More

    ಕೃಷಿ ಇಲಾಖೆಗಳಲ್ಲಿ ಸಿಬ್ಬಂದಿಯೇ ಇಲ್ಲ : ಶೇ.80 ಹುದ್ದೆಗಳು ಖಾಲಿ

    ಬಾಗೇಪಲ್ಲಿ: ಕೃಷಿ ಅವಲಂಬಿತ ಬಾಗೇಪಲ್ಲಿ ತಾಲೂಕಿಗೆ ಆವರಿಸಿದ್ದ ಬರ ರೈತರನ್ನು ಪರಿಪರಿಯಾಗಿ ಕಾಡುತ್ತಿದೆ. ಇದರ ಜತೆಗೆ ಕೃಷಿ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯೂ ಅನ್ನದಾತನಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
    ಹೌದು. ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾರಣದಿಂದ ಬರ ಪರಿಹಾರದ ಹಣ ಸೇರಿ ಇನ್ನಿತರ ಯೋಜನೆಗಳ ಸಮರ್ಪಕ ಅನುಷ್ಠಾನ ವಿಳಂಬವಾಗಿ ರೈತರ ಬದುಕಿನ ಮೇಲೆ ಬರೆ ಎಳೆದಿದೆ. ಇದರಿಂದಾಗಿ ತಾಲೂಕಿನ ಸಾವಿರಾರು ಅನ್ನದಾತರು ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ.
    ಕೃಷಿ, ತೋಟಗಾರಿಕೆ ಮತ್ತು ಪಶುಪಾಲನೆ ಸೇರಿ ಪ್ರಮುಖ ಮೂರು ಇಲಾಖೆಗಳಲ್ಲಿ ಒಟ್ಟು 102 ಸಿಬ್ಬಂದಿ ಇರಬೇಕು. ಮೂವರು ಸಹಾಯಕ ನಿರ್ದೇಶಕರ ಹುದ್ದೆ ಸೇರಿ 80 ಹುದ್ದೆಗಳು ಖಾಲಿ ಇವೆ. ಶೇ.80 ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಸರ್ಕಾರ ನಿಗದಿಪಡಿಸಿರುವ ವಿವಿಧ ಯೋಜನೆಗಳಲ್ಲಿ ಗುರಿ ಸಾಧಿಸಲು ತಾಲೂಕು ಮಟ್ಟದ ಅಧಿಕಾರಿಗಳು ವಿಫಲರಾಗಿದ್ದಾರೆ.

    ರೈತರು, ಕೃಷಿ ಭೂಮಿ ವಿವರ: ತಾಲೂಕಿನಾದ್ಯಂತ ಸಣ್ಣ ರೈತರು 40050, ದೊಡ್ಡ ರೈತರು 6162, ಅತಿ ಸಣ್ಣ ರೈತರು 24053 ಸೇರಿ ಒಟ್ಟು 70265 ಕೃಷಿಕರಿದ್ದಾರೆ. 38,342 ಹೆಕ್ಟೇರ್ ವಿಸ್ತೀರ್ಣದ ಜಮೀನು ಸಾಗುವಳಿಗೆ ಯೋಗ್ಯವಾಗಿದ್ದು, ಮುಸುಕಿನ ಜೋಳ, ನೆಲಗಡಲೆ, ರಾಗಿ, ಅಲೂಗಡ್ಡೆ, ಟೊಮ್ಯಾಟೊ ಸೇರಿ ವಿವಿಧ ತರಕಾರಿ ಬೆಳೆಯುತ್ತಾರೆ.

    ಕೃಷಿ ಇಲಾಖೆ ಯೋಜನೆಗಳು: ರಿಯಾಯಿತಿ ಬೆಲೆಗೆ ಬಿತ್ತನೆ ಬೀಜ ವಿತರಣೆ, ಕೃಷಿ ಭಾಗ್ಯ, ಕೃಷಿ ಯಾಂತ್ರೀಕರಣ, ಲಘು ನೀರಾವರಿ, ಸಾವಯವ ಭಾಗ್ಯ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ, ನರೇಗಾ ಯೋಜನೆ (ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ), ಸಸ್ಯ ಸಂರಕ್ಷಣೆ ಯೋಜನೆಗಳಿದ್ದರೂ ಸಿಬ್ಬಂದಿ ಕೊರತೆಯಿಂದ ಸಮರ್ಪಕ ಸೌಲಭ್ಯ ಪಡೆಯಲು ತೊಡಕುಂಟಾಗಿದೆ.

    ಖಾಲಿ ಹುದ್ದೆಗಳು: ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಒಟ್ಟು 32 ಹುದ್ದೆಗಳ ಪೈಕಿ 2-3 ಹುದ್ದೆಗಳು ಭರ್ತಿಯಾಗಿದ್ದು, ಉಳಿದ ಎಲ್ಲ ಹುದ್ದೆಗಳಿಗೂ ಕಾಯಂ ಸಿಬ್ಬಂದಿಯೇ ಇಲ್ಲ. ಸಹಾಯಕ ನಿರ್ದೇಶಕರ 1 ಹುದ್ದೆಯೂ ಖಾಲಿ ಇದೆ. ಕೃಷಿ ಅಧಿಕಾರಿಗಳ 8 ಹುದ್ದೆಗಳು , ಸಹಾಯಕ ಕೃಷಿ ಅಧಿಕಾರಿ 12 ಹುದ್ದೆಗಳ ಪೈಕಿ 10 ಖಾಲಿ ಇವೆ. ಅಧೀಕ್ಷಕರ 1 ಹುದ್ದೆ ಖಾಲಿ, ಪ್ರಥಮ ದರ್ಜೆ, ದ್ವಿತೀಯ ದರ್ಜೆ ಹಾಗೂ ಡಿ ಗ್ರೂಪ್ ನೌಕರರು ಸೇರಿ 6 ಹುದ್ದೆಗಳು ಖಾಲಿ ಇವೆ.

    ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳೇ ಇಲ್ಲ: ಬಾಗೇಪಲ್ಲಿ ಕಸಬಾ ಹೋಬಳಿ ಹಾಗೂ ಮಿಟ್ಟೇಮರಿ, ಚೇಳೂರು, ಪಾತಪಾಳ್ಯ, ಗೂಳೂರು ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಯಾರೊಬ್ಬರೂ ಕಾಯಂ ಅಧಿಕಾರಿಗಳು ಇಲ್ಲ. ಗುತ್ತಿಗೆ ಆಧಾರದ ಸಿಬ್ಬಂದಿಯೇ ಎಲ್ಲವನ್ನು ನಿಭಾಯಿಸಬೇಕಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಅವಾಂತರಗಳು ತಾಂಡವವಾಡುತ್ತಿವೆ.


    ಬಾಗೇಪಲ್ಲಿ ತಾಲೂಕಿನ ಕೃಷಿ ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 32 ಹುದ್ದೆಗಳಿವೆ. ಆದರೆ ಇಬ್ಬರು ಕಾಯಂ ಅಧಿಕಾರಿಗಳಿದ್ದು, ಮೂವರು ಗುತ್ತಿಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ವರ್ಷದ ಹಿಂದೆಯೇ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೊರತೆಗಳ ನಡುವೆಯೂ ಇಲಾಖೆ ಯೋಜನೆಗಳ ಪ್ರಗತಿ ಸಾಧನೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ.
    ಲಕ್ಷ್ಮೀ, ಕೃಷಿ ಸಹಾಯಕ ನಿರ್ದೇಶಕಿ, ಬಾಗೇಪಲ್ಲ


    ಬಾಗೇಪಲ್ಲಿ ತಾಲೂಕಿನ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳು ಇಲ್ಲದ ಕಾರಣ ಸರ್ಕಾರಿ ಯೋಜನೆಗಳ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರ ಸಮಸ್ಯೆಗಳಿಗೆ ಪರಿಹಾರವೂ ಸಿಗುತ್ತಿಲ್ಲ. ಒಂದು ಕೆಲಸಕ್ಕೆ 2-3 ಬಾರಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
    ಈಶ್ವರಮ್ಮ, ಕಾಗಾನಪಲ್ಲಿ, ಬಾಗೇಪಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts