More

    ಪಾಳುಬಿದ್ದಿದೆ ರೇಷ್ಮೆ ಕೃಷಿ ಕ್ಷೇತ್ರ

    ಮುಂಡರಗಿ: ವಿವಿಧ ತಳಿಯ ರೇಷ್ಮೆ ಬೆಳೆ ಬೆಳೆದು ರೈತರಿಗೆ ತರಬೇತಿ ನೀಡುವ ಉದ್ದೇಶದಿಂದ ತಾಲೂಕಿನ ಹೆಸರೂರು ಸಮೀಪ ಪ್ರಾರಂಭಿಸಲಾದ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರವು ಸಮರ್ಪಕ ಸಿಬ್ಬಂದಿಯಿಲ್ಲದೇ ಸಂಪೂರ್ಣ ಪಾಳು ಬಿದ್ದಿದೆ.

    ತಾಲೂಕಿನ 175ಕ್ಕೂ ಹೆಚ್ಚು ರೈತರು ಅಂದಾಜು 144.47ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ಒಂದೆಡೆ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಸಿಬ್ಬಂದಿ ಇಲ್ಲದಿರುವುದು ಮತ್ತೊಂದೆಡೆ ಪಟ್ಟಣದಲ್ಲಿರುವ ರೇಷ್ಮೆ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ರೈತರಿಗೆ ಅನೇಕ ಯೋಜನೆಗಳು ತಲುಪದಂತಾಗಿದೆ.

    ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರವು 1978ರಲ್ಲಿ 20ಎಕರೆ ಪ್ರದೇಶದಲ್ಲಿ ಪ್ರಾರಂಭಗೊಂಡು ಸಮಪರ್ಕ ಸಿಬ್ಬಂದಿ, ಉತ್ತಮ ಆಡಳಿತದೊಂದಿಗೆ ಹೆಸರುವಾಸಿಯಾಗಿತ್ತು. ಆದರೆ, ಈಗ ರೇಷ್ಮೆ ಸಸಿ ತಯಾರಿಕೆ ಕಾರ್ಯ, ರೈತರಿಗೆ ತರಬೇತಿ ನಡೆಯುತ್ತಿಲ್ಲ. ರೇಷ್ಮೆ ಕೃಷಿ ಕ್ಷೇತ್ರದಲ್ಲಿ 1990ರಲ್ಲಿ 8ರೇಷ್ಮೆ ಅಧಿಕಾರಿ, 30 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ರೇಷ್ಮೆ ವಿಸ್ತರಣಾಧಿಕಾರಿ, ರೇಷ್ಮೆ ನಿರೀಕ್ಷಕ, ರೇಷ್ಮೆ ಪ್ರದರ್ಶಕ-2 ಸೇರಿ ಒಟ್ಟು 4 ಸಿಬ್ಬಂದಿ ಕಾರ್ಯನಿರ್ವಹಿಸಬೇಕಿತ್ತು. ಒಂದೂವರೆ ವರ್ಷದಿಂದ ಯಾವೊಬ್ಬ ನೌಕರನೂ ಇಲ್ಲದ ಕಾರಣ ಸಂಪೂರ್ಣ ಬಂದ್ ಆಗಿದೆ. ಗದಗ ರೇಷ್ಮೆ ಇಲಾಖೆಯಿಂದ ಒಬ್ಬ ಕಾವಲುಗಾರರನ್ನು ಮಾತ್ರ ನೇಮಿಸಲಾಗಿದೆ.

    ಅಂತರ್ಜಲ ಮಟ್ಟ ಕುಸಿತದಿಂದ 7ಕೊಳವೆ ಬಾವಿಗಳು ಬಂದ್ ಆಗಿವೆ. ಹೀಗಾಗಿ ಐದಾರು ವರ್ಷಗಳಿಂದ ರೇಷ್ಮೆ ಸಸಿ ತಯಾರಿಕೆ ಕಾರ್ಯ ನಡೆಯುತ್ತಿಲ್ಲ. 1998ರ ಜುಲೈನಲ್ಲಿ ಹೆಸರೂರ ತುಂಗಭದ್ರಾ ನದಿಯಿಂದ ಪೈಪ್​ಲೈನ್ ಜೋಡಿಸಿ ರೇಷ್ಮೆಕೃಷಿ ಕ್ಷೇತ್ರಕ್ಕೆ ನೀರು ಪೂರೈಸಲಾಗುತ್ತಿತ್ತು. ಹಲವಾರು ವರ್ಷಗಳಿಂದ ಪೈಪ್​ಲೈನ್ ದುರಸ್ತಿಯಲ್ಲಿರುವುದರಿಂದ ನದಿ ನೀರು ಪೂರೈಕೆ ಸಹ ಸ್ಥಗಿತಗೊಂಡಿದೆ.

    ಅನೈತಿಕ ಚಟುವಟಿಕೆ ತಾಣ: ರೇಷ್ಮೆ ಕೃಷಿ ಕ್ಷೇತ್ರ ಹೊರವಲಯದಲ್ಲಿರುವ ಕಾರಣ ಅನೈತಿಕ ಚಟುವಟಿಕೆ ತಾಣವಾಗಿದೆ. ಆವರಣದಲ್ಲಿ ಎಲ್ಲೆಂದರಲ್ಲಿ ಮದ್ಯದ ಪ್ಯಾಕೆಟ್​ಗಳೇ ಬಿದ್ದಿರುತ್ತವೆ. ರೇಷ್ಮೆ ಕೃಷಿ ಚಟುವಟಿಕೆ ನಡೆಯಬೇಕಿದ್ದ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ರೇಷ್ಮೆ ಬೆಳೆಗಾರರಲ್ಲಿ ಬೇಸರ ತರಿಸಿದೆ.

    ಇಲಾಖೆಯಲ್ಲಿ ಸಿಬ್ಬಂದಿ ಕೊರತೆ…

    ಪಟ್ಟಣದ ರೇಷ್ಮೆ ಇಲಾಖೆಯಲ್ಲಿ ನಿರೀಕ್ಷಕ, ಪ್ರದರ್ಶಕ-3, ಒಬ್ಬರು ಅಟೆಂಡರ್ ಕಾರ್ಯ ನಿರ್ವಹಿಸಬೇಕಿದೆ. ಆದರೆ ಸದ್ಯ ಒಬ್ಬ ಪ್ರದರ್ಶಕ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ರೇಷ್ಮೆ ಬೆಳೆಗಾರರಿಗೆ ಸಮರ್ಪಕ ಮಾಹಿತಿ ದೊರೆಯದಂತಾಗಿದೆ.

    ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಒಬ್ಬ ಸಿಬ್ಬಂದಿಯೂ ಇಲ್ಲದಂತಾಗಿದೆ. ರೈತರಿಗೆ ತರಬೇತಿ ಶಾಲೆ ಪ್ರಾರಂಭಿಸಲು ವಿಶಾಲ ಜಾಗವಿದೆ. ಸಮೀಪದಲ್ಲಿ ತುಂಗಭದ್ರಾ ನದಿ ಇದ್ದು ಸಮರ್ಪಕ ನೀರನ್ನು ಪಡೆದು ರೇಷ್ಮೆಯ ವಿವಿಧ ತಳಿಯ ಸಸಿಗಳನ್ನು ತಯಾರಿಸಿ ರೈತರಿಗೆ ಪರಿಚಯಿಸಬಹುದು. ರೇಷ್ಮೆ ಬೆಳೆಯಿಂದ ರೈತರು ಆರ್ಥಿಕವಾಗಿ ಸುಧಾರಿಸಲು ಸಹಕಾರಿಯಾಗುತ್ತದೆ. ರೇಷ್ಮೆ ಇಲಾಖೆ ಮತ್ತು ರೇಷ್ಮೆ ಕೃಷಿ ಕ್ಷೇತ್ರಕ್ಕೆ ಸಮರ್ಪಕ ಸಿಬ್ಬಂದಿಯನ್ನು ನಿಯೋಜಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
    | ವಿಶ್ವನಾಥ ಗಡ್ಡದ. ರೇಷ್ಮೆ ಬೆಳೆಗಾರರು

    ಗದಗ ಜಿಲ್ಲೆಯಲ್ಲೆ ಸಿಬ್ಬಂದಿ ಕೊರತೆ ಇದೆ. 49 ಸಿಬ್ಬಂದಿ ಪೈಕಿ ಕೇವಲ 13 ಜನರಿದ್ದಾರೆ. ಸಿಬ್ಬಂದಿ ಸಮಸ್ಯೆಯಿಂದ ಮುಂಡರಗಿಯ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಯಾವುದೆ ರೇಷ್ಮೆ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ರೇಷ್ಮೆ ಇಲಾಖೆಗೆ ಒಂದಿಷ್ಟು ಜಾಗ ಉಳಿಸಿಕೊಂಡು ಇನ್ನುಳಿದ ಜಾಗವನ್ನು ತಾತ್ಕಾಲಿಕವಾಗಿ ಅರಣ್ಯ ಇಲಾಖೆಗೆ ನೀಡಲು ಮೇಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
    | ಮಹಾದೇವಯ್ಯ ಎನ್. ರೇಷ್ಮೆ ಉಪ ನಿರ್ದೇಶಕ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts