More

    ಮರದಲ್ಲೇ ಕೊಳೆಯುತ್ತಿದೆ ಹಲಸು

    ಶಿರಸಿ: ಹಲಸಿಗೆ ಸಾಕಷ್ಟು ಬೇಡಿಕೆಯಿದೆ. ಆದರೆ, ಲಾಕ್​ಡೌನ್​ನಿಂದಾಗಿ ವ್ಯಾಪಾರಿಗಳು ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ. ಪರಿಣಾಮ ಮರಗಳಲ್ಲೇ ಹಣ್ಣುಗಳು ಕೊಳೆಯುತ್ತಿವೆ.

    ಜಿಲ್ಲೆಯಲ್ಲಿ 500 ರಿಂದ 700 ಟನ್​ಗೂ ಹೆಚ್ಚು ಹಲಸು ಉತ್ಪಾದನೆಯಾಗುತ್ತಿದ್ದು, ಪ್ರತಿವರ್ಷ 10 ಕೋಟಿ ರೂಪಾಯಿಗೂ ಹೆಚ್ಚಿನ ವ್ಯವಹಾರ ಆಗುತ್ತಿತ್ತು. ಆದರೆ, ಈ ಬಾರಿ ಬೆಳೆಗಾರರಿಗೆ ಕವಡೆ ಲಭಿಸಿಲ್ಲ. ಲಾಕ್​ಡೌನ್ ಕಾರಣಕ್ಕೆ ಬಂದ್ ಆದ ಮಾರುಕಟ್ಟೆ, ಸ್ಥಗಿತಗೊಂಡ ಸಹಕಾರಿ ಸಂಘಗಳ ವ್ಯವಹಾರ ಇತ್ಯಾದಿ ಕಾರಣಕ್ಕೆ ಹಲಸಿಗೆ ಮಾರುಕಟ್ಟೆ ಕುದುರಿಲ್ಲ. ಜತೆಗೆ, ಖರೀದಿಸುವವರೂ ಮನಸ್ಸು ಮಾಡಿಲ್ಲ.

    ಖರೀದಿಯೇ ಇಲ್ಲ: ಮಲೆನಾಡ ಹಲಸಿಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿ ಮಹಾರಾಷ್ಟ್ರ, ಗುಜರಾತ್​ಗಳಲ್ಲೂ ಬೇಡಿಕೆಯಿದೆ. ಈ ಕಾರಣಕ್ಕೆ ನಾಲ್ಕೈದು ವರ್ಷಗಳ ಹಿಂದೆ ಇಲ್ಲಿನ ಕದಂಬ ಮಾರ್ಕೆಟಿಂಗ್ ಸಂಸ್ಥೆಯು ಸ್ಥಳೀಯ ಬೆಳೆಗಾರರಿಂದ ಹಲಸು ಖರೀದಿಸಿ ರವಾನೆ ಮಾಡುತ್ತಿತ್ತು. ಇದರಿಂದ ಹಲಸಿಗೆ ಉತ್ತಮ ಧಾರಣೆಯೂ ಲಭಿಸುತ್ತಿತ್ತು. ಹಲಸಿಗೆ ದೊರೆತ ಬೇಡಿಕೆಯ ಕಾರಣಕ್ಕೆ ಹಲವು ರೈತರು ಹಲಸಿನ ಸಸಿ ನಾಟಿ ಮಾಡಿ ಫಲವನ್ನು ಮಾರುತ್ತಿದ್ದರು. ಆದರೆ, ಈ ವರ್ಷ ಸಂಸ್ಥೆಯು ಕರೊನಾ, ಲಾಕ್​ಡೌನ್ ಕಾರಣಕ್ಕೆ ಅನಿವಾರ್ಯವಾಗಿ ಖರೀದಿಯನ್ನು ಕೈಬಿಟ್ಟಿದೆ. ಹೀಗಾಗಿ ಬೆಳೆಗಾರರು ಮಾರುಕಟ್ಟೆಯಿಲ್ಲದೆ ಕಂಗಾಲಾಗಿದ್ದಾರೆ.

    ಮಣ್ಣುಪಾಲು: ಈ ಮೊದಲು ಶಿರಸಿ, ಸಿದ್ದಾಪುರ, ಯಲ್ಲಾಪುರ, ಅಂಕೋಲಾ ತಾಲೂಕುಗಳ ಗ್ರಾಮೀಣ ಭಾಗಕ್ಕೆ ಹಲಸು ಕೊಳ್ಳಲು ವ್ಯಾಪಾರಿಗಳ ದಂಡು ರೈತರ ಮನೆ ಬಾಗಿಲಿಗೆ ಬರುತ್ತಿತ್ತು. ಆದರೆ, ಲಾಕ್​ಡೌನ್ ಪರಿಣಾಮ ಹಣ್ಣು ಖರೀದಿಸುವವರೇ ಇಲ್ಲದಂತಾಗಿದೆ. ಕೆಲ ರೈತರು ಸ್ವಂತ ವಾಹನಗಳಲ್ಲಿ ಹಲಸನ್ನು ನಗರಕ್ಕೆ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಅಲ್ಲದೆ, ರಸ್ತೆ ಬದಿಯಲ್ಲಿ ಹಲಸು ವ್ಯಾಪಾರ ಮಾಡುತ್ತಿದ್ದು, ಊರುಗಳಿಗೆ ಹೋಗುವವರು ಹಲಸಿನ ಹಣ್ಣನ್ನು ಕೊಂಡುಕೊಂಡು ಹೋಗುತ್ತಿದ್ದರು. ಆದರೆ, ಲಾಕ್​ಡೌನ್ ಕರೊನಾ ಕಾರಣದಿಂದ ಜನ ಅಷ್ಟಾಗಿ ಹಲಸಿನ ಹಣ್ಣನ್ನು ಕೊಳ್ಳಲು ಬರುತ್ತಿಲ್ಲ. ವ್ಯವಸ್ಥಿತ ಮಾರುಕಟ್ಟೆಯಿಲ್ಲದಿರುವುದು ಒಂದೆಡೆಯಾದರೆ, ವ್ಯಾಪಾರದಲ್ಲೂ ಇಳಿಕೆ ಆಗಿರುವುದರಿಂದ ಲೋಡ್​ಗಟ್ಟಲೆ ಕಾಯಿಗಳು ಮರಗಳ ಬುಡದಲ್ಲೇ ಮಣ್ಣು ಪಾಲಾಗುತ್ತಿವೆ.

    ಮೌಲ್ಯವರ್ಧನೆಗೆ ಆದ್ಯತೆ: ಪ್ರಸಕ್ತ ವರ್ಷ ಸಹಕಾರಿ ಸಂಘಗಳು, ಮಾರುಕಟ್ಟೆಗಳಲ್ಲಿ ಹಲಸು ಖರೀದಿಯಿಲ್ಲದ ಕಾರಣಕ್ಕೆ ಕೆಲ ಬೆಳೆಗಾರರು ಹಲಸಿನ ಮೌಲ್ಯವರ್ಧನೆಯತ್ತ ಗಮನ ಹರಿಸಿದ್ದಾರೆ. ಹಪ್ಪಳ, ಸಂಡಿಗೆ, ಹಣ್ಣಿನ ಹಪ್ಪಳ ಇತ್ಯಾದಿಯನ್ನು ಮಾಡಿ ಸಂಗ್ರಹಿಸುತ್ತಿದ್ದಾರೆ.

    ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ಖರೀದಿಗೆ ಹೋಗಲು ಆತಂಕವಿದೆ. ಅಲ್ಲದೆ, ಕಂಟೇನ್ಮೆಂಟ್ ಜೋನ್ ಪ್ರದೇಶಗಳು ಹೆಚ್ಚಿದ ಕಾರಣ ಸಂಚಾರಕ್ಕೂ ನಿರ್ಬಂಧವಿದೆ. ಕಳೆದ ಹಂಗಾಮಿನಲ್ಲಿ 40ರಿಂದ 50 ಟನ್ ಖರೀದಿಸಲಾಗಿತ್ತು. ಆದರೆ, ಈ ವರ್ಷ ಖರೀದಿ ಮಾಡಿಲ್ಲ. ಸಂಸ್ಥೆಯ ವ್ಯಾಪ್ತಿಯಲ್ಲಿ 3ರಿಂದ 4 ಕೋಟಿ ರೂ.ಗಳ ಹಲಸು ಉತ್ಪನ್ನವನ್ನು ಖರೀದಿಸಿಲ್ಲ. ಇದರಿಂದ ಹಲಸು ಬೆಳೆಗಾರರಿಗೆ ಸಮಸ್ಯೆಯಾಗಿದೆ.

    | ವಿಶ್ವೇಶ್ವರ ಭಟ್ಟ ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ

    ಕಳೆದ ವರ್ಷ ಹಲಸನ್ನು ಪ್ರತಿ ಕೆಜಿಗೆ 10 ರೂ.ದಂತೆ ಖರೀದಿಸಲಾಗುತ್ತಿತ್ತು. ಆದರೆ, ಈ ಬಾರಿ ಮಾರಾಟಕ್ಕೆ ಅವಕಾಶವಿದ್ದರೂ ಖರೀದಿಸಲು ಸಂಸ್ಥೆಗಳು, ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಬೆಳೆಗಾರರು ಉತ್ಪನ್ನವನ್ನು ಇಟ್ಟುಕೊಳ್ಳಲು ಮತ್ತು ಮಾರಲು ಆಗದ ಸ್ಥಿತಿಯಲ್ಲಿದ್ದಾರೆ.

    | ನಾರಾಯಣ ಹೆಗಡೆ ಶಿರಸಿ ಹಲಸು ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts