More

    ಓವಲ್ ಟೆಸ್ಟ್‌ನಲ್ಲಿ ಹಲವು ದಾಖಲೆಗಳ ಒಡೆಯರಾದ ಹಿಟ್‌ಮ್ಯಾನ್ ರೋಹಿತ್ ಶರ್ಮ

    ಲಂಡನ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ವಿದೇಶಿ ನೆಲದಲ್ಲಿ ತಮ್ಮ ಚೊಚ್ಚಲ ಶತಕ ಸಾಧನೆ ಮಾಡಿದ ಟೀಮ್ ಇಂಡಿಯಾ ಆರಂಭಿಕ ರೋಹಿತ್ ಶರ್ಮ (127 ರನ್, 256 ಎಸೆತ, 14 ಬೌಂಡರಿ, 1 ಸಿಕ್ಸರ್) ಇದೇ ವೇಳೆ ಹಲವು ಮೈಲಿಗಲ್ಲು ನಿರ್ಮಿಸಿದರು.

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ಸಾವಿರ ರನ್, ಆರಂಭಿಕರಾಗಿ 11 ಸಾವಿರ ರನ್, ಟೆಸ್ಟ್ ಕ್ರಿಕೆಟ್‌ನಲ್ಲಿ 3 ಸಾವಿರ ರನ್, ಇಂಗ್ಲೆಂಡ್‌ನಲ್ಲಿ ಆಡಿದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಸಾವಿರ ರನ್ ಮತ್ತು 2021ರಲ್ಲಿ 1 ಸಾವಿರ ರನ್ ಪೂರೈಸಿದ ಸಾಧನೆಯನ್ನು ರೋಹಿತ್ ಈ ಇನಿಂಗ್ಸ್‌ನಲ್ಲಿ ದಾಖಲಿಸಿದರು. ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ಸಾವಿರ ರನ್ ಪೂರೈಸಿದ 8ನೇ ಹಾಗೂ ಆರಂಭಿಕರಾಗಿ 11 ಸಾವಿರ ರನ್ ಪೂರೈಸಿದ 4ನೇ ಭಾರತೀಯರೆನಿಸಿದರು.

    ರೋಹಿತ್ ಸಿಕ್ಸರ್ ಮೂಲಕ ಶತಕ
    ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಮೊದಲ 7 ಶತಕಗಳನ್ನೂ ಭಾರತದಲ್ಲೇ ದಾಖಲಿಸಿದ್ದ ರೋಹಿತ್ 8ನೇ ಶತಕವನ್ನು ವಿದೇಶದಲ್ಲಿ, ಅದರಲ್ಲೂ ಕ್ರಿಕೆಟ್ ಜನಕರ ನಾಡಿನಲ್ಲಿ ಸಿಡಿಸಿದರು. ಚಹಾ ವಿರಾಮಕ್ಕೆ ಮುನ್ನ ಮೊಯಿನ್ ಅಲಿ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದು ವಿಶೇಷವಾಗಿತ್ತು. ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 3ನೇ ಬಾರಿ ಸಿಕ್ಸರ್ ಮೂಲಕ ಶತಕ ಪೂರೈಸಿದ ಸಾಧನೆ ಮಾಡಿದರು. ಸಚಿನ್ ತೆಂಡುಲ್ಕರ್ 6 ಬಾರಿ ಇಂಥ ಸಾಧನೆ ಮಾಡಿ ಮುಂಚೂಣಿಯಲ್ಲಿದ್ದಾರೆ. ಹಾಲಿ ಸರಣಿಯ ಲಾರ್ಡ್ಸ್ ಟೆಸ್ಟ್‌ನಲ್ಲಿ 83 ರನ್ ಗಳಿಸಿದ್ದು ವಿದೇಶದಲ್ಲಿ ರೋಹಿತ್ ಅವರ ಈ ಹಿಂದಿನ ಗರಿಷ್ಠ ಗಳಿಕೆಯಾಗಿತ್ತು.

    ರೋಹಿತ್ ನಿಧಾನ ಶತಕ!
    ರೋಹಿತ್ ಶರ್ಮ ಶತಕ ಪೂರೈಸಲು 204 ಎಸೆತ ಎದುರಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅತಿ ನಿಧಾನಗತಿ ಶತಕವಾಗಿದೆ. 2013ರಲ್ಲಿ ವಿಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ 194 ಎಸೆತಗಳಲ್ಲಿ ಶತಕ ಸಿಡಿಸಿದ್ದು ಹಿಂದಿನ ನಿಧಾನಗತಿ. ರೋಹಿತ್ ಅರ್ಧಶತಕ ಪೂರೈಸಲು 145 ಎಸೆತ ಆಡಿದರು. ಇದೂ ಅವರ ವೃತ್ತಿಜೀವನದಲ್ಲಿ ಅತಿ ನಿಧಾನಗತಿಯ 50 ರನ್‌ಗಳಾಗಿವೆ. ಅವರು 59 ಎಸೆತಗಳಲ್ಲೇ ಅರ್ಧಶತಕವನ್ನು ಶತಕವಾಗಿ ಪರಿವರ್ತಿಸಿಕೊಂಡರು.

    ರೋಹಿತ್ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ತವರು ಮತ್ತು ವಿದೇಶದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರೆನಿಸಿದರು. ರೋಹಿತ್ ವಿದೇಶದಲ್ಲಿ ಮೊದಲ ಶತಕ ಸಿಡಿಸುವುದಕ್ಕಿಂತ ಮುನ್ನ ತವರಿನಲ್ಲಿ ಅತ್ಯಧಿಕ 7 ಶತಕ ಸಿಡಿಸಿದ ಭಾರತೀರೆನಿಸಿದರು. ಮೊಹಮದ್ ಅಜರುದ್ದೀನ್ ತವರಿನಲ್ಲಿ 6 ಶತಕ ಸಿಡಿಸಿದ ಬಳಿಕ ವಿದೇಶದಲ್ಲಿ ಶತಕ ಗಳಿಸಿದ್ದು ಹಿಂದಿನ ದಾಖಲೆ. ರೋಹಿತ್ ಸರಣಿಯಲ್ಲಿ 5ನೇ ಬಾರಿ ಇನಿಂಗ್ಸ್ ಒಂದರಲ್ಲಿ 100ಕ್ಕಿಂತ ಹೆಚ್ಚು ಎಸೆತ ಎದುರಿಸಿದರು. ಸರಣಿಯಲ್ಲಿ ಅವರು ಇದುವರೆಗೆ 700ಕ್ಕೂ ಅಧಿಕ ಎಸೆತ ಎದುರಿಸಿದ್ದಾರೆ. ರೋಹಿತ್ 2021ರಲ್ಲಿ ಭಾರತ ಪರ ಸಾವಿರ ರನ್ ಪೂರೈಸಿದ ಮೊದಲಿಗರೆನಿಸಿದರು. ರಿಷಭ್ ಪಂತ್ (913) ನಂತರದಲ್ಲಿದ್ದಾರೆ.

    ಓವಲ್ ಟೆಸ್ಟ್‌ನಲ್ಲಿ ರೋಹಿತ್ ಶತಕ, ಆಂಗ್ಲರಿಗೆ ಭಾರತ ಭರ್ಜರಿ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts