More

    ರಸ್ತೆ ಮೇಲ್ದರ್ಜೆ ಪ್ರಸ್ತಾವನೆ ನನೆಗುದಿಗೆ!

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ವಾಹನ ಸಂಚಾರ ದಟ್ಟಣೆ, ಅಪಘಾತಗಳ ನಿಯಂತ್ರಣ, ಕೃಷಿ, ಕೈಗಾರಿಕೆ ಇತರ ಕ್ಷೇತ್ರಗಳ ಅಭಿವೃದ್ಧಿಗಾಗಿ ಜಿಲ್ಲೆಯ 251 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ವರ್ಷಗಳಿಂದ ಸಿಗುತ್ತಿಲ್ಲ ಸರ್ಕಾರದ ಒಪ್ಪಿಗೆ..!
    ಹೌದು, ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಹೊರತುಪಡಿಸಿ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನೊಳಗೊಂಡ 13,362 ಕಿ.ಮೀ. ಉದ್ದದ ರಸ್ತೆಗಳಿವೆ. ಅವುಗಳಲ್ಲಿ 2,888 ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದೀಗ 992 ಕಿ.ಮೀ. ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಹಾಗೂ 1,277 ಕಿ.ಮೀ. ರಸ್ತೆಗಳನ್ನು ಪುನರ್ ನಿರ್ಮಿಸಲು ವಿಸ್ತೃತವಾದ ತಾಂತ್ರಿಕ ವಿನ್ಯಾಸ ಅಂಶಗಳನ್ನೊಳಗೊಂಡ ಹಂತ 1 ಹಾಗೂ 2ರ ಅಂತಿಮ ವರದಿಯನ್ನು ಲೋಕೋಪಯೋಗಿ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಇಲ್ಲಿಯವರೆಗೆ ಸರ್ಕಾರದಿಂದ ಅಧಿಕೃತವಾಗಿ ಅನುಮೋದನೆ ಸಿಕ್ಕಿಲ್ಲ. ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಬೆಳಗಾವಿ ಜಿಲ್ಲೆಯ 215 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಗಳು ಸೇರಿವೆ.

    ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ, ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಅಧಿಕಾರಿಗಳು ಸಂಚಾರ ಅಧ್ಯಯನ ನಡೆಸಿದ ವರದಿ ಆಧರಿಸಿ ಸರ್ಕಾರವು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಮುಂದಾಗಿದೆ. ಈಗಾಗಲೇ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವಿವಿಧ ವಿಭಾಗಗಳಿಂದ ವರದಿ ಪಡೆದುಕೊಂಡಿದೆ. ಆದರೆ, ಭೂ ಸ್ವಾಧೀನ, ಆರ್ಥಿಕ ಸಮಸ್ಯೆ ಇತರ ಕಾರಣಗಳಿಂದ ಪ್ರಸ್ತಾವನೆಗೆ ಅನುಮೋದನೆ ನೀಡದಿರುವುದು ಪ್ರಮುಖ ಕಾರಣ ಎನ್ನಲಾಗಿದೆ. ಜಿಲ್ಲೆಯಲ್ಲಿ ಬೆಳಗಾವಿ ಮತ್ತು ಬೈಲಹೊಂಗಲ ತಾಲೂಕಿನ 16 ಹಳ್ಳಿಗಳ ವ್ಯಾಪ್ತಿಯ ರಾಜಹಂಸಗಡ, ನಂದಿಹಳ್ಳಿ, ನಾಗರಾಳ, ಕೆ.ಕೆ. ಕೊಪ್ಪ, ಬಾಗೇವಾಡಿ, ಸಂಪಗಾಂವ, ಕರಡಿಗುದ್ದಿ, ಮಾರಿಹಾಳ, ತುಮ್ಮರಗುದ್ದಿ, ಹುದಲಿ ಮಾರ್ಗವಾಗಿ 59.43 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ, ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿ ತಾಲೂಕಿನ 50 ಹಳ್ಳಿಗಳ ವ್ಯಾಪ್ತಿಯ ಅಳಗವಾಡಿ, ಬಿಜಗರಣಿ, ಮುಗಳಿಹಾಳ, ಇಟಗಿ, ಅಂಬಡಗಟ್ಟಿ, ಹುಲಿಕಟ್ಟಿ, ಕೊಟಬಾಗಿ, ಶಿವಾಪುರ, ಬುಡರಕಟ್ಟಿ, ಕರಿಕಟ್ಟಿ, ಸಂಗ್ರೇಶಕೊಪ್ಪ, ಯಲ್ಲಮನಗುಡ್ಡ, ಹಂಚಿನಾಳ ಮಾರ್ಗವಾಗಿ 140.03 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಮದುರ್ಗ, ಸವದತ್ತಿ ತಾಲೂಕಿನ 18 ಹಳ್ಳಿಗಳ ವ್ಯಾಪ್ತಿಯ ಸೊಪ್ಪಡ್ಲ, ಸತ್ತಿಗೇರಿ, ಮುಗಳಿಹಾಳ, ಮಳ್ಳಿಕೇರಿ, ಕೌಜಲಗಿ, ಕಳ್ಳಿಗುದ್ದಿ, ಹುಲಕುಂದ, ಸಾಲಹಳ್ಳಿ, ಬಟಕುರ್ಕಿ, ನಂದಿಹಾಳ ಮಾರ್ಗವಾಗಿ 49.85 ಕಿ.ಮೀ. ಜಿಲ್ಲಾ ಮುಖ್ಯರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಭೂ ಸ್ವಾಧೀನ ಸಮಸ್ಯೆ

    ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ರಸ್ತೆಗಳ ಅಗಲೀಕರಣಕ್ಕೆ ನೂರಾರು ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕು. ಮಾರ್ಗಗಳ ಮಧ್ಯದ ಹಳ್ಳಿಗಳಲ್ಲಿನ ಕಟ್ಟಡಗಳನ್ನು ತೆರವುಗೊಳಿಸಬೇಕು. ಇಲ್ಲವೆ ಬೈಪಾಸ್ ರಸ್ತೆ ನಿರ್ಮಿಸಬೇಕು. ಇದಕ್ಕಾಗಿ ಅಧಿಕ ಪ್ರಮಾಣದಲ್ಲಿ ಪರಿಹಾರ ನೀಡಬೇಕಾಗುತ್ತದೆ. ಈ ಕುರಿತು ಸರ್ಕಾರಕ್ಕೆ ವಿವರವಾಗಿ ವರದಿ ಸಲ್ಲಿಸಲಾಗಿದ್ದು, ಯಾವುದೇ ಸಂದರ್ಭದಲ್ಲಿ ಅನುಮೋದನೆ ನೀಡುವ ಸಾಧ್ಯತೆಯಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ರಾಮದುರ್ಗ, ಸವದತ್ತಿ, ಖಾನಾಪುರ, ಬೈಲಹೊಂಗಲ ತಾಲೂಕಿನ ವ್ಯಾಪ್ತಿಯ 251.71 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿಸಿ ಮೇಲ್ದರ್ಜೆಗೇರಿಸಲು 2019ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿಯವರೆಗೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿಲ್ಲ.
    | ಸಂಜೀವ ಕುಮಾರ್ ಹುಳಿಕಾಯಿ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts