More

    ಸೂಡ ಭಗತ್ ಸಿಂಗ್ ರಸ್ತೆ ಅವ್ಯವಸ್ಥೆ

    ಹರಿಪ್ರಸಾದ್ ನಂದಳಿಕೆ, ಬೆಳ್ಮಣ್
    ಅರೆಬರೆ ಕಾಮಗಾರಿಯಿಂದ ನಿರ್ಮಾಣಗೊಂಡ ಸೂಡ ಭಗತ್ ಸಿಂಗ್ ರಸ್ತೆಯಿಂದ ಗ್ರಾಮೀಣ ಭಾಗದ ಜನ ಸಂಕಟ ಅನುಭವಿಸುವಂತಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬೆಳ್ಮಣ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಡ ಭಗತ್ ಸಿಂಗ್ ರಸ್ತೆ ತೀರ ಹದಗೆಟ್ಟಿದ್ದು, ಆರು ತಿಂಗಳ ಹಿಂದೆ ಡಾಂಬರು ರಸ್ತೆಗೆ ತೇಪೆ ಹಾಕುವ ಕಾಮಗಾರಿ ನಡೆದಿತ್ತು. ಇದೀಗ ತೇಪೆ ಹಾಕಲಾದ ರಸ್ತೆಯೂ ಹೊಂಡ ಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಘನ ವಾಹನ ಆರ್ಭಟಕ್ಕೆ ಕಿತ್ತುಹೋದ ರಸ್ತೆ: ಸೂಡ ಹಾಗೂ ನಂದಳಿಕೆ ಭಾಗದಲ್ಲಿ ಸಾಕಷ್ಟು ಕಲ್ಲು ಕ್ವಾರಿ ಹಾಗೂ ಕ್ರಷರ್ ಇರುವುದರಿಂದ ನಿತ್ಯ ಟನ್‌ಗಟ್ಟಲೆ ಲೋಡ್ ತುಂಬಿದ ಲಾರಿ, ಟಿಪ್ಪರ್‌ಗಳು ಮಣಿಪಾಲ, ಶಿರ್ವ, ಉಡುಪಿ ಭಾಗವನ್ನು ಸೇರಲು ಭಗತ್ ಸಿಂಗ್ ರಸ್ತೆಯನ್ನು ಅವಲಂಬಿಸಿದ್ದು, ವಾಹನಗಳ ಅತಿಯಾದ ಓಡಾಟಕ್ಕೆ ರಸ್ತೆ ಸಂಪೂರ್ಣ ಕೆಟ್ಟಿದೆ.

    ಪದೇ ಪದೆ ಕಾಮಗಾರಿ: ಸೂಡ ಗ್ರಾಮದಿಂದ ನಂದಳಿಕೆಯನ್ನು ಸಂಪರ್ಕಿಸುವ ಈ ರಸ್ತೆ ಹೊಂಡ ಗುಂಡಿಗಳಿಂದ ಕಾಲು ನಡಿಗೆಯಲ್ಲಿ ಸಂಚರಿಸುವುದಕ್ಕೂ ಅಯೋಗ್ಯವಾಗಿದೆ. ಈ ರಸ್ತೆಯ ಕಾಮಗಾರಿ ಸ್ವಲ್ಪ ಸ್ವಲ್ಪ ನಡೆಸುವ ಮೂಲಕ ರಸ್ತೆಯನ್ನು ಪದೇ ಪದೆ ಬಂದ್ ಮಾಡಲಾಗುತ್ತಿದೆ. ಇದರಿಂದ ಸಂಕಟ ಅನುಭವಿಸುವಂತಾಗಿದೆ ಎಂದು ಇಲ್ಲಿನ ಕೃಷಿಕರು ಆರೋಪಿಸಿದ್ದಾರೆ.

    ಇತ್ತೀಚೆಗೆ ಸುಮಾರು 200 ಮೀಟರ್ ಉದ್ದದ ರಸ್ತೆ ಕಾಂಕ್ರೀಟ್‌ಗೊಂಡರೂ ಬದಿಗೆ ಮಣ್ಣು ಹಾಕದ ಪರಿಣಾಮ ಸೈಡ್ ಕೊಡಲು ಜಾಗವಿಲ್ಲದೆ ತೊಂದರೆಯಾಗುತ್ತಿದೆ. ಕಾಂಕ್ರೀಟ್ ರಸ್ತೆ ಕೊನೆಯಾಗುವವರೆಗೆ ಟಿಪ್ಪರ್‌ಗಳು ವೇಗವಾಗಿ ಓಡಾಟ ನಡೆಸುತ್ತಿದ್ದು ಅನಾಹುತ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಇತ್ತೀಚೆಗೆ ಟಿಪ್ಪರ್ ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿ ಸಾಗುತ್ತಿದ್ದ ದನ ಸತ್ತುಹೋಗಿತ್ತು.

    ರಸ್ತೆ ಸಮಸ್ಯೆಯಿಂದ ರಿಕ್ಷಾ ಚಾಲಕರು ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದು, 60 ರೂಪಾಯಿ ಬಾಡಿಗೆಯ ಬದಲಿಗೆ ಸುಮಾರು 7 ಕಿ.ಮೀ ಸುತ್ತಿ ಬಳಸಿ ರಿಕ್ಷಾದಲ್ಲಿ 200 ರೂ. ಬಾಡಿಗೆ ನೀಡಬೇಕಾದ ಪರಿಸ್ಥಿತಿಯಿದೆ. ಆದಷ್ಟು ಬೇಗ ಸಮಸ್ಯೆಯನ್ನು ನಿವಾರಿಸಿ, ಜನರ ಸಮಸ್ಯೆಗೆ ಸ್ಪಂದಿಸಲು ಶಾಸಕರ ಸಹಿತ ಜನಪ್ರತಿನಿಧಿಗಳು ಪ್ರಯತ್ನಿಸಬೇಕಾಗಿದೆ ಎನ್ನುವುದು ಗ್ರಾಮಸ್ಥರ ಒತ್ತಾಯ.

    ರಸ್ತೆಗೆ ತೇಪೆ ಹಾಕಿದ್ದು, ಕಳಪೆ ಕಾಮಗಾರಿಯಾಗಿದೆ. ಅಲ್ಲದೆ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡರೂ ಸರಿಯಾದ ನಿರ್ವಹಣೆ ಮಾಡದೆ ವಾಹನ ಸಂಚಾರಕ್ಕೆ ತುಂಬ ತೊಂದರೆಯಾಗುತ್ತಿದ್ದು ಇಡೀ ಗ್ರಾಮಸ್ಥರ ನೆಮ್ಮದಿ ಕೆಡಿಸಿದೆ. ಘನವಾಹನದ ಆರ್ಭಟಕ್ಕೆ ಜಾನುವಾರುಗಳನ್ನು ನಾವು ಕಳೆದುಕೊಳ್ಳುವಂತಾಗಿದೆ.
    ಸಹನಾ ಕುಂದರ್ ಸೂಡ, ಗ್ರಾಮಸ್ಥೆ

    ಸಾಕಷ್ಟು ಘನ ವಾಹನದ ಸಂಚಾರದಿಂದ ನಮ್ಮ ಈ ಗ್ರಾಮೀಣ ಭಾಗದ ರಸ್ತೆ ತೀರ ಹದಗೆಟ್ಟಿದ್ದು ನಮ್ಮ ಸಮಸ್ಯೆಗೆ ಸ್ಪಂದಿಸೋರು ಯಾರು ಇಲ್ಲ. ಅಧಿಕಾರಿಗಳು ಈ ಭಾಗದಲ್ಲಿ ಓಡಾಡುವ ಟಿಪ್ಪರ್‌ಗಳಿಗೆ ನಿಷೇಧ ಹೇರಬೇಕಾಗಿದೆ.
    ರವಿರಾಜ್ ಶೆಟ್ಟಿ, ಸೂಡ ಗ್ರಾಮಸ್ಥ

    ಜನತೆಯ ಅನುಕೂಲಕ್ಕಾಗಿ ಶೀಘ್ರವಾಗಿ ರಸ್ತೆ ಕಾಂಕ್ರೀಟ್ ಕಾಮಗಾರಿ ಮುಗಿಸಲಾಗಿದೆ. ಎರಡೂ ಬದಿಯಲ್ಲೂ ಮಣ್ಣು ಹಾಕಿ ವಾಹನಗಳು, ಜನರ ಓಡಾಟಕ್ಕೆ ಅನುಕೂಲವಾಗುವಂತೆ ರಸ್ತೆಯನ್ನು ನಿರ್ಮಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ.
    ರೇಶ್ಮಾ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts