More

    ಮನೆ ಯಜಮಾನನ ಕಟ್ಟಿ ಹಾಕಿ ದರೋಡೆ

    ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಗ್ರಾಮದ ಸೌತಡ್ಕ ಎಂಬಲ್ಲಿ ಮನೆಗೆ ನುಗ್ಗಿದ ಒಂಬತ್ತು ಮಂದಿ ದರೋಡೆಕೋರರು, ಮನೆ ಯಜಮಾನನನ್ನು ಕಟ್ಟಿ ಹಾಕಿ, ಅವರ ಪತ್ನಿಗೆ ಚೂರಿಯಿಂದ ಇರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ನಗದನ್ನು ದೋಚಿದ್ದಾರೆ.

    ಕೊಕ್ಕಡದ ವಿಶ್ವ ಹಿಂದು ಪರಿಷತ್ ಮುಂದಾಳು, ಕೃಷಿಕ ನೂಜೆ ತುಕ್ರಪ್ಪ ಶೆಟ್ಟಿಯವರ ಮನೆಯಲ್ಲಿ ಭಾನುವಾರ ತಡರಾತ್ರಿ ಸುಮಾರು 1.30ಕ್ಕೆ ಈ ಘಟನೆ ನಡೆದಿದೆ. ದರೋಡೆಕೋರರ ತಂಡ ಮನೆಯ ಮುಖ್ಯ ಬಾಗಿಲು ಹಾಗೂ ಮೊದಲ ಮಹಡಿಯಲ್ಲಿ ಹೊಂಚು ಹಾಕಿ ನಿಂತಿದ್ದರು. ನಾಯಿ ಬೊಗಳುವುದನ್ನು ಕೇಳಿ ತುಕ್ರಪ್ಪ ಶೆಟ್ಟಿಯವರು ಮೊದಲ ಮಹಡಿಯ ಬಾಗಿಲು ತೆರೆದು ಅಂಗಳ ನೋಡುತ್ತಿದ್ದಂತೆ ಅಡಗಿದ್ದ ದರೋಡೆಕೋರರು ತುಕ್ರಪ್ಪ ಶೆಟ್ಟಿಯವರನ್ನು ನೆಲಕ್ಕೆ ಕೆಡವಿ, ಕೈಗಳನ್ನು ಹಿಂದಕ್ಕೆ ಕಟ್ಟಿ, ಇಬ್ಬರು ಅವರ ಮೇಲೆ ಒತ್ತಿ ನಿಂತಿದ್ದರು. ಏಳು ಮಂದಿ ದರೋಡೆಕೋರರು ಮೊದಲ ಮಹಡಿಯ ಬಾಲ್ಕನಿ ಮೂಲಕವೇ ಮನೆಯೊಳಗಡೆ ಪ್ರವೇಶಿಸಿ ಮನೆಯೊಡತಿ ಗೀತಾ ಶೆಟ್ಟಿಯವರಿಗೂ ಹಲ್ಲೆ ನಡೆಸಿದ್ದಾರೆ. ಕಪಾಟಿನ ಬೀಗದ ಕೀ ಕೊಡುವಂತೆ ಬೆದರಿಸಿದ್ದು, ಕೊಡಲು ನಿರಾಕರಿಸಿದಾಗ ಎರಡು ಬಾರಿ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ.

    ಅಮ್ಮನಿಗೆ ತಿವಿದದ್ದನ್ನು ಕಂಡು ಮಗಳು ಕಿರುಚಿದಾಗ, ಆಕೆಗೂ ಚೂರಿಯಿಂದ ಇರಿಯುವ ಬೆದರಿಕೆಯೊಡ್ಡಿದ್ದಾರೆ. ಭೀತಿಗೊಳಗಾದ ಗೀತಾ ಹಾಗೂ 8 ವರ್ಷದ ಮಗಳು ಬೀಗದ ಕೀ ನೀಡಿದ್ದು, ದರೋಡೆಕೋರರು ಸುಮಾರು 400 ಗ್ರಾಂ. ತೂಕದ ಚಿನ್ನಾಭರಣ ಹಾಗೂ ಒಂದೂವರೆ ಲಕ್ಷ ರೂ. ನಗದು ದೋಚಿದ್ದಾರೆ. ಈ ಸಂದರ್ಭ ದಂಪತಿಯ 4 ವರ್ಷದ ಪುತ್ರನೂ ಮನೆಯಲ್ಲಿದ್ದ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹಿತ ಪೊಲೀಸ್ ಅಧಿಕಾರಿಗಳು, ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

    ನಾಯಿಯ ಬೊಗಳುವ ಲಾಭ ಪಡೆದ ಕಳ್ಳರು: ದರೋಡೆಕೋರರು ಮನೆಯ ಗೂಡಿನಲ್ಲಿದ್ದ ನಾಯಿಯ ಬೊಗಳುವಿಕೆಯ ಲಾಭ ಪಡೆದಿದ್ದಾರೆ. ನಾಯಿ ಬೊಗಳಿದಾಗ ಮನೆಮಂದಿ ಬಾಗಿಲು ತೆರೆಯುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಬಾಲ್ಕನಿಯ ಬಾಗಿಲು ತೆರೆಯುತ್ತಿದ್ದಂತೆಯೇ ಮನೆಯ ಯಜಮಾನನ ಮೇಲೆರಗಿದ್ದಾರೆ. ನಾಯಿ ಅಪಾಯಕಾರಿಯಾಗಿದ್ದ ಹಿನ್ನೆಲೆಯಲ್ಲಿ ಗೂಡಿನಲ್ಲಿಯೇ ಹಾಕಲಾಗಿತ್ತು.

    ಸ್ಥಳೀಯರ ಕೈವಾಡ: ಬ್ಯಾಂಕಿನಲ್ಲಿರಿಸಿದ್ದ ಚಿನ್ನಾಭರಣವನ್ನು ಕೆಲ ಸಮಯದ ಹಿಂದೆ ಮನೆಗೆ ತರಲಾಗಿತ್ತು. ಇದರ ಮಾಹಿತಿ ಪಡೆದೇ ದಾಳಿ ನಡೆಸಿರುವ ಸಾಧ್ಯತೆ ಇದೆ. ದರೋಡೆಕೋರರು ಯಾವುದೇ ವಾಹನ ಬಳಸಿದ ಮಾಹಿತಿ ಇಲ್ಲ. ಓರ್ವ ತುಳು ಭಾಷೆ ಮಾತನಾಡುತ್ತಿದ್ದು, ಇತರರು ಕನ್ನಡ ಮಾತನಾಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

    ಮಹಿಳೆ ಅಪಾಯದಿಂದ ಪಾರು: ಚೂರಿ ಇರಿತಕ್ಕೆ ತುತ್ತಾದ ಗೀತಾ ಶೆಟ್ಟಿ ತೀವ್ರ ರಕ್ತಸ್ತ್ರಾವದಿಂದ ಪ್ರಜ್ಞಾಹೀನರಾಗಿದ್ದರು. ಅವರನ್ನು ಕೊಕ್ಕಡದ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಸಾಯಂಕಾಲದ ವೇಳೆ ಪ್ರಜ್ಞೆ ಮರುಕಳಿಸಿದ್ದು ಅಪಾಯದಿಂದ ಪಾರಾಗಿದ್ದಾರೆ.

    ಜಯಪುರ, ಕಾರ್ಕಳ ಘಟನೆಗಳಿಗೆ ಸಾಮ್ಯತೆ:  ಬೆಳ್ತಂಗಡಿ/ಮಂಗಳೂರು: ಚಿಕ್ಕಮಗಳೂರಿನ ಜಯಪುರ ಹಾಗೂ ಕಾರ್ಕಳದ ಮಾಳದಲ್ಲಿ ನಡೆದ ಘಟನೆಗಳಿಗೂ ಸೌತಡ್ಕದ ಘಟನೆಗಳಿಗೂ ಸಾಮ್ಯತೆ ಇದೆ. ಈ ಪ್ರಕರಣಕ್ಕೂ ಅದಕ್ಕೂ ಏನಾದರೂ ಸಂಬಂಧವಿದೆಯೇ, ಅದೇ ಆರೋಪಿಗಳು ನಡೆಸಿದ್ದಾರೆಯೇ ಎನ್ನುವ ಕುರಿತು ಅವಲೋಕಿಸಿ ತನಿಖೆ ಮುಂದುವರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

    ಕೊಕ್ಕಡ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭವಾಗಿದ್ದು, ಉಪ್ಪಿನಂಗಡಿ ಠಾಣಾ ನಿರೀಕ್ಷಕರ ನೇತೃತ್ವದಲ್ಲಿ ಪೊಲೀಸರ ತಂಡ ರಚಿಸಲಾಗಿದೆ. ಆರೋಪಿಗಳ ಪತ್ತೆಗೆ ವಿವಿಧ ಆಯಾಮಗಳಲ್ಲಿ ಘಟನೆಯನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಮನೆಗಳಿಗೆ ಸಿಸಿ ಕ್ಯಾಮರಾ: ದರೋಡೆಯಾದ ಮನೆ, ಪರಿಸರದಲ್ಲಿ ಎಲ್ಲೂ ಸಿಸಿಟಿವಿಗಳಿಲ್ಲ. ಆದ್ದರಿಂದ ಮುಖ್ಯ ರಸ್ತೆಯಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರತ್ಯೇಕವಾಗಿರುವ ಒಂಟಿ ಮನೆಗಳೇ ಕಳ್ಳರ ಟಾರ್ಗೆಟ್ ಆಗಿದೆ. ಒಂಟಿ ಮನೆಗಳು ಇರುವಲ್ಲಿ ಸಿಸಿಟಿವಿ ಅಳವಡಿಸುವ ಕುರಿತಂತೆ ಕಳೆದ ವರ್ಷವೇ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಮನೆಮನೆಗೆ ತೆರಳಿ ಮನವಿ ಮಾಡಲಾಗಿತ್ತು. ಈಗ ಮತ್ತೊಮ್ಮೆ ಜನರಿಗೆ ಅರಿವು ಮೂಡಿಸುವ ಕೆಲಸ ನಡೆಸಲಾಗುವುದು. ಮುಖ್ಯವಾಗಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅಥವಾ ಹೊಸಬರು ಊರಿನಲ್ಲಿ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದಲ್ಲಿ ಉತ್ತಮ ಎಂದು ಎಸ್.ಪಿ. ಲಕ್ಷ್ಮೀಪ್ರಸಾದ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts