಳು, ಸ್ಮಾರ್ಟ್ ಫೋನ್​ಗಳು ಬೆಲೆ ಏರಿದೆ. ತೈಲ ದರ ಏರಿಕೆಯ ಕಾರಣ ಸಿಮೆಂಟ್ ದರ, ಸರಕು ಸಾಗಣೆ ವೆಚ್ಚದಲ್ಲಿ ಹೆಚ್ಚಳ ಆಗುವ ಸಂಭವ ಇದೆ.

    ಪಾಕ್ ಕರೆನ್ಸಿ ಭಾರಿ ಕುಸಿತ: ಡಾಲರ್ ಎದರು ಪಾಕಿಸ್ತಾನದ ಕರೆನ್ಸಿ ಶೇ. 1.05ರಷ್ಟು ಕುಸಿತ ದಾಖಲಿಸಿದ್ದು, ಪ್ರತಿ ಡಾಲರ್​ಗೆ 212 ರೂಪಾಯಿ ವಿನಿಮಯ ದರ ಇದೆ.

    ರಫ್ತು ಉದ್ಯಮಗಳಿಗೆ ಹರ್ಷ: ಡಾಲರ್ ಮೌಲ್ಯ ಹೆಚ್ಚಿದಷ್ಟು ರಫ್ತು ಉದ್ಯಮಗಳು ಚೇತರಿಸಿಕೊಳ್ಳುತ್ತವೆ. ಐಟಿ ಕಂಪನಿಗಳ ಆದಾಯ ಡಾಲರ್ ಮೂಲಕವೇ ಬರುವ ಕಾರಣ ಈ ವಲಯದ ಹರ್ಷಗೊಂಡಿದೆ. ಜಾಗತಿಕವಾಗಿ ಔಷಧ ತಯಾರಿಕೆ ಮತ್ತು ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಡಾಲರ್ ದರ ಏರಿಕೆಯಿಂದ ಈ ವಲಯದ ಹುಮ್ಮಸ್ಸು ಹೆಚ್ಚಿದೆ. ಟೀ ಪುಡಿ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಇದರ ರಫ್ತುನಿಂದ ಈ ವರ್ಷ ಶೇ. 10ರಷ್ಟು ಲಾಭ ಹೆಚ್ಚಿಗೆ ಸಿಗುವ ನಿರೀಕ್ಷೆ ಇದೆ.

    ಷೇರುಪೇಟೆಯಲ್ಲಿ ಶೇಕಡ 1 ಚೇತರಿಕೆ: ಭಾರತದ ಷೇರುಪೇಟೆಯಲ್ಲಿ ಸೋಮವಾರದ ವಿಹಿವಾಟು ಶೇ.1ರಷ್ಟು ಚೇತರಿಕೆ ದಾಖಲಿಸಿದೆ. ಜಾಗತಿಕ ಷೇರುಪೇಟೆಯಲ್ಲಿನ ಮೇಲ್ಮುಖದ ಗಾಳಿಯು ಈ ಕಡೆಗೆ ಬೀಸಿ ಬಂದಿರುವುದಿಂದ ಚೇತರಿಕೆಯಲ್ಲಿ ಮುನ್ನಡೆದಿದೆ. ಸೆನ್ಸೆಕ್ಸ್ ನಲ್ಲಿ 760.37 ಅಂಶ (ಶೇ. 1.48) ಅಧಿಕವಾಗಿದ್ದು, ದಿನದ ಅಂತ್ಯಕ್ಕೆ 54,521.15ರಲ್ಲಿ ಸ್ಥಿರಗೊಂಡಿದೆ. ನಿಫ್ಟಿಯಲ್ಲಿ 229.30 ಪಾಯಿಂಟ್ (ಶೇ.1.43)ಏರಿಕೆ ಆಗಿದ್ದು, ದಿನದ ವಹಿವಾಟು 16,278.50ರಲ್ಲಿ ಕೊನೆಗೊಂಡಿದೆ. ಇಂಡಸ್​ಇಂಡ್ ಬ್ಯಾಂಕ್, ಇನ್ಪೋಸಿಸ್, ಟೆಕ್ ಮಹೀಂದ್ರಾ, ವಿಪ್ರೊ, ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫಿನ್​ಸರ್ವ್, ಆಕ್ಸಿಸ್ ಬ್ಯಾಂಕ್, ಕೊಟಾಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್​ಬಿಐ, ಅಲ್ಟ್ರಾಟೆಕ್ ಸಿಮೆಂಟ್, ಎಲ್​ಆಂಡ್​ಟಿ, ಟಾಟಾ ಸ್ಟೀಲ್, ಎಚ್​ಸಿಎಲ್, ಭಾರ್ತಿ ಏರ್​ಟೆಲ್, ಬಜಾ ಫೈನಾನ್ಸ್ ಷೇರು ಮೌಲ್ಯ ಏರಿಕೆ ಆಗಿದೆ. ಇನ್ನೊಂದೆಡೆ ಡಾ.ರೆಡ್ಡೀಸ್ ಲ್ಯಾಬ್, ಎಚ್​ಡಿಎಫ್​ಸಿ, ಎಂಆಂಡ್​ಎಂ, ಮಾರುತಿ ಕಂಪನಿಗಳ ಷೇರು ಮೌಲ್ಯ ಅಧೋಮುಖವಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ದರ್ಜೆಯ ತೈಲ ದರ ಶೇ. 1.82 ಏರಿಕೆಯಾಗಿ ಪ್ರತಿ ಬ್ಯಾರೆಲ್​ಗೆ 102.98 ಡಾಲರ್ ಬೆಲೆ ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts