ನವದೆಹಲಿ: ಜಾಗತಿಕ ಕ್ರೀಡಾಲೋಕದಲ್ಲಿ ಉದ್ದೀಪನ ಮದ್ದು ಯಾವಾಗಲೂ ಸದ್ದು ಮಾಡುತ್ತಲೇ ಇರುತ್ತದೆ. ಯುವ ಕ್ರೀಡಾಪಟುಗಳ ಪಾಲಿಗಂತೂ ಇದು ಮಾರಕವಾಗಿಯೇ ಇದೆ. ತಿಳಿದೋ, ತಿಳಿದೆಯೋ ಅದೆಷ್ಟೋ ಕ್ರೀಡಾಪಟುಗಳ ಭವಿಷ್ಯ ನಿಷೇಧಿತ ಉದ್ದೀಪನದಿಂದ ಹಾಳಾಗಿರುವುದು ಹೊಸದಲ್ಲ. ಕೋಚ್, ಫಿಸಿಯೋ ಸಲಹೆ ಮೇರೆಗೆ ಸೇವಿಸುವ ಔಷಧಿಗಳು ಕೂಡ ಮಾರಕವಾಗಿರುವುದನ್ನು ನೋಡಿದ್ದೇವೆ. ಇದೀಗ ಭಾರತದ ಜೂನಿಯರ್ ಮಟ್ಟದ ರೋವರ್ಸ್ ತೆಗೆದುಕೊಂಡಿದ್ದ ಪೌಷ್ಠಿಕ ಆಹಾರದಲ್ಲೇ ಉದ್ದೀಪನವಿತ್ತು ಎಂದು ಭಾರತೀಯ ರೋಯಿಂಗ್ ಫೆಡರೇಷನ್ ಪ್ರತಿಪಾದಿಸಿದೆ.
ಇದನ್ನೂ ಓದಿ:ಇಂಗ್ಲೆಂಡ್ ಪ್ರವಾಸಕ್ಕೆ ಹೊರಟು ನಿಂತ ಪಾಕಿಸ್ತಾನದ 10 ಕ್ರಿಕೆಟಿಗರಿಗೆ ಕರೊನಾ!
2019ರ ಡಿಸೆಂಬರ್ 16ರಿಂದ 29ರವರೆಗೆ ಥಾಯ್ಲೆಂಡ್‌ನಲ್ಲಿ ನಡೆದ ಏಷ್ಯನ್ ಜೂನಿಯರ್ ರೋಯಿಂಗ್ ಚಾಂಪಿಯನ್‌ಷಿಪ್‌ನಲ್ಲಿ 16 ರಿಂದ 18 ವಯೋಮಿತಿಯ ವಿಭಾಗದಲ್ಲಿ 24 ಮಂದಿ ಭಾರತ ಪ್ರತಿನಿಧಿಸಿದ್ದರು. ಇವರ ಪೈಕಿ 22 ಮಂದಿಗೆ ಡೋಪಿಂಗ್‌ನಲ್ಲಿ ವಿಫಲವಾಗಿರುವುದು ಬೆಳಕಿಗೆ ಬಂದಿದೆ. ಇದು ಭಾರತೀಯ ರೋಯಿಂಗ್ ಫೆಡರೇಷನ್‌ಗೆ (ಆರ್‌ಎಫ್ಐ) ಮುಜುಗರ ಉಂಟುಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರ್‌ಎಫ್ಐ ಪ್ರಧಾನ ಕಾರ್ಯದರ್ಶಿ ಎಂವಿ ಶ್ರೀರಾಮ್, ರಾಷ್ಟ್ರೀಯ ಶಿಬಿರದ ವೇಳೆ ಸ್ವೀಕರಿಸಿದ ಊಟದ ವ್ಯತ್ಯಾಸದಿಂದಲೇ ಇಂಥ ಅವಘಡ ಸಂಭವಿಸಿದೆ ಎಂದು ಹೇಳಿಕೊಂಡಿದ್ದಾರೆ. ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಖೇಲೋ ಇಂಡಿಯಾ ಕೂಟದಿಂದ ಕ್ರೀಡಾಪಟುಗಳನ್ನು ಆಯ್ಕೆಮಾಡಿಕೊಳ್ಳಲಾಗಿತ್ತು.
ಇದನ್ನೂ ಓದಿ:ದೇಶೀಯ ಕ್ರಿಕೆಟ್ ದಿಗ್ಗಜ ವಾಸಿಂ ಜಾಫರ್ ಈಗ ಕೋಚ್…
ಕೂಟದಲ್ಲಿ ಭಾರತದ ರೋವರ್ಸ್ 2 ಬೆಳ್ಳಿ ಪದಕ ಜಯಿಸಿದ್ದರು. 1982ರಿಂದಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಯಿಂಗ್ ವಿಭಾಗದಲ್ಲಿ ಭಾರತ ಪದಕ ಗೆಲುತ್ತಾ ಬಂದಿದೆ. ಇದೀಗ ಸಂಪೂರ್ಣ ತನಿಖೆಯಿಂದಲೇ ನಿಜಾಂಶ ಹೊರಬೀಳಬೇಕಿದೆ.
ಕರೊನಾ ವೈರಸ್ ವಿರುದ್ಧ ಹೋರಾಟ ಕಂಪ್ಯೂಟರ್ ಜತೆ ಚೆಸ್ ಆಡಿದಂತೆ!