More

    ಜೆಎನ್‌ಎನ್‌ಸಿಇಯಲ್ಲಿ ರೋಬೋಗಳ ರಾಕ್ ಶೋ

    ಶಿವಮೊಗ್ಗ: ಅಲ್ಲಿ ವಿದ್ಯಾರ್ಥಿಗಳೇ ನಿರ್ಮಿಸಿದ್ದ ರೋಬೋಗಳು ರಸ್ತೆಯ ಉಬ್ಬು ತಗ್ಗುಗಳ ಲೆಕ್ಕಿಸದೇ ಮುನ್ನುಗುತ್ತಿದ್ದವು. ವಿವಿಧ ಸರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ತಂಡದ ರೋಬೊಗಳ ಪ್ರದರ್ಶನ ನೋಡುಗರನ್ನು ರೋಮಾಂಚನಗೊಳಿಸಿತ್ತು.

    ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ, ಐಇಟಿಇ ವಿದ್ಯಾರ್ಥಿಗಳ ವೇದಿಕೆ ಹಾಗೂ ಐಇಇಇ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಪ್ಲಾಸ್ಮಾ-2023 ಕಾರ್ಯಕ್ರಮದಲ್ಲಿ ವಿವಿಧ ಬಗೆಯ ರೋಬೋಗಳು ತಮ್ಮ ಕಾರ್ಯಕ್ಷಮತೆ ಪ್ರದರ್ಶಿಸಿದರು.
    ರೋಬೋ ಲೈನ್ ಫಾಲೋವರ್, ರೋಬೋ ಸಾಸರ್, ರೋಬೋ ರೇಸ್, ಹ್ಯಾಕಥಾನ್, ಸುಮೋ ವಾರ್ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 150ಕ್ಕೂ ಅಧಿಕ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ತಾವೇ ನಿರ್ಮಿಸಿದ ರೋಬೋಗಳೊಂದಿಗೆ ಭಾಗವಹಿಸಿದ್ದರು.
    ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಎವನ್ ಲಾಜಿಕ್ಸ್ ಕಂಪನಿ ಸ್ಥಾಪಕ ಪ್ರವೀಣ್ ಉಡುಪ ಮಾತನಾಡಿ, ಪ್ರಯೋಗಾತ್ಮಕ ಕಲಿಕೆಯಿಂದ ಮಾತ್ರ ನಿಜವಾದ ಜ್ಞಾನದ ವಿಕಸನವಾಗಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಪಕ್ಕದವರೇ ನಮಗೆ ಸ್ಪರ್ಧಿಗಳಾಗಿರುತ್ತಾರೆ ಎಂಬ ಅರಿವು ಬೇಕಿದೆ ಎಂದು ಹೇಳಿದರು.
    ಶಿಕ್ಷಣದ ಜತೆಗೆ ವಿಶ್ಲೇಷಣಾತ್ಮಕ ಚಿಂತನೆಗಳು ಹಾಗೂ ಎದುರಾಗುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಬಗೆಹರಿಸುವ ಕೌಶಲತೆಗಳ ಅವಶ್ಯಕತೆಯಿದೆ. ಉದ್ಯೋಗ ನೀಡುವ ಸಂಸ್ಥೆಗಳು ನಮ್ಮಿಂದ ಬಯಸುವುದೇ ಇಂತಹ ಪ್ರಯೋಗಾತ್ಮಕ ಕೌಶಲ. ನಾವು ತಲುಪಬೇಕಿರುವ ಗುರಿ ಮತ್ತು ಎದುರಿಸುವ ಸ್ಪರ್ಧಾತ್ಮಕ ವಾತಾವರಣಕ್ಕೆ ವಿದ್ಯಾರ್ಥಿ ದೆಸೆಯಿಂದಲೇ ಸಿದ್ಧರಾಗಬೇಕಿದೆ ಎಂದು ಹೇಳಿದರು.
    ಕೃತಕ ಬುದ್ಧಿಮತ್ತೆ ಮತ್ತು ರೋಬಾಟಿಕ್ಸ್ ಕ್ಷೇತ್ರ ಅನೇಕ ಉದ್ಯೋಗವಕಾಶಗಳನ್ನು ಹೊಂದಿದೆ. ನಿಮ್ಮ ನಾವೀನ್ಯ ಯೋಜನೆಗಳಿಗೆ ಹೊಸ ತಂತ್ರಜ್ಞಾನಗಳ ಸ್ಪರ್ಶ ನೀಡಬೇಕು. ಸಾಧ್ಯವಾದಷ್ಟು ಆರಾಮದಾಯಕ ಮನಸ್ಥಿತಿಗಳಿಂದ ಹೊರಬಂದು ನಿರಂತರ ಕಲಿಕೆಯಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
    ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಮಾತನಾಡಿ, ವಿದ್ಯಾರ್ಥಿಗಳು ಕಲಿಯುತ್ತಿರುವ ಶಿಕ್ಷಣಕ್ಕೂ ಉದ್ಯೋಗ ನೀಡುವ ಸಂಸ್ಥೆಗಳ ಅವಶ್ಯಕತೆಗಳ ನಡುವಿನ ಅಂತರವನ್ನು ಕಡಿಮೆಗೊಳಿಸಲು ಇಂತಹ ಕಾರ್ಯಕ್ರಮಗಳು ಬೇಕಿದೆ. ಹೇಗೆ ಪ್ಲಾಸ್ಮಾ ಮಾನವನಲ್ಲಿ ಹೊಸ ರಕ್ತ ಉತ್ಫಾದನೆಗೆ ಅವಶ್ಯಕವೊ ಹಾಗೆಯೇ ಹೊಸ ಆಲೋಚನೆಗಳಿಗೆ ಇಂತಹ ಪ್ಲಾಸ್ಮಾ ಕಾರ್ಯಕ್ರಮ ಪೂರಕವಾಗಲಿ ಎಂದು ಹೇಳಿದರು.
    ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಎಸ್.ಸುರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಸ್.ವಿ.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಜೆ.ಅನಿಲ್ಕುಮಾರ್, ಎಸ್.ಸಿ.ಪ್ರದೀಪ್, ಜಿ.ಎಸ್.ಪ್ರಶಾಂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts