More

    ಸಂಕಷ್ಟದಲ್ಲಿ ರಬ್ಬರ್ ಬೆಳೆಗಾರ

    ಶ್ರವಣ್‌ಕುಮಾರ್ ನಾಳ, ಪುತ್ತೂರು

    ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶಾದ್ಯಂತ ಟೈರ್ ಹಾಗೂ ರಬ್ಬರ್ ಉತ್ಪನ್ನ ಉತ್ಪಾದಕ ಕಂಪನಿಗಳು ಬಾಗಿಲು ಮುಚ್ಚಿದ್ದರಿಂದ ರಬ್ಬರ್ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.
    2019ರ ೆಬ್ರವರಿ ವೇಳೆ ಐಟಿಆರ್‌ಸಿ ಒಪ್ಪಂದದನ್ವಯ ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್‌ನಿಂದ ರಬ್ಬರ್ ಆಮದು ಭಾರತಕ್ಕೆ ಕಡಿತವಾಗಿದ್ದರಿಂದ ಭಾರತದ ರಬ್ಬರ್ ಮಾರುಕಟ್ಟೆ 2020ರ ಆರಂಭದಲ್ಲಿ ತುಸು ಚೇತರಿಕೆ ಹಾದಿಯಲ್ಲಿತ್ತು. ಭಾರತದಲ್ಲಿ 12 ಲಕ್ಷ ಮೆಟ್ರಿಕ್ ಟನ್ ರಬ್ಬರ್ ವಾರ್ಷಿಕ ಉತ್ಪಾದನೆಯಾದರೂ, 6.96 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ. ಐಟಿಆರ್‌ಸಿ ಒಪ್ಪಂದದನ್ವಯ ವಿದೇಶಿ ರಬ್ಬರ್ ಆಮದು ಸ್ಥಗಿತವಾಗಿದ್ದರಿಂದ ದೇಶೀಯ ರಬ್ಬರ್‌ಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ನಡುವೆ ಲಾಕ್‌ಡೌನ್ ೋಷಣೆಯಾಗಿದೆ. ಇದರಿಂದ ದೇಶೀಯ ರಬ್ಬರ್ ಖರೀದಿಗೆ ಸಿದ್ಧತೆ ನಡೆಸುತ್ತಿದ್ದ ರಬ್ಬರ್ ಉತ್ಪನ್ನ ತಯಾರಿಕಾ ಕಂಪನಿಗಳು ಚಟುವಟಿಕೆ ಸ್ಥಗಿತಗೊಳಿಸಿವೆ.

    ರಬ್ಬರ್ ಧಾರಣೆ ಇಳಿಕೆ: ಭಾರತದಲ್ಲಿ ಉತ್ಪಾದನೆಯಾಗವ 12 ಲಕ್ಷ ಮೆಟ್ರಿಕ್ ಟನ್ ರಬ್ಬರ್‌ನಲ್ಲಿ ರಾಜ್ಯದ ಪಾಲು 40 ಸಾವಿರ ಮೆಟ್ರಿಕ್ ಟನ್. ರಾಜ್ಯದ ರಬ್ಬರ್ ಉತ್ಪ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿಯತೊಡಗಿದ್ದರಿಂದ ರಬ್ಬರ್ ಬೋರ್ಡ್ ಅಧೀನದ ಕಾಞಂಗಾಡ್ ರಬ್ಬರ್ಸ್ ಕಂಪನಿ ಬೆಳೆಗಾರರ ರಬ್ಬರ್ ತೋಟ ದತ್ತು ಪಡೆಯಲು ನಿರ್ಧರಿಸಿತ್ತು. ಈ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದರಿಂದ ರಬ್ಬರ್‌ಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿತ್ತು.
    2020ರ ಆರಂಭದಲ್ಲಿ ಆರ್ಥಿಕ ಹಿಂಜರಿತದಿಂದ ಬಹುತೇಕ ಟೈರ್ ಹಾಗೂ ರಬ್ಬರ್ ಉತ್ಪನ್ನ ಉತ್ಪಾದಕ ಕಂಪನಿಗಳು ಉತ್ಪಾದನೆ ಕಡಿತಗೊಳಿಸಿವೆ. ಈ ವೇಳೆ ರಬ್ಬರ್ ಧಾರಣೆ ಇಳಿಕೆಯತ್ತ ಸಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ 8 ವಾರಗಳಿಂದ ನಿರಂತರ ಬೆಲೆ ಇಳಿಕೆ, ನುರಿತ ಟ್ಯಾಪರ್‌ಗಳ ಕೊರತೆ, ಹೆಚ್ಚಾಗುತ್ತಿರುವ ಟ್ಯಾಪಿಂಗ್ ವೆಚ್ಚಗಳಿಂದ ಬಹುತೇಕ ಬೆಳೆಗಾರರು ರಬ್ಬರ್ ಉತ್ಪಾದನಾ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಗೋದಾಮುಗಳಲ್ಲೇ ಬಾಕಿ
    ದ.ಕ. ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್ ಸಹಿತ ರಾಜ್ಯದಲ್ಲಿ 50 ಸಾವಿರ ಹೆಕ್ಟೇರ್ ರಬ್ಬರ್ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ 87 ರಬ್ಬರ್ ಉತ್ಪಾದಕರ ಸಹಕಾರಿ ಸಂಘವಿದ್ದು, ಪ್ರಸ್ತುತ 8 ರಬ್ಬರ್ ಉತ್ಪಾದಕರ ಸಹಕಾರಿ ಸಂಘ ಬೆಳೆಗಾರರಿಂದ ಸೀಮಿತ ರಬ್ಬರ್ ಖರೀದಿ ನಡೆಸುತ್ತಿದೆ. ಪ್ರಸ್ತುತ ರಬ್ಬರ್ ಆರ್‌ಎಸ್‌ಎಸ್ 4- 114 ರೂ., ಆರ್‌ಎಸ್‌ಎಸ್ 5-111 ರೂ., ಲಾಟ್- 100 ರೂ. ಸ್ಕ್ರಾಪ್-1-69 ರೂ., ಸ್ಕ್ರಾಪ್-2- 61 ರೂ. ಧಾರಣೆ ಇದೆ. ಒಬ್ಬ ಬೆಳೆಗಾರ ಗರಿಷ್ಠ 100 ಕೆ.ಜಿ ರಬ್ಬರ್ ಮಾತ್ರ ವಾರಕ್ಕೊಮ್ಮೆ ಮಾರಾಟ ಮಾಡಬಹುದು. ರಾಜ್ಯದಲ್ಲಿ 87 ರಬ್ಬರ್ ಉತ್ಪಾದಕರ ಸಹಕಾರಿ ಸಂಘದ ಗೋದಾಮುಗಳಲ್ಲಿ ರಬ್ಬರ್ ಬಾಕಿಯಾಗಿದ್ದು, ವಿವಿಧ ಕಂಪನಿಗಳು ಲಾಕ್‌ಡೌನ್ ಹಿನ್ನೆಲೆಯಲ್ಲಿ ರಬ್ಬರ್ ಖರೀದಿಸುತ್ತಿಲ್ಲ.

    ಲಾಕ್‌ಡೌನ್ ಹಿನ್ನೆಲೆ ರಬ್ಬರ್ ಉತ್ಪನ್ನ ಉತ್ಪಾದಕ ಕಂಪನಿಗಳು ತೆರೆದಿಲ್ಲ. ಇದರಿಂದ ರಬ್ಬರ್ ಸರಬರಾಜಿಗೆ ತೊಂದರೆಯಾಗಿ ಬೆಲೆ ಇಳಿಕೆಯಾಗಿದೆ. ವಿದೇಶಿ ರಬ್ಬರ್ ಆಮದು ಕಡಿತವಾಗಿದ್ದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ರಬ್ಬರ್ ಬೇಡಿಕೆ ಹೆಚ್ಚಾಗಲಿದೆ. ಈ ವೇಳೆ ರಬ್ಬರ್ ಧಾರಣೆಯೂ ಏರಿಕೆ ಕಾಣಲಿದೆ.
    – ಕರ್ನಲ್ ಎಸ್.ಶರತ್ ಭಂಡಾರಿ, ಅಖಿಲ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts