More

    ಪಾಳು ಬಿದ್ದಿವೆ ವಸತಿ ಗೃಹ

    ಶಿರಸಿ: ಸರ್ಕಾರಿ ಇಲಾಖೆ ಸಿಬ್ಬಂದಿಗಾಗಿ ದಶಕದ ಹಿಂದೆ ನಿರ್ವಿುಸಿದ್ದ ತಾಲೂಕು ಪಂಚಾಯಿತಿ ವಸತಿ ಗೃಹಗಳು ದುರಸ್ತಿ ಕಾಣದೆ ಹಾಳು ಬಿದ್ದಿವೆ. ಇವುಗಳ ನಿರ್ವಹಣೆಗೆ ಅನುದಾನ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ.
    ಇಲ್ಲಿನ ತಾಲೂಕು ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿ ವಾಸಕ್ಕೆ ಯಲ್ಲಾಪುರ ರಸ್ತೆ ಸ್ತ್ರೀಶಕ್ತಿ ಭವನದ ಹಿಂಭಾಗದಲ್ಲಿ 9 ವಸತಿ ಗೃಹಗಳನ್ನು ದಶಕದ ಹಿಂದೆ ನಿರ್ವಿುಸಲಾಗಿತ್ತು. ಆರಂಭದಲ್ಲಿ ಈ ವಸತಿ ಗೃಹಗಳಲ್ಲಿ ತಾಪಂ ಸಿಬ್ಬಂದಿ ಸೇರಿ ಇತರ ಸರ್ಕಾರಿ ಕಚೇರಿಗಳ ಸಿಬ್ಬಂದಿ ವಾಸ ಮಾಡಿದ್ದರು. ಕಾಲಕ್ರಮೇಣ ಇಲ್ಲಿ ನೆಲೆಸಿದ್ದ ಸಿಬ್ಬಂದಿ ವರ್ಗಾವಣೆಗೊಂಡ ಬಳಿಕ ಖಾಲಿಯಾದ ವಸತಿ ಗೃಹಗಳಲ್ಲಿ ಯಾರೂ ವಾಸಿಸಲಿಲ್ಲ. ಸದ್ಯ ಇಲ್ಲಿರುವ ಮೂರು ಮನೆಗಳಲ್ಲಿ ಶಿಕ್ಷಣ, ಪಂಚಾಯತ್​ರಾಜ್ ಹಾಗೂ ತಾಪಂ ಸಿಬ್ಬಂದಿಯೊಬ್ಬರು ವಾಸಿಸುತ್ತಿದ್ದಾರೆ. ಉಳಿದಂತೆ 6 ವಸತಿ ಗೃಹಗಳು ಖಾಲಿ ಇವೆ.
    ಅನುದಾನ ಕಡಿಮೆ: ಈ ವಸತಿ ಗೃಹಗಳ ನಿರ್ವಹಣೆಗಾಗಿ ತಾಲೂಕು ಪಂಚಾಯಿತಿಗೆ ಇರುವ ಅನುದಾನ ಮೊತ್ತ ತೀರಾ ಕಡಿಮೆ. ಅದೂ ಅಲ್ಲದೆ, ಕೆಲ ತಾಲೂಕು ಪಂಚಾಯಿತಿ ಸದಸ್ಯರು ಈ ಮನೆಗಳ ನಿರ್ವಹಣೆಗಾಗಿ ಮೊತ್ತ ತೆಗೆದಿಡಲು ಆಸ್ಪದ ನೀಡಿರಲಿಲ್ಲ. ಹೀಗಾಗಿ ಹಾಳಾದ ವಸತಿ ಗೃಹಗಳನ್ನು ದುರಸ್ತಿಗೊಳಿಸಲಾಗದೆ ಹಂತಹಂತವಾಗಿ ಹಾಳಾಗಿದೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಮನೆಗಳು ಕಾಣದಷ್ಟು ಗಿಡಗಂಟಿಗಳು ಬೆಳೆದು ನಿಂತಿವೆ. ಕೆಲವು ಮನೆಗಳ ಹಂಚು, ರೀಪು, ಪಕಾಸು ಕಳ್ಳರ ಪಾಲಾಗಿವೆ. ಹಾವು ಸೇರಿ ವಿಷ ಜಂತುಗಳು ಇಲ್ಲಿ ವಾಸಿಸುತ್ತಿದ್ದು, ಸುತ್ತಮುತ್ತಲ ನಿವಾಸಿಗಳ ಆತಂಕಕ್ಕೂ ಕಾರಣವಾಗಿದೆ.
    ದುರಸ್ತಿಗೊಳಿಸಿ: ಸುಸಜ್ಜಿತವಾಗಿದ್ದ ಈ ವಸತಿ ಗೃಹಗಳು ಬಳಕೆ ಹಾಗೂ ನಿರ್ವಹಣೆಯಿಲ್ಲದ ಕಾರಣದಿಂದ ಹಾಳಾಗಿವೆ. ಕೆಲವೊಂದು ಸರ್ಕಾರಿ ಇಲಾಖೆ ಸಿಬ್ಬಂದಿ ವಸತಿ ಗೃಹವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇಂಥವರಿಗಾಗಿ ಪಾಳು ಬಿದ್ದಿರುವ ಈ ವಸತಿ ಗೃಹಗಳನ್ನು ದುರಸ್ತಿಗೊಳಿಸಬೇಕಿದೆ.


    ಹಾಳಾಗಿರುವ ವಸತಿ ಗೃಹಗಳನ್ನು ಕೆಡವಿ ಹೊಸದಾಗಿ ಕಟ್ಟಡ ಕಟ್ಟಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಹೊಸ ಕಟ್ಟಡ ರೂಪಗೊಂಡರೆ ಸರ್ಕಾರಿ ಸಿಬ್ಬಂದಿಗೆ ಅನುಕೂಲವಾಗುತ್ತದೆ.
    | ಗಿರೀಶ ರೇವಣಕರ
    ಸ್ಥಳೀಯ ನಿವಾಸಿ
    ಯಾರಾದರೂ ವಾಸ ಮಾಡಿದರೆ ಮಾತ್ರ ಮನೆಗಳು ಉತ್ತಮ ಸ್ಥಿತಿಯಲ್ಲಿ ಇರುತ್ತವೆ. ಆದರೆ ಇಲ್ಲಿ ವಾಸ ಮಾಡದೆ ಹಾಗೆಯೇ ಬಿಟ್ಟ ಕಾರಣ ಮಳೆಗಾಲದಲ್ಲಿ ಹಾಳಾಗಿವೆ. ಇದೀಗ ಈ ಜಾಗದಲ್ಲಿ ಹೊಸ ಕಟ್ಟಡ ಸಮುಚ್ಛಯ ನಿರ್ವಿುಸಲು ಅಂದಾಜು 5 ಕೋಟಿ ರೂ. ಮೊತ್ತದ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಚಿಂತನೆ ಮಾಡಲಾಗಿದೆ.
    | ಎಫ್.ಜಿ. ಚಿನ್ನಣ್ಣನವರ ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts