More

    ದರೋಡೆ ತನಿಖೆ ವಿಳಂಬಕ್ಕೆ ಕಾರಣವಾಯ್ತು ‘ಮತ್ತು’

    ಚಿತ್ರದುರ್ಗ : ನಗರದ ಬ್ಯಾಂಕ್ ಕಾಲನಿಯಲ್ಲಿ ಶನಿವಾರ ಹಾಡಹಗಲಲ್ಲೇ ನಡೆದ ದರೋಡೆ ಪ್ರಕರಣದ ಆರೋಪಿ ಇನ್ನೂ ಮತ್ತಿನಲ್ಲಿರುವುದು ಪೊಲೀಸರ ವಿಚಾರಣೆಗೆ ತಡೆ ತಂದೊಡ್ಡಿದೆ.

    12 ತೊಲ ಬಂಗಾರ, ಇಬ್ಬರ ಅಪಹರಣದ ಮೂಲಕ 50 ಲಕ್ಷ ರೂ. ನಗದು ದೋಚಿದ್ದ ಮೂವರ ಪೈಕಿ ಒಬ್ಬಾತ ಸೆರೆ ಸಿಕ್ಕಿದ್ದ.

    ಆದರೆ ಆತ ಯಾವುದೋ ಮಾದಕ ವಸ್ತುವಿನ ಮತ್ತಿನಲ್ಲಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಇಷ್ಟರ ಮಧ್ಯೆಯೂ ವಿವಿಧ ಆಯಾಮಗಳ ಬಗೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಈ ಪ್ರಕರಣ ಸಹಜವಾಗಿಯೇ ನಗರದ ಜನರಲ್ಲಿ ಭಯ-ಭೀತಿ ಉಂಟು ಮಾಡಿದ್ದು, ಗಾಬರಿಗೆ ಒಳಪಡಿಸಿತ್ತು. ಆರೋಪಿಗಳು ಯಾರಿರಬಹುದೆಂಬ ಕುತೂಹಲವನ್ನು ಕೂಡ ಹೆಚ್ಚಿಸಿದೆ.

    ಘಟನೆ ಹಿನ್ನೆಲೆ
    ನಜೀರ್ ಅಹಮದ್ ಎಂಬುವವರ ಮನೆಗೆ ಘಟನೆ ದಿನದಂದು ಬೆಳಗ್ಗೆ 10.30ಕ್ಕೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು ಸಂಜೆ 5 ರವರೆಗೂ ಇದ್ದರು.

    ಈ ವೇಳೆ ನಜೀರ್, ಪತ್ನಿ ಲತೀಫಾ ಬೇಗಂ, ಪುತ್ರ ಸಮೀರ್ ಅಹಮದ್, ಸೊಸೆ ಆರೀಫ್, ಪುತ್ರಿ ನೌಷದ್, ಅಳಿಯಂದಿರಾದ ಮುನೀರ್ ಅಹಮದ್, ಶಹನಾಜ್ ಇವರೆಲ್ಲರನ್ನೂ ಕೂಡಿ ಹಾಕಿದ್ದರು. ಪಿಸ್ತೂಲ್, ಮಚ್ಚು, ಚಾಕು ತೋರಿಸಿ ದೌರ್ಜನ್ಯದಿಂದ 12 ತೊಲ ಬಂಗಾರ ಕಿತ್ತುಕೊಂಡಿದ್ದರು.

    ಪುತ್ರ ಸಮೀರ್, ಅಳಿಯ ಶಹನಾಜ್ ಅವರನ್ನು ಅಪಹರಿಸಿ 50 ಲಕ್ಷ ರೂ. ನಗದು ಕೊಡುವಂತೆ ಬೇಡಿಕೆ ಇಟ್ಟಿದ್ದರು. ಇಲ್ಲದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

    ಹೀಗಾಗಿ ಹುಬ್ಬಳ್ಳಿಯಲ್ಲಿನ ಕುಟುಂಬ ಸದಸ್ಯರಿಗೆ ಕರೆ ಮಾಡಿ ತುರ್ತು 50 ಲಕ್ಷ ರೂ. ಹಣ ಬೇಕಿದೆ ಎಂದು ನಜೀರ್ ಕುಟುಂಬ ಮನವಿ ಮಾಡಿತ್ತು.

    25 ಲಕ್ಷ ರೂ. ಅನ್ನು ಚಿತ್ರದುರ್ಗ ಜಿಲ್ಲೆಯ ಕ್ಯಾದಿಗೆರೆ ಸಮೀಪ, ಇನ್ನುಳಿದ 25 ಲಕ್ಷ ರೂ. ಅನ್ನು ದಾವಣಗೆರೆ ಜಿಲ್ಲೆಯ ಹರಿಹರದ ಬಳಿ ಪಡೆದ ದರೋಡೆಕೋರರು ಇಲ್ಲಿ ನಡೆದ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಇಲ್ಲೇ ಪಿಸ್ತೂಲ್‌ನಿಂದ ನಿಮ್ಮನ್ನು ಹತ್ಯೆ ಮಾಡುತ್ತೇವೆ.

    ನಿಮ್ಮ ಮನೆಯ ಬಳಿಯೂ ನಮ್ಮವರಿದ್ದು, ಸದಸ್ಯರಿಗೂ ಉಳಿಗಾಲವಿಲ್ಲ ಎಂದು ಭಯ ಹುಟ್ಟಿಸಿದ್ದರು. ಇದಕ್ಕೆ ಹೆದರಿ ಆರಂಭದಲ್ಲಿ ದೂರು ನೀಡಲು ಹಿಂದೇಟು ಹಾಕಿದ್ದರು.

    ನಂತರ ವಿಷಯ ತಿಳಿದಿದ್ದ ಹುಬ್ಬಳ್ಳಿಯ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನಜೀರ್ ಅಹಮದ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಬಂಧಿತ ಆರೋಪಿ ಗಾಂಜಾ ಸೇವಿಸಿ ಮತ್ತಿನಲ್ಲಿ ಇರುವ ಕಾರಣ ಇನ್ನೂ ಆಸ್ಪತ್ರೆಯಲ್ಲೇ ಇದ್ದು, ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ವಿಚಾರಣೆಗೆ ಸ್ಪಂದಿಸುವಂತಾದ ಕೂಡಲೇ ತನಿಖೆ ಚುರುಕು ಪಡೆಯಲಿದೆ.
    ಕೆ.ಪರಶುರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts