More

    ಹುಲ್ಕಡ್ಕೆ -ಕತ್ಕೋಡು ರಸ್ತೆ ಸಂಚಾರ ಸಂಕಷ್ಟ

    ಶ್ರೀಪತಿ ಹೆಗಡೆ ಹಕ್ಲಾಡಿ/ನರಸಿಂಹ ನಾಯಕ್ ಬೈಂದೂರು: ನಡ್ಕಂಡು ಹ್ವಾಪ ಅಂದ್ರೆ ಮನೀಗ್ ಹೋಪಹೊತ್ತಿಗೆ ರಾತ್ರಿಯಾತ್ತು ಅಂತ ಎಲ್ಲಾರೂ ರಿಕ್ಷಾದಲ್ಲಿ ಹ್ವಾರೇ ಮರ್‌ದಿನ ಏಳೂಕಾತಿಲ್ಲೆ. ರಿಕ್ಷಾ ಹೊಂಡ ಹಾರಿ ಹೊಂಡ ಹತ್ತಿ ಹೋಪಾಗ ಆಚಿ ಈಚಿ ಗುದ್ದಿ ಮೈಯೆಲ್ಲ ಹಣ್ಣಾತ್ತು.. ರಾತ್ರಿ ಯಾರಿಗಾರೂ ಜ್ವರ ಬಂದ್ರೆ ಹೊತ್ಕಂಡೇ ಹೋಯ್ಕು… ಯಾವ ವಾಹನ ನಮ್ಮೂರಿಗೆ ಬತ್ತಿಲ್ಲ, ಅಷ್ಟ್ ಲಾಯ್ಕ ಇತ್ತು ನಮ್ಮೂರ ರಸ್ತಿ ಮಾರ‌್ರೆ.

    ಹುಲ್ಕಡ್ಕೆ ಕತ್ಕೋಡು ಪರಿಸರದ ಜನ ಹೀಗೆ ಹೇಳುವುದರಲ್ಲಿ ಸತ್ಯವಿದೆ. ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮ ಕತ್ಕೋಡು -ಹುಲ್ಕಡ್ಕೆ ರಸ್ತೆಯಲ್ಲಿ ಎಚ್ಚರ ತಪ್ಪಿದರೆ ಆಸ್ಪತ್ರೆಗೆ ಗ್ಯಾರಂಟಿ. ಅಂಗನವಾಡಿಯಿಂದ ಕಾಲೇಜು ತನಕ ಪ್ರತಿದಿನ 60ರಷ್ಟು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ತಿರುಗುತ್ತಾರೆ. ಈ ಪರಿಸರದಲ್ಲಿ 165 ಮನೆಯಿದೆ. 1,300 ಜನಸಂಖ್ಯೆ ಇದೆ.

    ಹುಲ್ಕಡ್ಕೆ ಕತ್ಕೋಡು ಸಂಪರ್ಕಿಸುವ ಅಂತರ ಕೇವಲ ನಾಲ್ಕು ಕಿ.ಮೀ. ವಸ್ರೆಯಿಂದ ಸ್ವಲ್ಪ ದೂರ ರಸ್ತೆ ಚೆನ್ನಾಗಿದೆ. ಕಾಡು ದಾರಿಯಲ್ಲಿ ಸಾಗುವ ರಸ್ತೆ ಡಾಂಬರು ಹಾಕಿದ್ದಕ್ಕೆ ಸಾಕ್ಷಿ. ಹುಲ್ಕಡ್ಕೆಯಿಂದ ಎಳಜಿತ್ ಸಂಪರ್ಕ ರಸ್ತೆಯಿಂದ ಕತ್ಕೋಡು ರಸ್ತೆಯಲ್ಲಿ ಹೊಂಡಾಗುಂಡಿ, ಕೆಸರು ಮಡ್ಡಿ. ಈ ರಸ್ತೆಯಲ್ಲಿ ಸಂಚಾರವೇ ಒಂದು ಸವಾಲು.

    ಬಾಡಿಗೆ ವಾಹನ ಬರೋಲ್ಲ: ಪ್ರಾಥಮಿಕ ಶಾಲೆಗೆ ಹೋಗುವ 30, ಕಾಲೇಜು ಶಿಕ್ಷಣಕ್ಕೆ ಬೈಂದೂರು, ಕುಂದಾಪುರಕ್ಕೆ ಹೋಗುವ ವಿದ್ಯಾರ್ಥಿಗಳು 5 ಕಿ.ಮೀ. ನಡೆದು, ವಸ್ರೆ, ಎಳಜಿತ ಅಥವಾ ಎತ್ತಾಬೇರು ಸೇರಿ ಅಲ್ಲಿಂದ ಬಸ್ ಹಿಡಿದು ಹೋಗಬೇಕು. ಕಾಡು ನಡುವಿನ ರಸ್ತೆಯಲ್ಲಿ ಹೆಣ್ಮಕ್ಕಳು ಆತಂಕದಲ್ಲೇ ಸಂಚರಿಸುತ್ತಾರೆ. ಚಿಕ್ಕ ಮಕ್ಕಳನ್ನು ಪಾಲಕರು ಕರೆತಂದು, ಮತ್ತೆ ಕರೆದುಕೊಂಡು ಹೋಗಬೇಕು. ವಾಹನ ಮಾಡಿ ಕಳುಹಿಸುವ ಅಂದ್ರೆ ಯಾವುದೇ ವಾಹನದವರು ಬರೋದಕ್ಕೆ ಒಪ್ಪೋದಿಲ್ಲ. ಕೃಷಿಗೆ, ಮನೆಗೆ ಅಗತ್ಯ ವಸ್ತುಗಳನ್ನು ತಲೆಹೊರೆಯಲ್ಲಿ ತರಬೇಕು. ಅಂಗನವಾಡಿ ಎದುರೇ ಕಲ್ಲು ಕ್ವಾರಿ ಹೊಂಡವಿದ್ದು, ಮುಚ್ಚುವಂತೆ ಮನವಿ ಮಾಡಿದ್ದರೂ ಹಾಗೆಯೇ ಇದೆ.

    ರಾತ್ರಿ ಯಾರಾದರೂ ಅನಾರೋಗ್ಯಕ್ಕೆ ಈಡಾದರೆ ಆಸ್ಪತ್ರೆಗೆ ಹೋಗಲಾಗದೆ ಮನೆಯಲ್ಲೇ ಪ್ರಾಣ ಬಿಡಬೇಕಾದ ಸ್ಥಿತಿ ಇದೆ. ಬಾಡಿಗೆ ವಾಹನ, ರಿಕ್ಷಾದವರು ಹಿಂದೇಟು ಹಾಕುತ್ತಾರೆ. ಪ್ರತಿದಿನ 5 ಕಿ.ಮೀ. ನಡೆದು ಬಸ್ ಹಿಡಿದು ಪೇಟೆ ಸೇರಬೇಕು. ಮನೆ, ಕೃಷಿ ಪರಿಕರ ಹೊತ್ತು ತರಬೇಕು. ರಸ್ತೆ ಅಭಿವೃದ್ಧಿಗೆ ಮನವಿ ಮಾಡಿ ಸಾಕಾಗಿದೆ.
    – ಲಲಿತಾ ಮರಾಠಿ
    ಬಾಲವಿಕಾಸ ಸಮಿತಿ ಸದಸ್ಯೆ, ಹುಲ್ಕಡ್ಕೆ

    ಕಾಡಿನಲ್ಲಿ ರಸ್ತೆ ಈಗಾಗಲೇ ಇದ್ದು, ಮರಗಳ ಕಡಿಯಬೇಕಾದ ಅನಿವಾರ್ಯತೆ ಇಲ್ಲ. ಈಗಿರುವ ಮಣ್ಣುರಸ್ತೆ ಸರ್ವಋತು ರಸ್ತೆಯನ್ನಾಗಿ ಬದಲಾಯಿಸಿದರೆ ರಸ್ತೆ ಆಗುತ್ತದೆ. 4 ಕಿ.ಮೀ. ರಸ್ತೆಯಾದರೆ ನಮ್ಮ ಸಮಸ್ಯೆ ಪರಿಹಾರ ಆಗುತ್ತದೆ.
    – ರಾಜೇಶ್ ಕೊಠಾರಿ ಹುಲ್ಕಡ್ಕೆ
    ಗೋಳಿಹೊಳೆ ಗ್ರಾಮ ಪಂಚಾಯಿತಿ ಸದಸ್ಯ

    ಹುಲ್ಕಡ್ಕೆ ಕತ್ಕೋಡು 1 ಕಿ.ಮೀ. ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದು, ಕಾಮಗಾರಿ ಟೆಂಡರ್ ಕೂಡ ಮುಗಿದಿದ್ದು, ಇನ್ನೆರಡು ದಿನದಲ್ಲಿ ಸರ್ವಋತು ರಸ್ತೆ ಕೆಲಸ ಆರಂಭವಾಗಲಿದೆ. ಹುಲ್ಕಡ್ಕೆ ದುರ್ಗಾಪರಮೇಶ್ವರಿ ಕಾರಣಿಕ ಕ್ಷೇತ್ರವಾಗಿದ್ದು, ಉಳಿದ 3 ಕಿ.ಮೀ. ರಸ್ತೆ ಮುಂದಿನ ಮಳೆಗಾಲದೊಳಗೆ ಸಂಪೂರ್ಣ ಮಾಡಲಾಗುತ್ತದೆ.
    – ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts