More

    ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು!

    ಬೆಳಗಾವಿ: ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಲಾಕ್‌ಡೌನ್ ಆದೇಶವನ್ನು ಬೆಳಗಾವಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

    ಅನವಶ್ಯಕವಾಗಿ ಬೀದಿಗೆ ಇಳಿಯುವ ಜನರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಬೈಕ್ ಮೇಲೆ ಒಬ್ಬರಿಗೆ ಮಾತ್ರ ತೆರಳಲು ಅವಕಾಶ ಕಲ್ಪಿಸಲಾಗಿದೆ.

    ಪೊಲೀಸರು ಸೂಕ್ತ ಕಾರಣ ಪಡೆದು, ಗುರುತಿನ ಚೀಟಿ ಪರಿಶೀಲಿಸಿದ ಬಳಿಕ ಬಿಡುತ್ತಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣ, ಖಡೇಬಜಾರ್, ಸಂಗೊಳ್ಳಿ ರಾಯಣ್ಣ ವೃತ್ತ, ಆರ್‌ಟಿಒ ವೃತ್ತ, ಕೊಲ್ಲಾಪುರ ವೃತ್ತ, ಚನ್ನಮ್ಮ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದಾರೆ. ಅನಗತ್ಯವಾಗಿ ಯಾರೂ ರಸ್ತೆಗಿಳಿಯಬಾರದು ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳ ಮೂಲಕ ಸೋಮವಾರವೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಮಂಗಳವಾರ ಈ ಸೂಚನೆ ಉಲ್ಲಂಘಿಸಿದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

    ಬೆಳಗ್ಗೆಯೇ ಚನ್ನಮ್ಮ ವೃತ್ತದಲ್ಲಿ ನಿಯೋಜನೆಗೊಂಡ ಪೊಲೀಸರು, ನಿಯಮ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿದ್ದಾರೆ. ನಿಯಮ ಮೀರಿ ಬೈಕ್ ಮೇಲೆ ಸಂಚರಿಸುತ್ತಿದ್ದವರನ್ನು ತಡೆದು ಹಿಗ್ಗಾ ಮುಗ್ಗಾ ತಿಳಿಸಿದ್ದಾರೆ.

    ಐಡಿ ಕಾರ್ಡ್ ಪರಿಶೀಲನೆ: ಪೊಲೀಸರು ಸರ್ಕಾರಿ ಸಿಬ್ಬಂದಿ, ವೈದ್ಯರು ಹಾಗೂ ಪತ್ರಕರ್ತರ ವಾಹನ ತಡೆದು ಗುರುತಿನ ಚೀಟಿ ಪರಿಶೀಲಿಸಿದ ಬಳಿಕ ಬಿಟ್ಟರು. ಸರ್ಕಾರಿ ಸಿಬ್ಬಂದಿ, ವೈದ್ಯರು ಹಾಗೂ ಪತ್ರಕರ್ತರನ್ನು ಹೊರತುಪಡಿಸಿ ಬೇರೆ ಯಾವ ವ್ಯಕ್ತಿಗಳು ಬಂದರೂ ಅವರನ್ನು ಬಂದ ದಾರಿಯಲ್ಲೇ ಮರಳಿ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪೊಲೀಸರ ಕಟ್ಟುನಿಟ್ಟಿನ ಕ್ರಮದ ಮಧ್ಯೆಯೂ ಖಡೇಬಜಾರ್, ದರ್ಬಾರ್ ಗಲ್ಲಿ, ಗಣಪತಿ ಗಲ್ಲಿ, ಶನಿವಾರ ಕೂಟದಲ್ಲಿ ಜನ ಸಂಚಾರವಿತ್ತು.

    ಯುಗಾದಿ ಹಿನ್ನೆಲೆಯಲ್ಲಿ ಕೆಲ ಕಡೆ ತಳಿರು-ತೋರಣ ಖರೀದಿಸುವುದಕ್ಕೆ ಆಗಮಿಸಿದ್ದ ಜನರು ಪೊಲೀಸರ ಲಾಠಿಗೆ ಹೆದರಿ ಮನೆ ಸೇರಿದರು.

    ತರಕಾರಿಗೆ ಮುಗಿಬಿದ್ದ ಜನರು

    ಮಾ. 27ರ ವರೆಗೆ ಬೆಳಗಾವಿ ಎಪಿಎಂಸಿ ಬಂದ್ ಮಾಡಿದ್ದರಿಂದ ಮಂಗಳವಾರ ಬೆಳಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಜನರು ಮುಗಿಬಿದ್ದರು. ತರಕಾರಿ ವ್ಯಾಪಾರಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಮಾರುಕಟ್ಟೆಗಳತ್ತ ಹೆಜ್ಜೆ ಹಾಕಿದ್ದರಿಂದ ಜನದಟ್ಟಣೆ ಹೆಚ್ಚಾಗಿತ್ತು. ಮತ್ತೊಂದೆಡೆ ಕರೊನಾ ಹರಡದಂತೆ ಪ್ರಾರ್ಥಿಸಿ ಸಾರ್ವಜನಿಕರು ಮಂಗಳವಾರ ಬೆಳಗಾವಿ ಸಮಾದೇವಿ ಗಲ್ಲಿಯ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts