More

    ಅತಿಥಿ ಉಪನ್ಯಾಸಕರ ಅಸಭ್ಯ ವರ್ತನೆ: ಎಬಿವಿಪಿ ಪ್ರತಿಭಟನೆ

    ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವುದರ ಜತೆಗೆ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.

    ಕಾಲೇಜಿನ ಮುಂಭಾಗ ಶಿವಮೊಗ್ಗ-ಭದ್ರಾವತಿ ರಸ್ತೆಯಲ್ಲಿ ಕೆಲ ಸಮಯ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರ ವಿರುದ್ಧ ಕಾನೂನು ಕ್ರಮಕ್ಕೆ ಪಟ್ಟು ಹಿಡಿದರು. ಕೆಲ ಸಮಯದ ಬಳಿಕ ರಸ್ತೆಯಿಂದ ಕಾಲೇಜು ಆವರಣಕ್ಕೆ ತೆರಳಿಒಂದು ತಾಸು ಪ್ರತಿಭಟನೆ ನಡೆಸಿದರು.
    45 ವರ್ಷದ ಅತಿಥಿ ಉಪನ್ಯಾಸಕ ವಿದ್ಯಾರ್ಥಿನಿಯರ ಮೊಬೈಲ್‌ಗೆ ರಾತ್ರಿ ವೇಳೆ ಸಂದೇಶಗಳನ್ನು ಕಳಿಸುತ್ತಾರೆ. ವಿದ್ಯಾರ್ಥಿಗಳನ್ನು ಕಳುಹಿಸಿ ವಿದ್ಯಾರ್ಥಿನಿಯರಿಗೆ ಮಾತ್ರ ಕೆಲವೊಮ್ಮೆ ತರಗತಿ ನಡೆಸುತ್ತಾರೆ. ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯವಾಗಿ ವರ್ತಿಸುತ್ತಾರೆ. ಪಾಠ ಮಾಡುವ ಸಂದರ್ಭದಲ್ಲಿ ಅಸಭ್ಯ ವಾಕ್ಯ ಪ್ರಯೋಗ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
    ಇವರ ವಿರುದ್ಧ ವಿದ್ಯಾರ್ಥಿನಿಯರು ಪ್ರಾಚಾರ್ಯರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕಳೆದ ವರ್ಷವೂ ಇದೇ ಉಪನ್ಯಾಸಕರು ಅಸಭ್ಯ ವರ್ತನೆ ತೋರಿದ್ದರು. ಆ ಸಂದರ್ಭದಲ್ಲೇ ಸಂಬಂಧಪಟ್ಟವರಿಗೆ ವಿಷಯ ತಿಳಿಸಲಾಗಿತ್ತು. ಈಗ ಮತ್ತೆ ಅವರ ಚಾಳಿ ಮುಂದುವರಿದಿದೆ ಎಂದು ದೂರಿದರು.
    ಈ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು. ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಇಲ್ಲದಿದ್ದರೆ ಎಬಿವಿಪಿ ನೇತೃತ್ವದಲ್ಲಿ ಕುವೆಂಪು ವಿವಿಗೆ ಮುತ್ತಿಗೆ ಹಾಕಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿ ಪ್ರತಿಭಟನೆ ಮುಕ್ತಾಯಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts