More

    ದಾಖಲೆ ಪ್ರಮಾಣದಲ್ಲಿ ಷೇರು ಮಾರುಕಟ್ಟೆ ಬೆಳವಣಿಗೆ: ಹೀಗಿವೆ ಐದು ಪ್ರಮುಖ ಕಾರಣಗಳು…

    ಮುಂಬೈ: ಷೇರು ಮಾರುಕಟ್ಟೆಯ ಪ್ರಮುಖ ಮಾನದಂಡಗಳಾದ ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಸಕಾರಾತ್ಮಕವಾಗಿ ಸ್ಥಿರ ಪ್ರದರ್ಶನ ನೀಡುತ್ತಿವೆ. ಅಂದರೆ, ಸೂಚ್ಯಂಕವು ಏರುಗತಿಯಲ್ಲಿ ಮುಂದುವರಿದಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಶಾವಾದಗಳು ಕಂಡುಬರುತ್ತಿವೆ. ಡಿಸೆಂಬರ್‌ ತಿಂಗಳಲ್ಲಿಯೇ ಇದುವರೆಗೆ ಈ ಎರಡೂ ಸೂಚ್ಯಂಕಗಳು 7 ಪ್ರತಿಶತದಷ್ಟು ಗಳಿಸಿರುವುದು ಒಂದು ದಾಖಲೆಯಾಗಿದೆ. ಅಲ್ಲದೆ, ಹಿಂದಿನ ನವೆಂಬರ್​ ತಿಂಗಳಲ್ಲಿ ಕೂಡ 5 ಪ್ರತಿಶತದಷ್ಟು ಲಾಭವನ್ನು ಈ ಸೂಚ್ಯಂಕಗಳು ಗಳಿಸಿವೆ.

    ಈ ವರ್ಷದಲ್ಲಿ ಡಿಸೆಂಬರ್ 26ರವರೆಗೆ ಬಿಎಸ್ಇ ಸೂಚ್ಯಂಕ ಶೇಕಡಾ 17.3 ಮತ್ತು ಮತ್ತು ನಿಫ್ಟಿ 50 ಸೂಚ್ಯಂಕವು ಶೇಕಡಾ 18.4 ರಷ್ಟು ಹೆಚ್ಚಳವನ್ನು ಕಂಡಿದೆ.

    ಬಿಎಸ್‌ಇ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು (ಒಟ್ಟು ಷೇರುಗಳ ಮೊತ್ತವು) ಈಗ 361.3 ಲಕ್ಷ ಕೋಟಿ ರೂಪಾಯಿ ಸಮೀಪದಲ್ಲಿದೆ.

    ಷೇರು ಮಾರುಕಟ್ಟೆಯು ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗಿರುವುದಕ್ಕೆ ಐದು ಪ್ರಮುಖ ಕಾರಣಗಳನ್ನು ತಜ್ಞರು ಮುಂದಿಡುತ್ತಾರೆ. ಈ ಐದು ಅಂಶಗಳ ವಿವರ ಇಲ್ಲಿದೆ.

    1. ದರ ಕಡಿತ ಭರವಸೆಗಳು:

    ಅಮೆರಿಕದಲ್ಲಿ ಹಣದುಬ್ಬರ (ಬೆಲೆ ಏರಿಕೆ) ನಿಧಾನವಾಗಿಯಾದರೂ ನಿಯಂತ್ರಣಕ್ಕೆ ಬರುತ್ತಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್​ ಆಗಿರುವ ಫೆಡರಲ್ ರಿಸರ್ವ್ ಮುಂದಿನ ವರ್ಷದ ಮಾರ್ಚ್‌ನಲ್ಲಿ ಬಡ್ಡಿ ದರಗಳನ್ನು ಕಡಿತಗೊಳಿಸುವ ನಿರೀಕ್ಷೆ ಇದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಷೇರುಗಳನ್ನು ಆಕ್ರಮಣಕಾರಿಯಾಗಿ ಖರೀದಿಸುತ್ತಿದ್ದಾರೆ,

    ಬಡ್ಡಿದರಗಳು ಕಡಿಮೆಯಾದಾಗ, ಹೆಚ್ಚಿನ ಹಣವು ಹಣಕಾಸು ವ್ಯವಸ್ಥೆಗೆ ಹರಿಯುತ್ತದೆ. ಇದು ಕಂಪನಿಗಳಿಗೆ ಹೆಚ್ಚಿನ ಲಾಭ ಗಳಿಸಲು ಸಹಾಯ ಮಾಡುತ್ತದೆ. ಇದು ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಷೇರುಗಳ ಖರೀದಿ ಹಾಗೂ ಸೂಚ್ಯಂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

    2. ಭಾರತದ ಆರ್ಥಿಕತೆ ಬೆಳವಣಿಗೆಯ ನಿರೀಕ್ಷೆ:

    ಭಾರತದ ಆರ್ಥಿಕತೆಯ ದೃಷ್ಟಿಕೋನ ಬಲವಾಗಿದೆ. 2024-25ರಲ್ಲಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ. ಅಂದರೆ, ಒಟ್ಟು ದೇಶದ ಆದಾಯ) ಶೇಕಡಾ 6.5ರಷ್ಟು ಬೆಳವಣಿಗೆ ಕಾಣಲಿದೆ. ಈ ಮೂಲಕ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ಅಂದಾಜಿಸಿದೆ. ಪ್ರಸಕ್ತ ಹಣಕಾಸು ವರ್ಷ 2023-24ರಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 6.9 ಕ್ಕೆ ಈ ಸಂಸ್ಥೆ ನಿಗದಿಪಡಿಸಿದೆ.

    ಈ ವರ್ಷದ ಏಪ್ರಿಲ್​ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಜಿಡಿಪಿಯು ಶೇಕಡಾ 7.7ರಷ್ಟು ವೃದ್ದಿಸಿದೆ. ದೇಶದ ಆರ್ಥಿಕತೆಯು ಮುಂಬರುವ ತ್ರೈಮಾಸಿಕಗಳಲ್ಲಿ ಇನ್ನಷ್ಟು ವೇಗದಲ್ಲಿ ಬೆಳವಣಿಗೆಯಾಗುವ ನಿರೀಕ್ಷೆಯಿದೆ.

    ಭಾರತದ ಆರ್ಥಿಕತೆಯು 2024 ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ 7 ಪ್ರತಿಶತದಷ್ಟು ವೃದ್ಧಿಯಾಗುವ ನಿರೀಕ್ಷಿಸಲಾಗಿದೆ ಎಂದು ಪರಿಣತರು ಅಂದಾಜಿಸುತ್ತಾರೆ. ಭಾರತದ ಆರ್ಥಿಕ ಬೆಳವಣಿಗೆ ಮುಂದಿನ ವರ್ಷವೂ ಉತ್ತಮವಾಗಿರಲಿದೆ ಎಂಬ ನಿರೀಕ್ಷೆಯು ಷೇರು ಮಾರುಕಟ್ಟೆಯ ನಾಗಾಲೋಟಕ್ಕೆ ಕೊಡುಗೆ ನೀಡುತ್ತಿದೆ.

    3. ವಿದೇಶಿ ಹೂಡಿಕೆದಾರರಿಂದ ವ್ಯಾಪಕ ಖರೀದಿ:

    ವಿದೇಶಿ ಹೂಡಿಕೆದಾರರು ಈ ವರ್ಷದ ನವೆಂಬರ್‌ನಿಂದ ಭಾರತೀಯ ಹಣಕಾಸು ಮಾರುಕಟ್ಟೆಯಲ್ಲಿ ಆಕ್ರಮಣಕಾರಿಯಾಗಿ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ನವೆಂಬರ್‌ನಲ್ಲಿ ಅಂದಾಜು 24,546 ಕೋಟಿ ರೂಪಾಯಿ ಹೂಡಿಕೆಯ ನಂತರ, ಡಿಸೆಂಬರ್‌ನಲ್ಲಿ (ಡಿಸೆಂಬರ್ 26 ರವರೆಗೆ) ಭಾರತೀಯ ಹಣಕಾಸು ಮಾರುಕಟ್ಟೆಯಲ್ಲಿ ಎಫ್‌ಪಿಐಗಳು ಅಂದಾಜು 78,903 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಅಂಕಿಅಂಶಗಳು ತೋರಿಸುತ್ತವೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ (ಎಫ್​ಐಪಿ- ಫಾರೇನ್​ ಇನ್​ಸ್ಟಿಟ್ಯೂಷನಲ್​ ಇನ್ವೆಸ್ಟರ್ಸ್) ಹೆಚ್ಚಿರುವ ಖರೀದಿ ಚಟುವಟಿಕೆಯು ಅಮೆರಿಕ ಬ್ಯಾಂಕ್​ ಬಡ್ಡಿ ದರ ಕಡಿತ, ಅಮೆರಿಕ ಡಾಲರ್‌ ಕುಸಿತ, ಭಾರತದ ದೃಢವಾದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳ ಕಾರಣಗಳಿಂದ ಬಂದಿದೆ.

    4. ಚಿಲ್ಲರೆ ಹೂಡಿಕೆದಾರರ ಪಾತ್ರ ಹೆಚ್ಚಳ:

    ಭಾರತದಲ್ಲಿ ಹೆಚ್ಚುತ್ತಿರುವ ಚಿಲ್ಲರೆ ಹೂಡಿಕೆದಾರರ ಜನಸಂಖ್ಯೆಯು ದೇಶೀಯ ಮಾರುಕಟ್ಟೆಯ ಸ್ಥಿತಿಸ್ಥಾಪಕತ್ವಕ್ಕೆ ಗಣನೀಯವಾಗಿ ಕೊಡುಗೆ ನೀಡಿದೆ ಎಂದು ವಿಶ್ಲೇಷಕರು ಹೇಳುತ್ತಾರೆ,

    ಬಿಎಸ್‌ಇ ಅಂಕಿಅಂಶಗಳು, ಷೇರು ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ 27 ಪ್ರತಿಶತದಷ್ಟು ಹೆಚ್ಚಾಗಿದೆ. ಪ್ರತಿ ತಿಂಗಳಲ್ಲಿ ಚಿಲ್ಲರೆ ಹೂಡಿಕೆದಾರರ ಸಂಖ್ಯೆಯು ಅಂದಾಜು 3 ಪ್ರತಿಶತದಷ್ಟು ಹೆಚ್ಚಾಗಿದೆ.

    “ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆಯು ದೇಶೀಯ ಷೇರು ಮಾರುಕಟ್ಟೆಗಳಲ್ಲಿ ಬಲವಾದ ಶಕ್ತಿಯಾಗಿ ಹೊರಹೊಮ್ಮಿದೆ. ಅಲ್ಲದೆ, ಮಾರುಕಟ್ಟೆಯ ಚಂಚಲತೆಯನ್ನು ಕಡಿಮೆ ಮಾಡಿದೆ, ವಿಶೇಷವಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಲು ಮುಂದಾದಾಗ, ನಮ್ಮ ಆರ್ಥಿಕತೆ ವಿಸ್ತರಿಸುವುದರಿಂದ ಮತ್ತು ಆದಾಯದ ಮಟ್ಟಗಳು ಹೆಚ್ಚಾಗಿರುವುದರಿಂದ ಹೆಚ್ಚಿನ ಚಿಲ್ಲರೆ ಹೂಡಿಕೆದಾರರು ಷೇರುಗಳಲ್ಲಿ ನೇರವಾಗಿ ಮತ್ತು ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡುತ್ತಿದ್ದಾರೆ” ಎಂದು ಪರಿಣತರು ಹೇಳುತ್ತಾರೆ.

    5. ಲಾರ್ಜ್​ ಕ್ಯಾಪ್‌ಗಳತ್ತ ಒಲವು:

    ಮಿಡ್ ಮತ್ತು ಸ್ಮಾಲ್-ಕ್ಯಾಪ್‌ಗಳಲ್ಲಿ ತೀವ್ರ ಪ್ರಮಾಣ ಲಾಭಗಳ ನಂತರ, ಹೂಡಿಕೆದಾರರ ಹಣವು ಈಗ ಮೌಲ್ಯಮಾಪನ ಸೌಕರ್ಯದ ಕಾರಣದಿಂದಾಗಿ ದೊಡ್ಡ-ಕ್ಯಾಪ್‌ಗಳಿಗೆ ಚಲಿಸುತ್ತಿದೆ ಎಂದು ತಜ್ಞರು ಒತ್ತಿಹೇಳುತ್ತಾರೆ.

    “ಮಧ್ಯಮ ಮತ್ತು ಸ್ಮಾಲ್‌ಕ್ಯಾಪ್ (ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳ ಷೇರುಗಳು) ವಿಭಾಗಗಳಲ್ಲಿ ಷೇರು ಮೌಲ್ಯಮಾಪನಗಳು ಅಧಿಕ ಎನ್ನಲಾಗಿದೆ. ಅಂದರೆ, ಈ ಷೇರುಗಳ ಬೆಲೆಗಳು ಸಾಕಷ್ಟು ಹೆಚ್ಚಳ ಕಂಡಿವೆ. ಹೀಗಾಗಿ, ಹೂಡಿಕೆದಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬ್ಲೂಚಿಪ್‌ಗಳಿಗೆ (ಲಾರ್ಜ್​ ಕ್ಯಾಪ್​. ಅಂದರೆ, ದೊಡ್ಡ ಕಂಪನಿಗಳ ಷೇರುಗಳು) ಆದ್ಯತೆ ನೀಡುವ ಮೂಲಕ ಉತ್ತಮ ಗಳಿಕೆ ಮಾಡಿಕೊಳ್ಳಬೇಕು” ಎಂದು ತಜ್ಞರು ಸಲಹೆ ನೀಡುತ್ತಾರೆ.

    ‘ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ’ ಈಗ ಕಾನೂನುಬಾಹಿರ ಸಂಘಟನೆ: ಗೃಹ ಸಚಿವಾಲಯ ಹೀಗೆ ಘೋಷಿಸಿದ್ದೇಕೆ?

    ಕರ್ನಾಟಕದಲ್ಲಿ 3 ಕೋವಿಡ್​ ಸಾವು: ಜೆನ್​.1 ಪ್ರಕರಣಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗುವುದೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts