More

    ಗುಂಡಿನ ದಾಳಿಗೆ ಬೆಚ್ಚಿದ ಬೆಂಬಲಿಗರು

    ಪರಶುರಾಮ ಭಾಸಗಿ

    ವಿಜಯಪುರ : ರೌಡಿಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಭೀಮಾತೀರದಲ್ಲಿ ತೀವ್ರ ಸಂಚಲನ ಮೂಡಿಸಿದ್ದು ಇದೀಗ ಸಾಹುಕಾರ ಬೆಂಬಲಿರು ಅದರಲ್ಲೂ ಚಡಚಣ ಸಹೋದರರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ನಡುಕ ಹುಟ್ಟಿಸಿದೆ.
    ನ. 2 ರಂದು ರಾಷ್ಟ್ರೀಯ ಹೆದ್ದಾರಿ ಮೇಲೆ ಹಾಡಹಗಲೇ ಟಿಪ್ಪರ್ ಹಾಯಿಸಿ ಕಂಟ್ರಿ ಪಿಸ್ತೂಲ್ ಹಾಗೂ ಪೆಟ್ರೋಲ್ ಬಾಂಬ್‌ನೊಂದಿಗೆ ನಡೆದ ದಾಳಿಯ ಭೀಕರತೆ ಗಮನಿಸಿದರೆ ಇನ್ನುಳಿದವರ ಮೇಲೂ ದಾಳಿ ನಡೆಯುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಘಟನೆಯಲ್ಲಿ ಸಾಹುಕಾರ ಜತೆಗಿದ್ದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚದಿದ್ದರೆ ಇನ್ನುಳಿದವರ ಮೇಲೂ ದಾಳಿ ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂಬುದು ಪ್ರಮುಖ ಆರೋಪಿಗಳ ಆತಂಕ.

    ಯಾರು ಆ ಆರೋಪಿಗಳು?

    ಅ. 30, 2017ರಂದು ಬೆಳಗ್ಗೆ 7.30ಕ್ಕೆ ಭೀಮಾತೀರದ ಕೊಂಕಣಗಾಂವದಲ್ಲಿ ನಡೆದ ಚಡಚಣ ಸಹೋದರರ (ಧರ್ಮರಾಜ ಮತ್ತು ಗಂಗಾಧರ) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ 15 ಜನರ ಮೇಲೇ ಚಾರ್ಜ್‌ಶೀಟ್ ಸಲ್ಲಿಸಿದೆ. ಆ ಪೈಕಿ ಗುಂಡೇಟಿಗೆ ಒಳಗಾದ ಮಹಾದೇವ ಸಾಹುಕಾರ ಭೈರಗೊಂಡ ಎ-1 ಆರೋಪಿ. ಇನ್ನುಳಿದಂತೆ ಹಣಮಂತ ಪೂಜಾರಿ, ಸಿದ್ದಗೊಂಡ ತಿಕ್ಕೊಂಡಿ, ಸಿದಗೊಂಡಪ್ಪ ಮುಡವೆ, ಭಾಷಾ ನದಾಫ್, ಶಿವಾನಂದ ಬಿರಾದಾರ, ಚಾಂದಸಾಬ ಚಡಚಣ, ಭೀಮು ಪೂಜಾರಿ, ಸಿಪಿಐ ಎಂ.ಬಿ. ಅಸೋದೆ, ಪಿಎಸ್‌ಐ ಗೋಪಾಲ ಹಳ್ಳೂರ, ಪೇದೆಗಳಾದ ಸಿದ್ದಾರೂಢ ರೂಗಿ, ಚಂದ್ರಶೇಖರ ಜಾಧವ, ನಾಯ್ಕೋಡಿ ಮತ್ತಿತರರು ಪ್ರಮುಖ ಆರೋಪಿಗಳಾಗಿದ್ದಾರೆ.
    ಜಾಮೀನಿನ ಮೇಲೆ ಹೊರಗಿರುವ ಈ ಎಲ್ಲ ಆರೋಪಿಗಳು ಈವರೆಗೆ ರಾಜಾರೋಷವಾಗಿಯೇ ಸಂಚರಿಸುತ್ತಿದ್ದರು. ಆದರೆ, ಇದೀಗ ಎ-1 ಆರೋಪಿ ಸಾಹುಕಾರನ ಮೇಲೆಯೇ ದಾಳಿ ನಡೆಯುತ್ತಿದ್ದಂತೆ ಆತಂಕ ಶುರುವಾಗಿದೆ.

    ಹಂತಕರ ಬಂಧನಕ್ಕೆ ಒತ್ತಾಯ

    ಸಾಹುಕಾರ ಮೇಲಿನ ಹಲ್ಲೆ ಚಡಚಣ ಸಹೋದರರ ಪ್ರತೀಕಾರದ ಪ್ರತೀಕ ಎನ್ನಲಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಇನ್ನುಳಿದವರ ಮೇಲೂ ದಾಳಿ ನಡೆದರೆ ಅಚ್ಚರಿ ಪಡಬೇಕಿಲ್ಲ ಎಂಬುದು ಆರೋಪಿ ಹಣಮಂತ ಪೂಜಾರಿ ಅಭಿಪ್ರಾಯ.
    ಹೇಗೂ ಗಂಭೀರ ಗಾಯಗೊಂಡಿರುವ ಸಾಹುಕಾರ ಆಸ್ಪತ್ರೆಯಲ್ಲಿದ್ದು ಇದೇ ಸಂದರ್ಭದಲ್ಲಿ ಇನ್ನುಳಿದವರ ಮೇಲೂ ಹಲ್ಲೆ ಮಾಡುವ ಸಾಧ್ಯತೆ ಇರುತ್ತದೆ. ಧರ್ಮರಾಜನ ಅಪ್ಪ ಮಲ್ಲಿಕಾರ್ಜುನ ತಲೆ ಮರೆಸಿಕೊಂಡು 20-30 ವರ್ಷ ಆಯ್ತು. ಈವರೆಗೂ ಪತ್ತೆಯಾಗಿಲ್ಲ. ವೈರಿಗಳಲ್ಲದಿದ್ದರೂ ಜನಸಾಮಾನ್ಯರನ್ನು ಕೊಲೆ ಮಾಡಲು ಚಡಚಣ ಕುಟುಂಬದವರು ‘ಅಡಕಿ ಹಿಡಿ’ಯುತ್ತಲೇ ಬಂದಿದ್ದಾರೆ. ಸಾಹುಕಾರ ಮೇಲೆಯೇ ದಾಳಿ ನಡೆದ ಮೇಲೆ ನಮ್ಮಂಥವರ ಗತಿಯೇನು? ಎಂಬುದು ಪೂಜಾರಿ ಆತಂಕ.
    ಒಟ್ಟಿನಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಎಂಬ ಎಂಟೆದೆಯ ಭಂಟನ ಮೇಲೆ ನಡೆದ ದಾಳಿ ಹಿಂಬಾಲಕರನ್ನು ವಿಚಲಿತರನ್ನಾಗಿಸಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂಬ ಕೂಗು ಬಲಗೊಂಡಿದೆ.

    ನಮ್ಮಂಥವರು ಸಾವಿರ ಜನ ಸತ್ತರೂ ಚಿಂತೆಯಿಲ್ಲ. ಮಹಾದೇವ ಸಾಹುಕಾರ ಉಳಿಯಬೇಕು. ಆರೋಪಿಗಳು ಶೀಘ್ರ ಪತ್ತೆಯಾಗಬೇಕು. ಇಲ್ಲವಾದಲ್ಲಿ ಇದೇ ಸಂದರ್ಭ ಬಳಸಿಕೊಂಡು ಹಿಂಬಾಲಕರನ್ನೂ ಹೊಡೆಯಬಹುದು.
    ಹಣಮಂತ ಪೂಜಾರಿ, ಸಾಹುಕಾರ ಸಹಚರ ಹಾಗೂ ಚಡಚಣ ಸಹೋದರರ ಕೊಲೆ ಪ್ರಕರಣದ ಆರೋಪಿ

    ಚಡಚಣ ಸಹೋದರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳ ಮೇಲೆ ನಿಗಾ ಇರಿಸಲಾಗಿದೆ. ಆತಂಕ ಪಡುವ ಅಗತ್ಯವಿಲ್ಲ. ಹಾಗೇನಾದರೂ ಸಂಶಯ ಬಂದಲ್ಲಿ ಕೂಡಲೇ ನಮ್ಮನ್ನು ಸಂಪರ್ಕಿಸಬಹುದು.
    ಅನುಪಮ್ ಅಗರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts