More

    ರಸ್ತೆಗಳ ಅಭಿವೃದ್ಧಿಗೆ ಗ್ರಹಣ?! : ಗಾಂಧಿನಗರದಲ್ಲಿ ಗುಂಡಿಗಳ ಕಾರುಬಾರು 

    ಕೋಲಾರ :  ಅತಿಹೆಚ್ಚು ಅನುಸೂಚಿತ ಜಾತಿ ಮತ್ತು ಪಂಗಡಕ್ಕೆ ಸೇರಿದವರು, ಹಿಂದುಳಿದವರು ಇರುವ ವಾರ್ಡ್ ನಂ.2ಕ್ಕೆ ಸೇರಿದ ಗಾಂಧಿನಗರದ ರಸ್ತೆಗಳ ಅಭಿವೃದ್ಧಿಗೆ ಗ್ರಹಣ ಹಿಡಿದಿರುವುದರಿಂದ ನಾಗರಿಕರು ತತ್ತರಿಸಿದ್ದಾರೆ.
    ಇಲ್ಲಿನ 1ನೇ ಮುಖ್ಯರಸ್ತೆ ಯರಗೋಳ್ ನೀರಾವರಿ ಯೋಜನೆಯ ಪೈಪ್‌ಲೈನ್ ಕಾಮಗಾರಿಯಿಂದ ಸಂಪೂರ್ಣ ಅಧ್ವಾನಗೊಂಡಿದ್ದು ರಸ್ತೆ ದುರಸ್ತಿಗೊಳಿಸದೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ಲಕ್ಷ್ಯ ತೋರಿರುವುದರಿಂದ ನಾಗರಿಕರಿಗೆ ಉತ್ತರಿಸುವುದು ವಾರ್ಡ್ ಸದಸ್ಯರಿಗೆ ತಲೆ ನೋವಾಗಿದೆ.

    ರಸ್ತೆಯಲ್ಲಿ ನೂರಾರು ಗುಂಡಿಗಳು ತಲೆ ಎತ್ತಿವೆ. ವಾಹನ ಸವಾರರು ಗುಂಡಿಯಲ್ಲಿ ಬಿದ್ದು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. 15ನೇ ಹಣಕಾಸು ಯೋಜನೆಯಡಿ ವಾರ್ಡ್ ಸದಸ್ಯರೂ ಆಗಿರುವ ನಗರಸಭೆ ಉಪಾಧ್ಯಕ್ಷ ಪ್ರವೀಣ್ ಗೌಡ 9 ಲಕ್ಷ ರೂ. ರಸ್ತೆ ಅಭಿವೃದ್ಧಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ, ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಚುನಾವಣಾ ನೀತಿ ಸಂಹಿತೆಯಿಂದ ಗುತ್ತಿಗೆದಾರರು ವರ್ಕ್ ಆರ್ಡರ್ ಪಡೆಯುವುದಕ್ಕೆ ಅಡ್ಡಿಯಾಗಿದೆ.

    ಗಾಂಧಿನಗರದ 1ನೇ ವಾರ್ಡ್ ಗುಂಡಿಗಳ ಕಾರುಬಾರಿನಿಂದ ನಲುಗಿದ್ದರೆ 2, 3ಹಾಗೂ 4ನೇ ಮುಖ್ಯರಸ್ತೆ ನಿರಂತರ ಮಳೆಯಿಂದ ಕೆಸರು ಗದ್ದೆಯಾಗಿದೆ. ಅನುಸೂಚಿತ ಜಾತಿ ಮತ್ತು ಪಂಗಡದವರು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಸಿಸಿ ರಸ್ತೆ ಅವಶ್ಯವಾಗಿದ್ದು, ಸ್ಥಳೀಯ ಶಾಸಕರು, ನಗರಸಭೆಯವರು ಸರ್ಕಾರದ ಮೇಲೆ ಒತ್ತಡತಂದು ಅನುದಾನ ಮಂಜೂರು ಮಾಡಿಸಿಕೊಂಡು ರಸ್ತೆಗಳ ಅಭಿವೃದ್ಧಿಗೆ ಕಾಳಜಿ ತೋರದಿದ್ದರೆ ಸ್ಲಮ್‌ಮುಕ್ತ ಕೋಲಾರ ಘೋಷಣೆಯಾಗಿಯೇ ಉಳಿಯಲಿದೆ.

    ಗಾಂಧಿನಗರಕ್ಕೆ ಒಳಪಟ್ಟಿರುವ ಗದ್ದೆಕಣ್ಣೂರು ರಸ್ತೆಯಲ್ಲಿ ಹೊಸ ಲೇಔಟ್ ತಲೆ ಎತ್ತುತ್ತಿದ್ದು, ಈ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆಸಕ್ತಿ ತೋರಿರುವ ಶಾಸಕ ಕೆ.ಶ್ರೀನಿವಾಸಗೌಡ ಮೊದಲು ಗುಂಡಿ ಬಿದ್ದಿರುವ ರಸ್ತೆಗಳಿಗೆ ಕಾಯಕಲ್ಪ ನೀಡಲಿ ಎಂಬುದು ಜನರ ಒತ್ತಾಸೆಯಾಗಿದೆ. ಸ್ಲಮ್‌ಗಳಲ್ಲಿ ವಸತಿ ರಹಿತ ಬಡವರಿಗೆ ಆಶ್ರಯ, ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸಬೇಕು, ಗುಣಮಟ್ಟದ ರಸ್ತೆ, ಚರಂಡಿ ನಿರ್ಮಾಣಕ್ಕೆ ಸರ್ಕಾರದಿಂದ ವಿಶೇಷ ಅನುದಾನ ತರಬೇಕೆಂಬುದು ಜನರ ಒತ್ತಾಯವಾಗಿದೆ.

    ಮಳೆನಿಂತ ಮೇಲೆ ರಸ್ತೆಗಳ ಅಭಿವೃದ್ಧಿಗೆ ಗಮನ ಹರಿಸಬೇಕು, ಅಗತ್ಯ ಕಾಮಗಾರಿಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗದಂತೆ ಕ್ರಮ ಜರುಗಿಸಲು ಜಲ್ಲಾಧಿಕಾರಿಗಳ ಮನವೊಲಿಸಬೇಕು, ವಾರ್ಡಿನಲ್ಲಿ ಎಸ್ಸಿ, ಎಸ್ಟಿ ಜನ ಹೆಚ್ಚಿರುವುದರಿಂದ ನಗರಸಭೆ ಮೂಲಕ ಅನುದಾನ ಬಿಡುಗಡೆ ಮಾಡಿಸಿ ತಾರತಮ್ಯ ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಗಾಂಧಿನಗರ ಸೇರಿ ಕೋಲಾರ ನಗರದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಕಾಳಜಿ ವಹಿಸಿರುವೆ, ಈಗಾಗಲೆ ಪ್ರಮುಖ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ಕೋರಲಾಗಿದೆ, ನಗರಸಭೆಗೆ ಸರ್ಕಾರದಿಂದ ಸಿಗುವ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು, ಮಳೆ ನಿಂತ ಮೇಲೆ ರಸ್ತೆಗಳ ಕಾಮಗಾರಿ ವೇಗ ಹೆಚ್ಚಲಿದೆ.
    ಕೆ.ಶ್ರೀನಿವಾಸಗೌಡ, ಶಾಸಕ, ಕೋಲಾರ

    1ನೇ ಮುಖ್ಯರಸ್ತೆ ಅಭಿವೃದ್ಧಿಪಡಿಸಲು 15ನೇ ಹಣಕಾಸು ಯೋಜನೆಯಡಿ 9 ಲಕ್ಷ ರೂ. ಮಂಜೂರು ಮಾಡಿಸಲಾಗಿದೆ, ಮಳೆ ನಿಂತ ಮೇಲೆ ಕಾಮಗಾರಿ ಆರಂಭಿಸಲಾಗುವುದು, ಚುನಾವಣಾ ನೀತಿ ಸಂಹಿತೆಯಿಂದ ಕಾಮಗಾರಿಗೆ ಅಡ್ಡಿಯಾಗದಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವೆ, ಎಸ್ಸಿ, ಎಸ್ಟಿ ಜನ ಹೆಚ್ಚಿರುವ ಪ್ರದೇಶದಲ್ಲಿ ಸಿಸಿ ರಸ್ತೆ, ಮನೆ ನಿರ್ಮಾಣಕ್ಕೆ ವಸತಿ ಸಚಿವ ಎನ್.ಸೋಮಣ್ಣ ಅವರನ್ನು ಕೋರಲಾಗಿದೆ.
    ಪ್ರವೀಣ್ ಗೌಡ, 2ನೇ ವಾರ್ಡ್ ಸದಸ್ಯ ಹಾಗೂ ಉಪಾಧ್ಯಕ್ಷ, ನಗರಸಭೆ, ಕೋಲಾರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts