More

    ಕೊಳೆಯುತ್ತಿದೆ ಮುಂಗಾರು ಬೆಳೆ

    ಬೆಳಗಾವಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳ ರಾಶಿ ಮಾಡುವ ಸಮಯದಲ್ಲಿ ನಿರಂತರ ಮಳೆಯಿಂದಾಗಿ ಶೇಂಗಾ, ಈರುಳ್ಳಿ, ಸೋಯಾಬೀನ್ ಬೆಳೆಗಳು ಕೊಳೆತು ಹೋಗುತ್ತಿವೆ.

    ರಾಜ್ಯದ ಮಾರುಕಟ್ಟೆಗಳಲ್ಲಿ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದಿರುವುದು, ಕೋವಿಡ್-19 ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಲ್ಲಿರುವ ರೈತರಿಗೆ ಇದೀಗ ಜಿಟಿಜಿಟಿ ಮಳೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಮಳೆಯಿಂದಾಗಿ ರೈತರಿಗೆ ಶೇಂಗಾ, ಸೋಯಾಬೀನ್ ಬೆಳೆಗಳ ರಾಶಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕಟಾವು ಮಾಡಿದ್ದ ಬೆಳೆಗಳು ಹೊಲದಲ್ಲಿಯೇ ಕೊಳೆಯತೊಡಗಿದೆ. ಇನ್ನೂ ಅನೇಕ ಕಡೆಗಳಲ್ಲಿ ಕಾಯಿ ಬಿಡುವ ಹಂತದಲ್ಲಿದ್ದ ಹತ್ತಿ ಬೆಳೆಯೂ ಹಾನಿಯಾಗಿದೆ.

    ಬೆಳೆಗಳು ಜಲಾವೃತ: 2020-21ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವದಲ್ಲಿಯೇ ಉತ್ತಮ ಮಳೆಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯು ಹೆಸರು, ಶೇಂಗಾ, ತೊಗರಿ, ಹತ್ತಿ, ಮೆಕ್ಕಜೋಳ, ಸಜ್ಜೆ, ಸೋಯಾಬೀನ್, ಸೂರ್ಯಕಾಂತಿ, ಕಬ್ಬು, ಈರುಳ್ಳಿ, ತಂಬಾಕು ಬೆಳೆ ಸೇರಿದಂತೆ 6.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದ್ದು. ಅಲ್ಲದೆ, ಶೇ. 100ರಷ್ಟು ಬಿತ್ತನೆಯೂ ಆಗಿತ್ತು. ಆದರೆ, ಜುಲೈ ಮತ್ತು ಆಗಸ್ಟ್‌ನಲ್ಲಿ ಕೆಲ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಹೆಸರು, ಸೂರ್ಯಕಾಂತಿ ಇನ್ನಿತರ ಬೆಳೆಗಳು ಜಲಾವೃತಗೊಂಡಿವೆ.

    ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯ

    ಸೆಪ್ಟೆಂಬರ್‌ನಲ್ಲಿಯೂ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಕಟಾವು ಮಾಡಿರುವ ಬೆಳೆಗಳು ರಾಶಿ ಮಾಡಲು ಸಾಧ್ಯವಾಗದೆ ಕೊಳೆಯುತ್ತಿವೆ. ಇದರಿಂದ ರೈತರಿಗೂ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ. ಬಿತ್ತನೆಗಾಗಿ ಖರ್ಚು ಮಾಡಿರುವ ಹಣವೂ ಸಿಗದ ರೀತಿಯಲ್ಲಿ ರೈತರು ನಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಬೆಳೆನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರದ ಜತೆಗೆ ಬಿತ್ತನೆಗಾಗಿ ಮಾಡಿದ ಖರ್ಚನ್ನೂ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    5640 ಹೆಕ್ಟೇರ್ ಪ್ರದೇಶದಲ್ಲಿ ನಾಟಿ

    2019-20ನೇ ಸಾಲಿನಲ್ಲಿಯೂ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರವಾಹದಿಂದಾಗಿ ಈರುಳ್ಳಿ ಕಟಾವು ಮುನ್ನವೇ ಜಲಾವೃತಗೊಂಡಿತ್ತು. ಈ ವರ್ಷ ಅದೇ ಪರಿಸ್ಥಿತಿ ಮರುಕಳುಸಿದ್ದು, ಮಳೆಯಾಶ್ರಿತ ಮತ್ತು ನೀರಾವರಿಯ 5,640 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದ್ದ ಈರುಳ್ಳಿ ಬೆಳೆ ಸತತ ಮಳೆಯಿಂದಾಗಿ ಶೇ. 90ರಷ್ಟು ನಾಶವಾಗಿದೆ. ಅಲ್ಲದೆ, ರಾಶಿ ಮಾಡಲಾಗದೆ ಹೊಲದಲ್ಲಿಯೇ ಕೊಳೆತು ನಾರುತ್ತಿದೆ. ಇತ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ರೈತ ಸಂಘಟನೆ ಮುಖಂಡರಾದ ಚೂನಪ್ಪ ಪೂಜೇರ, ರಾಘವೇಂದ್ರ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ರಾಶಿ ಹಂತದಲ್ಲಿರುವ ಬೆಳೆಗಳು ಹಾನಿಯಾಗಿರುವುದು ನಿಜ. ಈಗಾಗಲೇ ಕಂದಾಯ, ಕೃಷಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳು ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸುತ್ತಿದ್ದಾರೆ. ಕಟಾವು ಮಾಡಿದ ಬೆಳೆಗಳು ಹಾನಿಯಾಗಿರುವ ಕುರಿತು ಸಮೀಕ್ಷೆ ನಡೆಸಲಾಗುವುದು.
    | ಶಿವನಗೌಡ ಎಸ್. ಪಾಟೀಲ ನಿರ್ದೇಶಕ, ಬೆಳಗಾವಿ ಜಿಲ್ಲಾ ಕೃಷಿ ಇಲಾಖೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts