More

    ಕಡೇ ಎರಡೂ ಟೆಸ್ಟ್ ಪಂದ್ಯವಾಡಲು ಆಸ್ಟ್ರೇಲಿಯಾಗೆ ತೆರಳಿದ ರೋಹಿತ್ ಶರ್ಮ

    ನವದೆಹಲಿ: ಫಿಟ್ನೆಸ್ ಕುರಿತು ಎದ್ದಿದ್ದ ಹಲವು ಊಹಾಪೋಹಗಳನ್ನು ಮೆಟ್ಟಿನಿಂತಿರುವ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಮಂಗಳವಾರ ಬೆಳಗ್ಗೆ ಅಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದರು. ಗುರುವಾರದಿಂದ (ಡಿ.17) ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಗೊಳ್ಳುತ್ತಿದ್ದು, ರೋಹಿತ್ ಶರ್ಮ ಮೂರನೇ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿಯುವ ಸಾಧ್ಯತೆಗಳಿವೆ. ರೋಹಿತ್ ಶರ್ಮ ದುಬೈ ಮಾರ್ಗವಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ಇದೇ ವೇಳೆ ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡಲಿದ್ದಾರೆ.

    ಯುಎಇಯಲ್ಲಿ ನಡೆದ 13ನೇ ಐಪಿಎಲ್ ವೇಳೆ ರೋಹಿತ್ ಶರ್ಮ ಗಾಯದ ಸಮಸ್ಯೆ ಎದುರಿಸಿದ್ದರು. ಇದರ ನಡುವೆಯೂ ರೋಹಿತ್ ಶರ್ಮ ಪ್ಲೇಆಫ್ ಹಾಗೂ ಫೈನಲ್ ಪಂದ್ಯವಾಡಿದ್ದರು. ಇದರಿಂದ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಹಾಗೂ ಟಿ20 ಸರಣಿಗಳಿಂದ ರೋಹಿತ್ ಶರ್ಮಗೆ ವಿಶ್ರಾಂತಿ ನೀಡಲಾಗಿತ್ತು. ಐಪಿಎಲ್ ಮುಕ್ತಾಯಗೊಂಡ ಬಳಿಕ ರೋಹಿತ್ ಶರ್ಮ ರಾಷ್ಟ್ರೀಯ ತಂಡದೊಂದಿಗೆ ಆಸ್ಟ್ರೇಲಿಯಾಗೆ ತೆರಳದೆ ತವರಿಗೆ ವಾಪಸಾಗಿದ್ದರು. ಬೆಂಗಳೂರಿನ ಎನ್‌ಸಿಎಯಲ್ಲಿ ಡಿ.11 ರಿಂದ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ರೋಹಿತ್ ಶರ್ಮ ಪಾಸಾಗಿದ್ದರು.

    ರೋಹಿತ್ ಶರ್ಮ ಕ್ಲಿನಿಕಲಿ ಫಿಟ್ ಎಂದು ಎನ್‌ಸಿಎ ಫಿಸಿಯೋ ಹೇಳಿದ್ದರು. ಜನವರಿ 7 ರಂದು ಸಿಡ್ನಿಯಲ್ಲಿ 3ನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಇದಕ್ಕೂ ಮೊದಲು ರೋಹಿತ್ ಶರ್ಮ ಮತ್ತೊಮ್ಮೆ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಎರಡು ವಾರಗಳ ಕಾಲ ಕ್ವಾರಂಟೈನ್ ಅವಧಿಯಲ್ಲಿ ಬಿಸಿಸಿಐ ವೈದ್ಯಕೀಯ ತಂಡ ರೋಹಿತ್ ಶರ್ಮ ಅವರಿಗೆ ಅಗತ್ಯ ಸಲಹೆ ನೀಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts