ಬರ ಪರಿಹಾರ ವಿತರಣೆ ತಾರತಮ್ಯ ಸರಿಪಡಿಸಲು ರೈತರ ಆಗ್ರಹ

1 Min Read
ಬರ ಪರಿಹಾರ ವಿತರಣೆ ತಾರತಮ್ಯ ಸರಿಪಡಿಸಲು ರೈತರ ಆಗ್ರಹ

ರಾಣೆಬೆನ್ನೂರ: ಬರ ಪರಿಹಾರ ವಿತರಣೆಯಲ್ಲಿ ರೈತರಿಗೆ ತಾರತಮ್ಯ ಆಗುತ್ತಿದ್ದು, ಸರ್ಕಾರ ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಕೇಂದ್ರ ಸರ್ಕಾರ ಬರ ಪರಿಹಾರಕ್ಕಾಗಿ ಪ್ರತಿ ಒಂದು ಗುಂಟೆಗೆ 85 ರೂ. ನಿಗದಿಪಡಿಸಿದೆ. ಇದು ಒಂದು ಎಕರೆಗೆ 3500 ರೂ. ಆಗುತ್ತದೆ. ಆದರೆ ಸರ್ಕಾರ ಈ ಹಿಂದೆ ಎನ್‌ಡಿಆರ್‌ಎಫ್ ಅನುದಾನದಲ್ಲಿ ರೈತರ ಖಾತೆಗಳಿಗೆ 2 ಸಾವಿರ ರೂ. ವಿತರಣೆ ಮಾಡಿರುವುದನ್ನು ಪರಿಹಾರದ ಲೆಕ್ಕಕ್ಕೆ ಹಿಡಿದು ರೈತರಿಗೆ ಕೇವಲ 1500 ರೂ. ಮಾತ್ರ ಹಾಕುತ್ತಿದೆ.
ಅದು ಕೂಡ ಬಹಳಷ್ಟು ರೈತರಿಗೆ ಪರಿಹಾರ ಹಣ ಬಂದಿಲ್ಲ. ಅಧಿಕಾರಿಗಳನ್ನು ಕೇಳಿದರೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ. ಕೆವೈಸಿ ಮಾಡಿಸಿಲ್ಲ ಎಂಬುದು ಸೇರಿ ನಾನಾ ಕಾರಣಗಳನ್ನು ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಎಲ್ಲ ರೈತರಿಗೆ ಬರ ಪರಿಹಾರದ ಸಂಪೂರ್ಣ ಹಣ ಹಾಕಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತರಾದ ಕುಬೇರಪ್ಪ ಹುಳಿಹಳ್ಳಿ, ಮಹದೇವಪ್ಪ ಬಣಕಾರ, ಚಂದ್ರಶೇಖರ ಪಾಟೀಲ, ನಿಂಗಪ್ಪ ಸತ್ಯಪ್ಪನವರ, ಚಂದ್ರಶೇಖರ ತಿಮ್ಮೆನಹಳ್ಳಿ, ಚನ್ನಪ್ಪ ಅಡಿವೇರ, ಸಾವು ಗುಡ್ಡಣ್ಣನವರ, ರವಿ ಲಮಾಣಿ, ಲಕ್ಷ್ಮಣ ಗುಡಿಯವರ, ನಾಗರಾಜ ನಾಯ್ಕ, ಪುಲಿಕೇಶ ಹರಿಹರ, ನಾರಾಯಣ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.

See also  ಬಿತ್ತನೆ ಮಾಡಿದ್ದ ರೈತರಿಗೆ ಸಂತಸ
Share This Article