More

    ದ್ರೋಣಗಿರಿ ಸಂಚಾರಕ್ಕೆ ಕಿರಿಕಿರಿ

    ವಿಜಯವಾಣಿ ಸುದ್ದಿಜಾಲ ಶಿರಸಿ

    ವರ್ಷದೊಳಗೆ ಪೂರ್ಣಗೊಳ್ಳಬೇಕಿದ್ದ ರಸ್ತೆ ಕಾಮಗಾರಿ ಮೂರು ವರ್ಷ ಕಳೆದರೂ ಮುಗಿಯದ ಕಾರಣ ಈ ಗ್ರಾಮದ ಜನರು ಸಂಚಾರಕ್ಕೆ ಪರದಾಡುವಂತಾಗಿದೆ. ಆರೋಗ್ಯ ಹದಗೆಟ್ಟರೆ ರೋಗಿಯನ್ನು ಕಂಬಳಿಯಲ್ಲಿ ಹೊತ್ತು ತರುವ ಪರಿಸ್ಥಿತಿ ಮುಂದುವರಿದಿದೆ.

    ಹೌದು, ತಾಲೂಕು ಕೇಂದ್ರದಿಂದ 35 ಕಿ.ಮೀ. ದೂರದಲ್ಲಿರುವ ದ್ರೋಣಗಿರಿಗೆ ಈವರೆಗೂ ವ್ಯವಸ್ಥಿತ ರಸ್ತೆ ಸಂಪರ್ಕವಿಲ್ಲ. ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಈ ಹಳ್ಳಿಗೆ ಮಳೆಗಾಲದಲ್ಲಿ ಸಾಗುವುದೇ ಸವಾಲಾಗಿ ಮಾರ್ಪಟ್ಟಿದೆ. ಕಕ್ಕಳ್ಳಿಯಿಂದ ಈ ಊರಿಗೆ ಸಾಗುವ ರಸ್ತೆ ಕಾಮಗಾರಿ ಆರಂಭವಾಗಿ 3 ವರ್ಷಗಳು ಕಳೆದಿವೆ. ಆದರೆ, ಈವರೆಗೆ ಶೇ. 30ರಷ್ಟು ಕಾಮಗಾರಿ ಆಗಿಲ್ಲ. ಹೀಗಾಗಿ, ಮಳೆ ಆರಂಭದೊಂದಿಗೆ ಇಡೀ ರಸ್ತೆಯು ಪ್ರಯಾಣಿಕರಿಗೆ ನರಕ ದರ್ಶನ ಮಾಡಿಸುತ್ತದೆ. ಮೊಳಕಾಲುವರೆಗೆ ರಾಡಿ ನೀರು ನಿಂತು ಕಾಲ್ನಡಿಗೆಗೆಗೂ ಸವಾಲಾಗಿ ಪರಿಣಮಿಸಿದೆ.

    ರೂ. 75 ಲಕ್ಷದ ಕಾಮಗಾರಿ: ಎಚ್.ಕೆ. ಪಾಟೀಲ ಅವರು ಗ್ರಾಮೀಣಾಭಿವೃದ್ಧಿ ಸಚಿವರಿದ್ದ ವೇಳೆ ಸ್ಥಳೀಯರ ಸತತ ಪ್ರಯತ್ನದಿಂದ ಇಲ್ಲಿನ ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂಪಾಯಿಯ ವಿಶೇಷ ಅನುದಾನ ಮಂಜೂರಾಗಿತ್ತು. ಈ ರಸ್ತೆಯಲ್ಲಿ 2.5 ಕಿಮೀ ಡಾಂಬರೀಕರಣ, ಪ್ರಧಾನ ಘಟ್ಟ ಭಾಗದಲ್ಲಿ 250 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣ ಸೇರಿದ್ದವು. ಆದರೆ, ಕಳೆದ 3 ವರ್ಷಗಳಲ್ಲಿ 2.5 ಕಿಲೋ ಮೀಟರ್ ರಸ್ತೆಗೆ ಪ್ರಥಮ ಹಂತದ ಖಡೀಕರಣವಾಗಿದೆ. ಆದರೆ, 2ನೇ ಹಂತದ ಖಡೀಕರಣ, ನಂತರದ ಡಾಂಬರೀಕರಣ ಆಗಲಿಲ್ಲ. ಅತಿ ಮುಖ್ಯವಾಗಿ ಯೋಜನೆಯಲ್ಲಿರುವಂತೆ ಇಲ್ಲಿನ ಅಪಾಯಕಾರಿ ಘಟ್ಟದಲ್ಲಿ 250 ಮೀಟರ್ ಕಾಂಕ್ರೀಟ್ ರಸ್ತೆಯೂ ನಿರ್ವಣವಾಗಿಲ್ಲ. ಇದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣವಾಗುವಂತೆ ಮಾಡಿದೆ.

    ಕಾಮಗಾರಿ ಸ್ಥಗಿತ: 2017-18ರಲ್ಲಿ ಮಂಜೂರಾದ ಕಾಮಗಾರಿಯು ಆರಂಭದ ದಿನಗಳಲ್ಲಿ ನಿರೀಕ್ಷೆಯಂತೆ ನಡೆದರೂ ಕ್ರಮೇಣ ಸ್ಥಗಿತಗೊಂಡಿತ್ತು. ಯೋಜನೆಯಡಿ ಕಾಮಗಾರಿ ಪೂರ್ಣಗೊಂಡ ನಂತರವೇ ಹಣ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಕಾಮಗಾರಿಯ ಪ್ರಥಮ ಹಂತದ ಹಣ ಬಿಡುಗಡೆಯಾಗಿಲ್ಲ ಎಂದು ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದರು. ಸಾಕಷ್ಟು ಎಚ್ಚರಿಕೆ ನೀಡಿದ ನಂತರ ಮಾರ್ಚ್ ವೇಳೆ ಕಾಮಗಾರಿ ಆರಂಭ ಕಂಡಿತ್ತಾದರೂ ಲಾಕ್​ಡೌನ್ ಕಾರಣಕ್ಕೆ ಸ್ಥಗಿತಗೊಂಡಿದೆ. ಇದೀಗ ಮಳೆ ಆರಂಭವಾಗಿದ್ದು, ಅರ್ಧಮರ್ಧ ಕಾಮಗಾರಿ ಕೈಗೊಂಡ ರಸ್ತೆಯಲ್ಲಿ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ.

    ದ್ರೋಣಗಿರಿಯು ಸದಾಕಾಲ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಪ್ರಸ್ತುತ ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡಿದ್ದರೆ ಬಸ್ ಸಂಚಾರ ಆರಂಭ ಆಗುವ ಸಾಧ್ಯತೆಯಿತ್ತು. ಆದರೆ, ಕಾಮಗಾರಿ ನಿಂತ ನೀರಾಗಿದ್ದು, ವಾಹನಗಳ ಓಡಾಟಕ್ಕೆ ತೀರಾ ಸಮಸ್ಯೆಯಾಗಿದೆ. ದ್ರೋಣಗಿರಿ ಗ್ರಾಮದಲ್ಲಿರುವವರಿಗೆ ಆರೋಗ್ಯ ಹದಗೆಟ್ಟರೆ ಅವರನ್ನು ಆಸ್ಪತ್ರೆಗೆ ಕರೆತರುವುದೇ ಹರಸಾಹಸ. ನಡೆದಾಡಲಾಗದ ರಸ್ತೆಯಲ್ಲಿ ಬಾಡಿಗೆ ವಾಹನದವರು ಬರಲು ಮುಂದಾಗುವುದಿಲ್ಲ. ಹೀಗಾಗಿ, ಕಂಬಳಿಯಲ್ಲಿ ಹೊತ್ತು ತರಬೇಕಾದ ಸನ್ನಿವೇಶವಿದೆ. ದಿನಸಿಯನ್ನು ಕೂಡ ತಲೆ ಮೇಲೆ ಹೊತ್ತು ಸಾಗಬೇಕಿದೆ. ಮಳೆ ಹೆಚ್ಚಿದರೆ ಕಾಲ್ನಡಿಗೆ ಕೂಡ ಅಸಾಧ್ಯವಾಗುತ್ತದೆ. ಹಾಗಾಗಿ ತ್ವರಿತವಾಗಿ ಕಾಮಗಾರಿ ನಡೆಸಬೇಕು.

    | ಗಣಪ ಗೌಡ, ಸ್ಥಳೀಯ ನಿವಾಸಿ

    ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಹಲವು ನೋಟಿಸ್ ನೀಡಲಾಗಿದೆ. ಜನರಿಗೆ ಆಗುವ ತೊಂದರೆ ಕುರಿತು ತಿಳಿಸಿದ್ದು, ಪ್ರಸ್ತುತ ಕೋವಿಡ್ 19 ಕಾರಣ ನೀಡಿ ಕಾಮಗಾರಿ ನಡೆಸುತ್ತಿಲ್ಲ. ಕಾಮಗಾರಿ ಪೂರ್ಣಗೊಂಡ ಮೇಲೆಯೇ ಹಣ ಬರುವುದು ತಿಳಿದಿದ್ದು, ಪ್ರಥಮ ಕಂತಿನ ಹಣ ಬಂದಿಲ್ಲವೆಂದು ಕಾಮಗಾರಿ ಮಾಡದ ಗುತ್ತಿಗೆದಾರರಿಗೆ ಇದೀಗ ಅಂತಿಮ ಎಚ್ಚರಿಕೆ ಸಹ ನೀಡಲಾಗಿದೆ.

    | ರಾಮಚಂದ್ರ ಗಾಂವಕರ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts