More

    ಕಿಟ್ ವಿತರಣೆ ವೇಳೆ ನಿಯಮ ಉಲ್ಲಂಘನೆ

    ಹಾವೇರಿ: ಕರೊನಾ ಎರಡನೇ ಅಲೆಯಿಂದಾಗಿ ಸೋಂಕು ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದೆ.

    ಜಿಲ್ಲಾಧಿಕಾರಿ ಆದೇಶದ ಪ್ರಕಾರ ನಾಲ್ಕಕ್ಕಿಂತ ಹೆಚ್ಚು ಜನರು ಎಲ್ಲಿಯೂ ಸೇರುವಂತಿಲ್ಲ. ಪ್ರತಿಭಟನೆ, ಸಭೆ-ಸಮಾರಂಭಗಳನ್ನು ನಡೆಸುವಂತಿಲ್ಲ. ಆದರೆ, ಜಿಲ್ಲೆಯ ಕೆಲವೆಡೆ ಬೇಕಾಬಿಟ್ಟಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಿಷೇಧಾಜ್ಞೆ ಉಲ್ಲಂಘಿಸಲಾಗುತ್ತಿದೆ.

    ಜಿಲ್ಲೆಯ ವಿವಿಧೆಡೆ ಸಂಘಟನೆ, ಸಂಘ-ಸಂಸ್ಥೆಗಳ ಹೆಸರಿನಲ್ಲಿ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಪ್ರತಿಭಟನೆ, ಕರೊನಾ ವಾರಿಯರ್ಸ್​ಗೆ ಸನ್ಮಾನ, ಆಹಾರ ಧಾನ್ಯ ಕಿಟ್ ವಿತರಣೆ, ಮನವಿ ಸಲ್ಲಿಕೆ ಸೇರಿ ಇತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ಕರೊನಾ ಪ್ರಸರಣ ಹೆಚ್ಚಾಗಲು ಕಾರಣರಾಗುತ್ತಿದ್ದಾರೆ.

    ಕಿಟ್ ವಿತರಣೆ ಹೆಸರಿನಲ್ಲಿ ನೂರಾರು ಜನರನ್ನು ಒಂದೆಡೆ ಸೇರುತ್ತಿದ್ದಾರೆ. ಇಂಥ ಸಮಯದಲ್ಲಿ ಯಾರೂ ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕಿಟ್​ಗಾಗಿ ಜನರು ಮುಗಿಬೀಳುತ್ತಿರುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ. ವಿತರಣೆ ಮಾಡುವವರು ಸಹ ಯಾವುದೇ ನಿಯಮ ಪಾಲಿಸುತ್ತಿಲ್ಲ.

    ಇನ್ನು ಕೆಲವೆಡೆ ವಿವಿಧ ಬೇಡಿಕೆ ಈಡೇರಿಸುವಂತೆ ತಹಸೀಲ್ದಾರ್, ಶಾಸಕರ ಜನ ಸಂಪರ್ಕ ಕಚೇರಿ ಸೇರಿ ವಿವಿಧೆಡೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುತ್ತಿದ್ದಾರೆ. ಈ ವೇಳೆ ಯಾರೊಬ್ಬರೂ ಸಮರ್ಪಕವಾಗಿ ಮಾಸ್ಕ್ ಧರಿಸುತ್ತಿಲ್ಲ. ಪರಸ್ಪರ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ.

    ಇತ್ತ ಜಿಲ್ಲಾಡಳಿತ ಸೋಂಕು ತಡೆಗೆ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಕರೊನಾ ಟೆಸ್ಟ್ ಮಾಡಿಸದ ಗ್ರಾಮವನ್ನೇ ಸೀಲ್​ಡೌನ್ ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಪೊಲೀಸರು ಪ್ರಮುಖ ವೃತ್ತಗಳಲ್ಲಿ ಮಾಸ್ಕ್ ಧರಿಸದೆ ಸಂಚರಿಸುವ ವಾಹನ ಸವಾರರ ವಿರುದ್ಧ ದಂಡ ವಿಧಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕಿಟ್ ವಿತರಣೆ, ಪ್ರತಿಭಟನೆ, ಮನವಿ ಸಲ್ಲಿಸುವ ವೇಳೆ ನಿಯಮ ಉಲ್ಲಂಘನೆ ಆಗುತ್ತಿರುವುದು ಜಿಲ್ಲಾಡಳಿತಕ್ಕೆ ಗೊತ್ತಿಲ್ಲವೇ ? ಅಥವಾ ಗೊತ್ತಿದ್ದೂ ಸುಮ್ಮನಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

    ಜಿಲ್ಲಾಡಳಿತ ಕೂಡಲೆ ನಿಯಮ ಉಲ್ಲಂಘಿಸುವವರ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts