More

    ಅರ್ಧಕ್ಕೆ ನಿಂತ ಸ್ವಾಗತ ಕಮಾನು ಕಾಮಗಾರಿ: ವಾಹನ ಸವಾರರು, ಪಾದಚಾರಿಗಳ ಪರದಾಟ

    ಕೆ.ಆರ್.ಪೇಟೆ: ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಪುರಸಭಾ ವ್ಯಾಪ್ತಿಯ ಹೊಸಹೊಳಲಿನ ಹೊಯ್ಸಳ ಶಿಲ್ಪಕಲೆಯ ಐತಿಹಾಸಿಕ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಸ್ವಾಗತ ಕಮಾನು ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ.
    ದೇವಾಲಯಕ್ಕೆ ಸ್ವಾಗತಿಸುವ ಕಮಾನನ್ನು ಈಗಾಗಲೇ ಹೊಸಹೊಳಲಿನ ದೇವಾಲಯ ರಸ್ತೆಯಲ್ಲಿ ಅಳವಡಿಸಲಾಗಿದೆ. ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಹೊಸಹೊಳಲು ಕಡೆ ಸಾಗುವ ರಸ್ತೆಯಲ್ಲಿ ಮತ್ತೊಂದು ಸ್ವಾಗತ ಕಮಾನು ನಿರ್ಮಾಣಕ್ಕೆ ಸಚಿವ ಕೆ.ಸಿ.ನಾರಾಯಣಗೌಡ ಭೂಮಿಪೂಜೆ ನೆರವೇರಿಸಿದ್ದರು. 38 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಹೊಯ್ಸಳ ಶಿಲ್ಪಕಲೆಯ ಐತಿಹಾಸಿಕ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಸ್ವಾಗತ ಕೋರುವ ಆರ್ಚ್ ನಿರ್ಮಾಣಕ್ಕೆ ವೇದಿಕೆ ಸಜ್ಜುಗೊಂಡಿತು.
    ಆರ್ಚ್ ನಿರ್ಮಾಣದಿಂದ ಪ್ರವಾಸಿ ಮಂದಿರ ವೃತ್ತದ ಹೊಸಹೊಳಲು ರಸ್ತೆಯ ಎರಡೂ ಬದಿಯ ವಾಣಿಜ್ಯ ವ್ಯವಹಾರಗಳಿಗೆ ತೊಂದರೆಯಾಗುತ್ತದೆ. ಜತೆಗೆ ಪ್ರವಾಸಿ ಮಂದಿರ ವೃತ್ತದ ರಸ್ತೆ ಕಿರಿದಾಗಿದ್ದು ಇಲ್ಲಿ ಆರ್ಚ್ ನಿರ್ಮಿಸಿದರೆ ವಾಹನ ಸಂಚಾರಕ್ಕೂ ತೊಂದರೆಯಾಗುತ್ತದೆ ಎಂದು ಜೆಡಿಎಸ್ ಪುರಸಭಾ ಸದಸ್ಯ ಕೆ.ಎಸ್.ಸಂತೋಷ್‌ಕುಮಾರ್, ಮಾಜಿ ಸದಸ್ಯ ಕಿರಣ್ ಮತ್ತು ಕಾಂಗ್ರೆಸ್‌ನ ಎಚ್.ಎನ್.ಪ್ರವೀಣ್ ನೇತೃತ್ವದಲ್ಲಿ ಸ್ಥಳೀಯ ವರ್ತಕರು ಪ್ರತಿಭಟಿಸಿ ಆರ್ಚ್ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದರು.
    ಜೆಡಿಎಸ್, ಕಾಂಗ್ರೆಸ್ ಪುರಸಭಾ ಸದಸ್ಯರು ಆರ್ಚ್ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದರಿಂದ ಬಿಜೆಪಿ ಪಾಳಯದ ಸದಸ್ಯರ ನಡುವೆ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿತ್ತು. ಈ ನಡುವೆ ಕ್ಷೇತ್ರದ ಶಾಸಕರಾದ ಸಚಿವ ಕೆ.ಸಿ.ನಾರಾಯಣಗೌಡ ಪ್ರವಾಸಿ ಮಂದಿರ ವೃತ್ತದಲ್ಲಿ ನಿಂತು ಪೊಲೀಸರ ರಕ್ಷಣೆಯೊಂದಿಗೆ ಪ್ರತಿಭಟನೆಯನ್ನು ಹತ್ತಿಕ್ಕಿ ಆರ್ಚ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದರು. ತಾವೇ ಸ್ವತಃ ಜಾಗ ತೋರಿಸಿ ಆರ್ಚ್ ನಿರ್ಮಾಣಕ್ಕೆ ಅಗತ್ಯ ಗುಂಡಿ ತೆಗೆಸಿದ ಸಚಿವ ಕೆ.ಸಿ.ನಾರಾಯಣಗೌಡ, ಲ್ಯಾಂಡ್ ಆರ್ಮಿಗೆ ಆರ್ಚ್ ನಿರ್ಮಾಣ ಕಾಮಗಾರಿ ಜವಾಬ್ದಾರಿ ವಹಿಸಿದ್ದರು.
    ಆದರೆ, ಆರ್ಚ್ ನಿಮಾಣ ಕಾಮಗಾರಿಗೆ ಪಟ್ಟು ಹಿಡಿದಿದ್ದ ಬಿಜೆಪಿ ಪಾಳಯ ಅರ್ಧಕ್ಕೆ ನಿಂತಿರುವ ಕಾಮಗಾರಿ ಮುಕ್ತಾಯಗೊಳಿಸಲು ಆಸಕ್ತಿ ತೋರದಿರುವುದು ವಿಪರ್ಯಾಸ. ಸಮಸ್ಯೆಯಿಂದ ಸ್ಥಳೀಯ ವ್ಯಾಪಾರಿಗಳ ಹಾಗೂ ವಾಹನ ಸವಾರರು ತೊಂದರೆಗೀಡಾಗಿದ್ದಾರೆ. ಧೂಳಿನ ಸಮಸ್ಯೆ, ರಸ್ತೆ ಕಿರಿದಾಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
    ಅವೈಜ್ಞಾನಿಕ ಕಾಮಗಾರಿ: ಪ್ರವಾಸಿ ಮಂದಿರ ವೃತ್ತದಿಂದ ಹೊಸಹೊಳಲಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಬೆಂಗಳೂರು- ಜಲಸೂರು ರಾಜ್ಯಹೆದ್ದಾರಿ ವ್ಯಾಪ್ತಿಗೆ ಸೇರಿದೆ. ರಾಷ್ಟ್ರೀಯ ಹೆದ್ದಾರಿ ಇಲ್ಲಿಂದ ಹಾದುಹೋಗಿದ್ದರೂ ಈ ರಸ್ತೆಯ ಅಗಲೀಕರಣವಾಗಿಲ್ಲ. ಇರುವ ರಸ್ತೆಯನ್ನೇ ಎರಡು ವಿಭಾಗವಾಗಿ ವಿಭಜಿಸಲಾಗಿದೆ. ರಸ್ತೆ ಕಿರಿದಾಗಿದ್ದು ಫುಟ್‌ಪಾತ್ ಅತಿಕ್ರಮಣವಾಗಿರುವುದರಿಂದ ವಾಹನ ಸಂಚಾರ ಇಲ್ಲಿ ಕಷ್ಟವಾಗಿದೆ. ಇದರ ನಡುವೆಯೇ ಆರ್ಚ್ ನಿರ್ಮಾಣಕ್ಕಾಗಿ ರಸ್ತೆಯ ಎರಡೂ ಬದಿ, ಮಧ್ಯಭಾಗದಲ್ಲೂ ಕಾಂಕ್ರೀಟ್ ಪಿಲ್ಲರ್ ಕಟ್ಟಲಾಗುತ್ತಿದೆ. ಆದರೆ ಹಣಕಾಸಿನ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನಡುರಸ್ತೆಯಲ್ಲಿ ಅಸ್ಥಿಪಂಜರದಂತೆ ನಿಂತಿರುವ ಅರೆಬರೆ ಕಂಬಗಳು ಇದೀಗ ಫ್ಲೆಕ್ಸ್ ಅಳವಡಿಸುವವರಿಗೆ ಬಳಕೆಯಾಗುತ್ತಿದೆ.
    ರಾಜಕಾರಣಿಗಳ ಬೃಹತ್ ಫ್ಲೆಕ್ಸ್‌ಗಳು ರಸ್ತೆ ಮಧ್ಯದಲ್ಲಿಯೇ ನಿಂತಿದ್ದು ಸಂಚಾರ ಅಡಚಣೆಗೆ ಮತ್ತಷ್ಟು ಕಾರಣವಾಗುತ್ತಿವೆ. ಆರ್ಚ್ ಕಾಮಗಾರಿಗೆ ಹೊಂದಿಕೊಂಡಂತೆಯೇ ಟ್ರಾಫಿಕ್ ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿದೆ. ರಸ್ತೆ ಕಿರಿದಾಗಿರುವುದರಿಂದ ಸಿಗ್ನಲ್ ದಾಟುವವರು ಅರ್ಧಕ್ಕೆ ನಿಂತಿರುವ ಆರ್ಚ್‌ನ ಎರಡೂ ಬದಿಗಳಲ್ಲೂ ಸಾಗುತ್ತಿದ್ದು ಇದು ಅಪಘಾತಗಳಿಗೆ ಕಾರಣವಾಗುತ್ತಿದೆ.
    ಒತ್ತಾಯ: ಪ್ರವಾಸಿ ಮಂದಿರ ವೃತ್ತದಲ್ಲಿ ಆರ್ಚ್ ನಿರ್ಮಾಣಕ್ಕೆ ಟೊಂಕಕಟ್ಟಿ ನಿಂತಿದ್ದ ಸಚಿವ ಕೆ.ಸಿ.ನಾರಾಯಣಗೌಡ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಎನ್ನುವ ಒತ್ತಾಯದ ಮಾತುಗಳು ಕೇಳಿಬರುತ್ತಿವೆ.
    ಲ್ಯಾಂಡ್ ಆರ್ಮಿ ಎಇಇ ಆರ್.ಟಿ.ಮಂಜುನಾಥ್ ಪ್ರತಿಕ್ರಿಯಿಸಿ, ಪ್ರವಾಸೋದ್ಯಮ ಇಲಾಖೆಯಿಂದ 33 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಹೊಸಹೊಳಲಿನಲ್ಲಿ 22 ಲಕ್ಷ ರೂ. ಹೈಮಾಸ್ಟ್ ಲೈಟ್, 5ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಉಳಿಕೆ 6 ಲಕ್ಷದಲ್ಲಿ ಟಿಬಿ ವೃತ್ತದಲ್ಲಿ ಆರ್ಚ್ ಪಿಲ್ಲರ್ ಹಾಕಲಾಗಿದೆ. ಇದು 38 ಲಕ್ಷ ರೂ. ಅಂದಾಜಾಗಿದ್ದು ಉಳಿಕೆ 32 ಲಕ್ಷ ರೂ. ಸರ್ಕಾರ ಅನುದಾನ ಬಿಡುಗಡೆ ಮಾಡಿದ ನಂತರ ಕಾಮಗಾರಿ ಮುಗಿಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts