More

    ರಸ್ತೆಗಿಳಿದ ಐದಾರು ಬಸ್

    ಹಾವೇರಿ: ಸಾರಿಗೆ ನೌಕರರ ಮುಷ್ಕರ ಮೂರನೇ ದಿನವೂ ಮುಂದುವರಿದಿದ್ದು, ಶುಕ್ರವಾರವೂ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಯಿತು. ಈ ಮಧ್ಯೆ ನಾಲ್ಕೈದು ಬಸ್​ಗಳು ಮಾತ್ರ ಸಂಚರಿಸಿದವು.

    ಬೆಳಗ್ಗೆ 10ಕ್ಕೆ ಹುಬ್ಬಳ್ಳಿಯಿಂದ ಇಲ್ಲಿಯ ಬಸ್​ನಿಲ್ದಾಣಕ್ಕೆ ಒಂದು ಬಸ್ ಆಗಮಿಸಿತು. ಹುಬ್ಬಳ್ಳಿ ವರ್ಕ್​ಶಾಪ್​ನಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಜು ತಹಶೀಲ್ದಾರ್ ಎಂಬುವವರು ಚಲಾಯಿಸಿ ಕೊಂಡು ಬಂದರು. ನಗರದ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹತ್ತಿಸಿ ಕೊಂಡು ವಾಪಸ್ ಹುಬ್ಬಳ್ಳಿಯತ್ತ ಸಾಗಿದರು.

    ಮಧ್ಯಾಹ್ನ 1 ಗಂಟೆಗೆ ಮೈಸೂರು ಡಿಪೋಕ್ಕೆ ಸೇರಿದ ನಾಲ್ಕು ಬಸ್​ಗಳು ಒಂದರ ಹಿಂದೆ ಒಂದರಂತೆ ಏಕಕಾಲಕ್ಕೆ ಹುಬ್ಬಳ್ಳಿಯಿಂದ ಹಾವೇರಿ ನಿಲ್ದಾಣಕ್ಕೆ ಆಗಮಿಸಿದವು. ಮುಷ್ಕರ ಆರಂಭಕ್ಕೂ ಮುನ್ನ ಮೈಸೂರಿನಿಂದ ಹುಬ್ಬಳ್ಳಿಗೆ ಬಂದು ಸಿಕ್ಕಿಹಾಕಿಕೊಂಡಿದ್ದ ಆ ನಾಲ್ಕು ಬಸ್​ಗಳ ಚಾಲಕರು ಮತ್ತು ನಿರ್ವಾಹಕರು ಶುಕ್ರವಾರ ವಾಪಸ್ ಮೈಸೂರಿನತ್ತ ತೆರಳಿದರು. ನೂರಾರು ಪ್ರಯಾಣಿಕರು ಈ ಬಸ್​ಗಳಲ್ಲಿ ಆಗಮಿಸಿದರು. ಮಧ್ಯಾಹ್ನ 2 ಗಂಟೆಗೆ ಹಾವೇರಿಯಿಂದ ರಾಣೆಬೆನ್ನೂರಗೆ ಒಂದು ಬಸ್ ಓಡಿಸಲಾಯಿತು. ರಾಣೆಬೆನ್ನೂರನಿಂದ ಗುತ್ತಲಕ್ಕೆ ಮತ್ತೊಂದು ಬಸ್ ಸಂಚರಿಸಿತು. ಎರಡು ದಿನಗಳ ಬಳಿಕ ಜಿಲ್ಲೆಯ ರಸ್ತೆಗಳಲ್ಲಿ ಸಾರಿಗೆ ಸಂಸ್ಥೆ ಬಸ್​ಗಳ ಸಂಚಾರ ಕಂಡು ಸಾರ್ವಜನಿಕರು ಖುಷಿಪಟ್ಟರು.

    ಎಲ್ಲ ಮಾರ್ಗಗಳಲ್ಲಿ ಬಸ್ ಸಂಸ್ಥೆಯ ಸಿಬ್ಬಂದಿ ಮುಷ್ಕರ ಮುಂದುವರಿ ಸಿರುವುದರಿಂದ ಶುಕ್ರವಾರವೂ ಬಸ್ ಓಡಿಸಲು ಸಾಧ್ಯವಾಗಿಲ್ಲ. ಜಿಲ್ಲೆಗೆ ಸೇರಿದ ಎರಡು ಬಸ್​ಗಳು ಮಾತ್ರ ಹಾವೇರಿ- ರಾಣೆಬೆನ್ನೂರ, ರಾಣೆಬೆನ್ನೂರನಿಂದ ಗುತ್ತಲಕ್ಕೆ ಸಂಚರಿಸಿದವು. ನೌಕರರ ಮನವೊಲಿಸುವ ಕಾರ್ಯ ನಡೆಸಿದ್ದೇವೆ.

    | ವಿ.ಎಸ್. ಜಗದೀಶ

    ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಹಾವೇರಿ

    ಸಾರಿಗೆ ನೌಕರರ ಬೇಡಿಕೆ ಈಡೇರಿಸಿ

    ರಾಣೆಬೆನ್ನೂರ: ಸಾರಿಗೆ ಸಂಸ್ಥೆ ನೌಕರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಹಾಗೂ ಮುಷ್ಕರ ಕೈಗೊಂಡಿರುವವರ ಮೇಲೆ ಎಸ್ಮಾ ಜಾರಿ ಪ್ರಯೋಗ ಕೈಬಿಟ್ಟು ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ನೇತೃತ್ವ ವಹಿಸಿದ್ದ ಸಂಘಟನೆಯ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. 3 ದಿನಗಳಿಂದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. ಆದರೆ, ಸರ್ಕಾರ ಅವರ ಬಹುವರ್ಷಗಳ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಬೇಡಿಕೆ ಈಡೇರಿಸುವ ಬದಲು ಅದನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇದನ್ನು ಕೈ ಬಿಟ್ಟು ಸರ್ಕಾರ ನೌಕರರಿಗೆ 6ನೇ ವೇತನ ಆಯೋಗದ ವರದಿ ಜಾರಿ ಸೇರಿ 9 ಬೇಡಿಕೆಗಳನ್ನು ಕೂಡಲೆ ಈಡೇರಿಸಬೇಕು. ಎಂದರು.

    ಉಪ ತಹಸೀಲ್ದಾರ್ ಸುನೀಲ ಶೆಟ್ಟರ್ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಸುರೇಶಪ್ಪ ಗರಡಿಮನಿ, ಎಸ್.ಡಿ. ಹಿರೇಮಠ, ಮರಡೆಪ್ಪ ಚಳಗೇರಿ, ಬಸವರಾಜ ಕೊಂಗಿ, ದಿಳ್ಳೆಪ್ಪ ಸತ್ಯಪ್ಪನವರ, ಹರಿಹರಗೌಡ ಪಾಟೀಲ, ಬಸವರಾಜ ಕೊಳೇರ ಇತರರಿದ್ದರು.

    ಹಿರೇಕೆರೂರಲ್ಲೂ ಸಂಚರಿಸದ ಬಸ್

    ಹಿರೇಕೆರೂರ: ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ ಶುಕ್ರವಾರವೂ ಯಾವುದೇ ಬಸ್ ಸಂಚರಿಸಲಿಲ್ಲ. ಪ್ರಯಾಣಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋದರು. ನಿಲ್ದಾಣದ ಸಮೀಪ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಆಟೋ ಸೇರಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಅವರ ಊರುಗಳಿಗೆ ತೆರಳಿದರು. ಆದರೆ, ಬಸ್ ಮುಷ್ಕರ ಇದ್ದರೂ ಪಟ್ಟಣದ ಜನಜೀವನ ಯಾವುದೇ ತೊಂದರೆ ಇಲ್ಲದೆ ನಡೆಯಿತು. ಸಾರಿಗೆ ಮುಷ್ಕರ ಇದ್ದರೂ ಶಾಲಾ- ಕಾಲೇಜ್​ಗಳಿಗೆ ರಜೆ ಘೊಷಿಸಿರಲಿಲ್ಲ. ಪಾಲಕರು ಮಕ್ಕಳನ್ನು ಸ್ವಂತ ವಾಹನದಲ್ಲಿ ಕರೆದುಕೊಂಡು ಶಾಲೆ ಕಳುಹಿಸಿ, ನಂತರ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts