More

    ಕಲ್ಮಾಡಿಯಲ್ಲಿ ಸಂಚಾರ ಅಪಾಯ, ಕಿತ್ತುಹೋದ ಇಂಟರ್‌ಲಾಕ್‌ಗಳು

    ಅವಿನ್ ಶೆಟ್ಟಿ ಉಡುಪಿ

    ಕಲ್ಮಾಡಿ ಮುಖ್ಯ ಜಂಕ್ಷನ್‌ನಿಂದ ಕಲ್ಮಾಡಿ ಸೇತುವೆವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಪಾಯಕರ ಸ್ಥಿತಿಯಲ್ಲಿದ್ದು, ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇಲ್ಲಿನ 500 ಮೀಟರ್ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿದ್ದು ಈ ಬಗ್ಗೆ ನಗರಸಭೆ, ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.
    ಈ ಭಾಗದಲ್ಲಿ ಕಾಂಕ್ರಿಟ್ ರಸ್ತೆಯ ಎರಡೂ ಬದಿಯ ಇಂಟರ್‌ಲಾಕ್ ಬಹುತೇಕ ಕಡೆ ಕಿತ್ತು ಹೋಗಿದ್ದು ಕೆಲವೆಡೆ ಕುಸಿದಿದೆ. ಕಾಂಕ್ರೀಟ್ ರಸ್ತೆಯ ಅಂಚು ಮತ್ತು ಇಂಟರ್‌ಲಾಕ್ ರಸ್ತೆಯ ಮಧ್ಯೆ ಸುಮಾರು ಮೂರ‌್ನಾಲ್ಕು ಇಂಚುಗಳಷ್ಟು ಅಂತರ ಉಂಟಾಗಿದೆ. ಈ ಭಾಗದಲ್ಲಿ ದ್ವಿಚಕ್ರ ವಾಹನ ಸವಾರರು ಎದುರು ಬರುವ ವಾಹನಗಳಿಗೆ ದಾರಿ ಮಾಡಿಕೊಡಲು ಬದಿಗೆ ಸರಿದಾಗ ರಸ್ತೆಯ ಅಂಚಿಗೆ ಚಕ್ರ ಸಿಲುಕಿ ಸ್ಕಿಡ್ಡಾಗಿ ಬಿದ್ದು ಕೈ ಕಾಲುಗಳಿಗೆ ಗಂಭೀರ ಗಾಯಗೊಂಡು ಕೆಲಸ ಮಾಡಲಾಗದೆ ತಿಂಗಳುಗಟ್ಟಲೆ ಆಸ್ಪತೆ, ಮನೆಯಲ್ಲಿ ವಿಶ್ರಾಂತಿ ಪಡೆಯುವಂತಾಗಿದೆ. ಎರಡು -ಮೂರು ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿದ್ದರೂ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

    ಹೆಚ್ಚುತ್ತಿರುವ ವಾಹನಗಳ ಓಡಾಟ
    ಮಲ್ಪೆ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ವೇಗವಾಗಿ ಪ್ರಗತಿ ಕಾಣುತ್ತಿದೆ. ಹೊರ ಜಿಲ್ಲೆ, ರಾಜ್ಯ ಸೇರಿದಂತೆ ಮಲ್ಪೆ ನಗರಕ್ಕೆ ಪ್ರತಿನಿತ್ಯ ಸಾವಿರಾರು ವಾಹನಗಳು ಬರುತ್ತವೆ. ವಾಹನಗಳ ದಟ್ಟಣೆ, ಸುಗಮ ಸಂಚಾರಕ್ಕೆ ತಡೆ ಉಂಟಾಗುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆ ವಿಸ್ತರಣೆ ಕುರಿತೈದು ವರ್ಷಗಳ ಬೇಡಿಕೆ ಈಡೇರಿಸಲು ಇನ್ನೂ ಸಾಧ್ಯವಾಗಿಲ್ಲ.

    ವಿಸ್ತರಣೆ ಯೋಜನೆ ಪ್ರಗತಿ
    ಪ್ರತಿನಿತ್ಯ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ನೂರಾರು ಜನ ಕೈಕಾಲು ಮುರಿದುಕೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿ ರಮೇಶ್ ತಿಂಗಳಾಯ ಕಲ್ಮಾಡಿ ತಿಳಿಸಿದ್ದು, ಹೆದ್ದಾರಿ ಇಲಾಖೆ ಈ ವಿಷಯದಲ್ಲಿ ಸಂಬಂಧ ಇಲ್ಲದಂತೆ ಕುಳಿತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169(ಎ) ವಿಸ್ತರಣೆ ಕಾಮಗಾರಿ ಯೋಜನೆ ಭಾಗವಾಗಿ ಮಲ್ಪೆ-ಆದಿ ಉಡುಪಿ ರಸ್ತೆ ವಿಸ್ತರಣೆ ಯೋಜನೆ ಪ್ರಗತಿಯಲ್ಲಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಈ ರಸ್ತೆ ಬರುವುದರಿಂದ ನಗರಸಭೆ ವತಿಯಿಂದ ತುರ್ತು ಕಾಮಗಾರಿ ಕೈಗೊಂಡು ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಈ ಅಪಾಯಕಾರಿ ರಸ್ತೆ ಸರಿಪಡಿಸುವ ಬಗ್ಗೆ ಹೆದ್ದಾರಿ ಅಧಿಕಾರಿಗಳಲ್ಲಿ ಚರ್ಚೆ ನಡೆಸಿದ್ದು, ವಿಸ್ತರಣೆ ಕಾಮಗಾರಿ ಯೋಜನೆ ಪ್ರಗತಿಯಲ್ಲಿರುವ ಬಗ್ಗೆ ತಿಳಿಸಿದ್ದಾರೆ. ಅನಾಹುತ ಸಂಭವಿಸಬಾರದು ಎಂಬ ದೃಷ್ಟಿಯಿಂದ ತುರ್ತು ಕಾಮಗಾರಿಯಾದರೂ ಕೈಗೊಂಡು ಇಂಟರ್‌ಲಾಕ್ ಅವ್ಯವಸ್ಥೆ ಸರಿಪಡಿಸುವಂತೆ ಹೇಳಿದ್ದೇವೆ.
    ಸುಂದರ್ ಜೆ.ಕಲ್ಮಾಡಿ, ಉಡುಪಿ ನಗರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts