More

    100 ಎಲೆಕ್ಟ್ರಿಕ್ ಬಸ್ ಸೇವೆಗೆ ಚಾಲನೆ; ಬಿಜೆಪಿ ವಿರುದ್ಧ ಸಿಎಂ, ಡಿಸಿಎಂ ಟೀಕಾ ಪ್ರಹಾರ

    ಬೆಂಗಳೂರು: ಮುಂಬರುವ ಏಪ್ರಿಲ್ ವೇಳೆಗೆ 1400 ಹೊಸ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರು ಮಹಾನಗರ ಸಾರಿಗೆಗೆ ಸೇರ್ಪಡೆ ಆಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
    ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ವಿದ್ಯುತ್ ಚಾಲಿತ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಆರ್ಥಿಕ ಶಕ್ತಿ ಮೂಲಕ ನಾಡಿನ ಸಮಸ್ತ ಮಹಿಳೆಯರಿಗೆ ಮತ್ತು ಬಡ, ಶ್ರಮಿಕ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ಇದನ್ನು ಸಾಧಿಸಲು ಕಾಂಗ್ರೆಸ್ ಸರ್ಕಾರವೇ ಬರಬೇಕಾಯಿತು. ಹಿಂದಿದ್ದ ಬಿಜೆಪಿ ಸರ್ಕಾರಗಳು ಇದನ್ನು ಸಾಧಿಸಲಿಲ್ಲ. ಬದಲಿಗೆ ಟೀಕಿಸುತ್ತಾ ಕುಳಿತಿವೆ ಎಂದರು.
    ರಾಜ್ಯದ 4 ಕೋಟಿ 30 ಲಕ್ಷ ಮಂದಿ ನೇರವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಆ ಮೂಲಕ ಬಡವರು ಮತ್ತು ದುಡಿಯುವ ವರ್ಗಗಳನ್ನು ಆರ್ಥಿಕ ಪ್ರಗತಿಯ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ಹೇಳಿದರು.
    ನಮ್ಮ ಗ್ಯಾರಂಟಿಗಳಿಂದ ಹೀಗಾಗಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಶಕ್ತಿಯೂ ಹೆಚ್ಚುತ್ತಿದೆ ಎಂದು ಸರ್ಕಾರದ ಜನೋಪಯೋಗಿ ಯೋಜನೆಯ ಪರಿಣಾಮಕಾರಿ ಫಲಿತಾಂಶವನ್ನು ವಿವರಿಸಿದ ಅವರು ಉಚಿತ ಬಸ್ ಪ್ರಯಾಣವನ್ನು ಬಿಜೆಪಿಯವರು ಟೀಕಿಸುತ್ತಿದ್ದಾರೆ. ಆದರೆ ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಈ ಜನೋಪಯೋಗಿ ಯೋಜನೆಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.
    ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ನಮ್ಮ ಸರ್ಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ಕಲ್ಪಿಸಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ 3 ಸಾವಿರ ಕೋಟಿ ಹೊರೆ ಬೀಳಬಹುದಾದರೂ, ಈ ಯೋಜನೆ ಪರಿಣಾಮವಾಗಿ ದೇವಾಲಯಗಳಲ್ಲಿ ಆದಾಯ ಹೆಚ್ಚಾಗಿದೆ. ಅದರ ಜತೆ ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಹೆಚ್ಚಾಗಿದೆ ಎಂದರು.
    ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದ ಪ್ರಧಾನಮಂತ್ರಿಗಳು ಈಗ ತಮ್ಮ ಸರ್ಕಾರದ ಜಾಹೀರಾತಿನಲ್ಲಿ ಮೋದಿ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದಾರೆ ಎಂದು ಹೇಳಿದರು.
    ಹಣ ಮತ್ತು ರಕ್ತ ಒಂದೇ ಕಡೆ ನಿಲ್ಲಬಾರದು. ಅದು ನಿರಂತರವಾಗಿ ಹರಿಯುತ್ತಿರಬೇಕು ಎಂದು ಸಾಯಿಬಾಬಾ ಅವರು ಒಂದು ಕಡೆ ಹೇಳಿದ್ದರು. ಹಣ ಒಂದೇ ಕಡೆ ಇದ್ದರೆ ಕಳ್ಳರು, ಆದಾಯ ತೆರಿಗೆ ಇಲಾಖೆ ಸಮಸ್ಯೆ ಬರುತ್ತವೆ. ಅದೇ ರೀತಿ ರಕ್ತ ಒಂದೇ ಕಡೆ ಸೇರಿಕೊಂಡರೆ ಆರೋಗ್ಯ ಸಮಸ್ಯೆ ಬರುತ್ತದೆ. ಹೀಗಾಗಿ ಇವೆರಡೂ ಹರಿದಾಡಬೇಕು. ನಮ್ಮ ಶಕ್ತಿ ಯೋಜನೆಯಿಂದ ಹಣ ಹರಿದಾಡುವಂತಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಕ್ರೀಡಾ ಸಚಿವ ನಾಗೇಂದ್ರ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ವಿಧಾನ್ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts