More

    ರಸ್ತೆ ಬದಿ ತ್ಯಾಜ್ಯಕ್ಕೆ ಬೆಂಕಿ – ವಿಲೇವಾರಿ ಬಳಿಕ ಕೃತ್ಯ

    ವಿಜಯವಾಣಿ ಸುದ್ದಿಜಾಲ ಹಟ್ಟಿಚಿನ್ನದಗಣಿ
    ಸ್ಥಳೀಯ ಅಧಿಸೂಚಿತ ಪ್ರದೇಶದಿಂದ ಹಟ್ಟಿ ಪಟ್ಟಣ ಸಂಪರ್ಕಿಸುವ ಬೈ-ಪಾಸ್ ರಸ್ತೆ ಬದಿ ಸೋಮವಾರ ಸಂಜೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗಿದೆ.

    ಹಟ್ಟಿ ಪ.ಪಂ ವ್ಯಾಪ್ತಿಯ ಕಸವನ್ನು ಬೈಪಾಸ್ ರಸ್ತೆಯ ಇಕ್ಕೆಲಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ. ಹಗಲು ಹಾಕುವ ಕಸಕ್ಕೆ ಸಂಜೆ ಸಿಬ್ಬಂದಿಯೇ ಬೆಂಕಿ ಹಚ್ಚುತ್ತಿದ್ದಾರೆ. ಸೋಮವಾರ ಸಂಜೆ ಕಸಕ್ಕೆ ಹಚ್ಚಿದ ಬೆಂಕಿ ಸುತ್ತಲಿರುವ ಗಿಡ-ಗಂಟಿ, ಬೇಲಿಗಳಿಗೆ ವ್ಯಾಪಿಸಿದೆ. ಇದರಿಂದಾಗಿ ಬೈಪಾಸ್‌ನಲ್ಲಿ ರಸ್ತೆಯಿಡೀ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಲಿಂಗಸುಗೂರಿನಿಂದ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

    ಸುಮಾರು 2 ಗಂಟೆ ಬೈಪಾಸ್ ರಸ್ತೆಗೆ ಹೊಂದಿಕೊಂಡಿರುವ 11 ನೇ ವಾರ್ಡ್‌ನಲ್ಲಿನ ಮನೆಗಳ ಒಳಗೆ ಹೊಗೆ ಹೋಗಿ ನಿವಾಸಿಗಳು ಪರದಾಡಿದರು. ವಾಹನ ಸವಾರರು ರಸ್ತೆ ದಾಟಲು ಪರದಾಡುವಂತಾಗಿದೆ. ಕಾಕಾನಗರ ಸೇತುವೆ ನಿರ್ಮಾಣದ ಹಂತದಲ್ಲಿರುವುದರಿಂದ ಹಟ್ಟಿ-ರಾಯಚೂರು ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದು, ಬೈಪಾಸ್ ರಸ್ತೆಯೊಂದೇ ಪರ್ಯಾಯ ಮಾರ್ಗವಾಗಿದೆ. ಕಸ ವಿಲೇವಾರಿಯಿಂದ ನಾಯಿ-ಹಂದಿಗಳಿಗೆ ಈ ಸ್ಥಳ ಆವಾಸ ಸ್ಥಾನವಾಗಿದೆ. ಬೆಂಕಿ ಹಚ್ಚಿದ ಕೂಡಲೇ ನಾಯಿ, ಹಂದಿಗಳು ಓಡಿ ಬರುವುದರಿಂದ ಬೈಕ್, ಆಟೋ ಸವಾರರು, ಪಾದಚಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ.

    ರಸ್ತೆ ಬದಿ ತ್ಯಾಜ್ಯಕ್ಕೆ ಬೆಂಕಿ - ವಿಲೇವಾರಿ ಬಳಿಕ ಕೃತ್ಯ
    ಬೈಪಾಸ್ ರಸ್ತೆ ಬದಿ ಕಸ ವಿಲೇವಾರಿ ಮಾಡುತ್ತಿರುವುದು.

    ಸಾರ್ವಜನಿಕರು, ವಾರ್ಡ್ ನಿವಾಸಿಗಳು ಹಲವು ಬಾರಿ ಕಸ ವಿಲೇವಾರಿಗೆ ಅಡ್ಡಿಪಡಿಸಿ, ಜನರಿಗೆ ತೊಂದರೆಯಾಗದಂತೆ ಬೇರೆಡೆ ಹಾಕಬೇಕೆಂದು ಮುಖ್ಯಾಧಿಕಾರಿಗೆ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ನಾವೇನು ನಿಮ್ಮ ಮನೆಗೆ ಕಸ ತಂದು ಹಾಕುತ್ತಿಲ್ಲ. ಬೇರೆಡೆ ಎಲ್ಲೂ ಸ್ಥಳವಿಲ್ಲ. ಹೀಗಾಗಿ ನಿಗದಿತ ಸ್ಥಳದಲ್ಲೇ ಕಸ ಹಾಕುತ್ತೇವೆ. ಇದಕ್ಕೆ ಅಡ್ಡಿ ಪಡಿಸಿದರೆ ಸರಿಯಿರುವುದಿಲ್ಲ ಎಂದು ಹೆದರಿಸುತ್ತಾರೆ ಎಂದು ವಾರ್ಡ್ ನಿವಾಸಿಗಳಾದ ಮಲ್ಲಪ್ಪ, ದುರುಗಮ್ಮ, ರಾಮಾಂಜನೇಯ, ಯಲ್ಲಪ್ಪ ಆರೋಪಿಸಿದ್ದಾರೆ.

    ಕಸಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ರೋಸಿಹೋಗಿದ್ದೇವೆ. ವಾರ್ಡ್‌ನ ಪಪಂ ಸದಸ್ಯ, ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗೆ ಹಲವು ಬಾರಿ ತಿಳಿಸಿದ್ದರೂ ಕಸ ಹಾಕುವುದನ್ನು ಬಿಟ್ಟಿಲ್ಲ. ಮೇಲಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದಿದ್ದರೆ ಕಸ ವಿಲೇವಾರಿ ವಾಹನ ತಡೆದು ಪ್ರತಿಭಟನೆ ನಡೆಸಲಾಗುವುದು.
    ಮಲ್ಲಿಕಾರ್ಜುನ್ ಚಿತ್ರನಾಳ್, 11 ನೇ ವಾರ್ಡ್ ನಿವಾಸಿ, ಹಟ್ಟಿ

    ಕಡ್ಡೋಣಿ ಗ್ರಾಮದಲ್ಲಿ ಕಸ ವಿಲೇವಾರಿಗೆ ಜಮೀನು ಸಿದ್ಧಗೊಂಡಿದೆ. ಆದಷ್ಟು ಬೇಗನೆ ಸ್ಥಳಾಂತರಕ್ಕೆ ಕ್ರಮಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಸಾರ್ವಜನಿಕರು ಸಹಕರಿಸಬೇಕು.
    ಶಂಭುಲಿಂಗ ದೇಸಾಯಿ, ಪಪಂ ಮುಖ್ಯಾಧಿಕಾರಿ, ಹಟ್ಟಿ

    ಅನಧಿಕೃತವಾಗಿ ರಸ್ತೆ ಬದಿ ಕಸ ವಿಲೇವಾರಿ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಆಧಾರ ಸಹಿತವಾಗಿ ದೂರುಗಳು ಬಂದಿವೆ. ದೂರು ಆಧರಿಸಿ ಕಸ ವಿಲೇವಾರಿ ಮಾಡದಂತೆ, ರಸ್ತೆ ಬದಿ ಸುಟ್ಟು ಸಾರ್ವಜನಿಕರಿಗೆ ತೊಂದರೆ ಮಾಡದಂತೆ ಹಟ್ಟಿ ಪ.ಪಂ ಹಾಗೂ ಅಧಿಸೂಚಿತ ಪ್ರದೇಶ ಸಮಿತಿ ಎರಡಕ್ಕೂ ನೋಟಿಸ್ ಜಾರಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    ಸುಗಂಧಿನಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ, ರಾಯಚೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts