More

    ಕಲ್ಲುಗುಡ್ಡೆ- ಅಡೆಂಜ ರಸ್ತೆ ಸ್ಥಿತಿ ಶೋಚನೀಯ

    ಪ್ರವೀಣ್‌ರಾಜ್ ಕೊಲ ಕಡಬ
    ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಎಂಜಿರ ಸಂಪರ್ಕಿಸುವ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ- ಅಡೆಂಜ ರಸ್ತೆ ಶೋಚನೀಯ ಸ್ಥಿತಿಯಲ್ಲಿದೆ.

    ರಸ್ತೆ ಅಭಿವೃದ್ಧಿಗೆ 10 ತಿಂಗಳ ಹಿಂದೆ ಗುದ್ದಲಿಪೂಜೆ ನಡೆಸಿ ಕೆಲಸಕ್ಕೆ ಚಾಲನೆ ನೀಡಲಾಗಿತ್ತಾದರೂ ಕಾಮಗಾರಿ ಇನ್ನೂ ಆರಂಭವಾಗದೇ ಹದಗೆಟ್ಟ ರಸ್ತೆಯಲ್ಲೇ ಜನ ಸಂಚರಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ರಸ್ತೆಯಾಗಿರುವ ಇಲ್ಲಿ ದಶಕಗಳ ಹಿಂದೆ ಡಾಂಬರು ಕಾಮಗಾರಿ ನಡೆದಿತ್ತು. ಆ ಬಳಿಕ ಅಭಿವೃದ್ಧಿ ಕೆಲಸ ನಡೆದಿಲ್ಲ. ಕಲ್ಲುಗುಡ್ಡೆ- ಅಡೆಂಜ ರಸ್ತೆಯ ಸುಮಾರು ಒಂದು ಕಿ.ಮೀ.ವರೆಗೆ ಈಗಾಗಲೇ ಜಿಲ್ಲಾಧಿಕಾರಿಯವರ ಮಳೆಹಾನಿ ಅನುದಾನದಡಿ ಡಾಂಬರು ಕೆಲಸ ನಡೆದಿದೆ. ಉಳಿದ ಸುಮಾರು ಎರಡು ಕಿ.ಮೀ ರಸ್ತೆ ತೀರ ಹದಗೆಟ್ಟಿದೆ.

    ಮೋರಿಯೂ ಕುಸಿತದ ಭೀತಿ: ಈ ರಸ್ತೆ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ಮಂಜೂರುಗೊಂಡಿದ್ದು, ಜನವರಿಯಲ್ಲಿ ಶಾಸಕ ಎಸ್.ಅಂಗಾರ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಕೆಲಸ ಮಾತ್ರ ಇನ್ನೂ ಆರಂಭವಾಗದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಡೆಂಜ ಸಂಪರ್ಕ ರಸ್ತೆಯ ಅರಿಮಜಲು ಎಂಬಲ್ಲಿ ಹರಿಯುತ್ತಿರುವ ಸೇತುವೆಯ ತಡೆಗೋಡೆ ವಾಹನ ಅಪಘಾತದಿಂದ ಕುಸಿದು ವರ್ಷ ಕಳೆದರೂ ಸೇತುವೆ ತಡೆಬೇಲಿ ದುರಸ್ತಿಗೊಂಡಿಲ್ಲ. ಇದೇ ರಸ್ತೆಯ ಬಾಳೆಮಾರು ಬಳಿ ಮೋರಿಯೂ ಕುಸಿತಗೊಳ್ಳುವ ಭೀತಿಯಲ್ಲಿದೆ. ಕೂಡಲೇ ರಸ್ತೆ, ಸೇತುವೆ ತಡೆಬೇಲಿ ಅಭಿವೃದ್ಧಿಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಟೆಂಡರ್ ಪ್ರಕ್ರಿಯೆಯ ತಾಂತ್ರಿಕ ತೊಂದರೆಯಿಂದ ಕಾಮಗಾರಿ ನಡೆಸಲು ವಿಳಂಬವಾಗಿದೆ. ಈಗ ಟೆಂಡರ್ ನಡೆಸಿದ್ದು ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಕಾಮಗರಿ ಆರಂಭಿಸಲಾಗುವುದು.
    ಎಸ್.ಅಂಗಾರ ಸುಳ್ಯ ಶಾಸಕ

    ಮೊಗ್ರ ಸೇತುವೆ, ಕಮಿಲ ರಸ್ತೆ ಅವ್ಯವಸ್ಥೆ
    ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರಕ್ಕೆ ಸೇತುವೆ ಮತ್ತು ಗುತ್ತಿಗಾರು- ಕಮಿಲ ಬಳ್ಪ ರಸ್ತೆ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ವಿಡಿಯೋ ಸಹಿತ ವಿವರಣೆಯ ಸಿಡಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಮಿಲ, ಮೊಗ್ರ, ಬಳ್ಳಕ್ಕದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಅಂಚೆ ಮೂಲಕ ರವಾನಿಸಿದ್ದಾರೆ.

    ಈ ವಿಡಿಯೋ ಬಿಡುಗಡೆ ಹಾಗೂ ಪ್ರದರ್ಶನ ಸೋಮವಾರ ಕಮಿಲದಲ್ಲಿ ನಡೆಯಿತು. ಪದಾಧಿಕಾರಿ ಪಿ.ಎಸ್.ಗಂಗಾಧರ ಭಟ್ ಪುಚ್ಚಪ್ಪಾಡಿ ಸಿಡಿ ಬಿಡುಗಡೆ ಮಾಡಿದರು. ಬಳಿಕ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಶೆಗಳ ಬಗ್ಗೆ ಚರ್ಚಿಸಲಾಯಿತು.

    ಗುತ್ತಿಗಾರು- ಕಮಿಲ- ಬಳ್ಪ ರಸ್ತೆ ಸಂಪೂರ್ಣ ಡಾಂಬರು ಕಾಮಗಾರಿ ನಡೆಯುವ ತನಕ ಹಾಗೂ ಮೊಗ್ರ ಹೊಳೆಗೆ ಸೇತುವೆ ನಿರ್ಮಾಣವಾಗುವವರೆಗೆ ಹಂತ ಹಂತವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಪ್ರಮುಖರಾದ ಕಾರ್ಯಪ್ಪ ಗೌಡ ಚಿಕ್ಮುಳಿ, ಧನಂಜಯ ಮಲ್ಕಜೆ, ಮಹೇಶ್ ಪುಚ್ಚಪ್ಪಾಡಿ, ಸುಧಾಕರ ಮಲ್ಕಜೆ, ಗಂಗಾಧರ ಬಿಟ್ಟಿ.ಬಿ.ನೆಡುನೀಲಂ, ಲಕ್ಷ್ಮೀಶ ಗಬ್ಲಡ್ಕ, ಜೀವನ್ ಮಲ್ಕಜೆ, ಮೋನಪ್ಪ ಬಳ್ಳಕ್ಕ, ವೆಂಕಟ್ರಮಣ ಕೆಂಬ್ರೋಳಿ ಮಾತನಾಡಿದರು.ಶಾರದಾ ಎಂ.ಕೆ, ವೆಂಕಟ್ರಮಣ ಕಮಿಲ, ಸದಾನಂದ ಮಲ್ಕಜೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts