More

    ಅಮಲಗೊಂದಿ ಸೇತುವೆ ಮೇಲೆ ರಸ್ತೆ ಕುಸಿತ ; ಗೊತ್ತಿಲ್ಲದೆ ಬಂದರೆ ಅಪಾಯ ಖಚಿತ

    ಶಿರಾ: ಶೀಬಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಅಮಲಗೊಂದಿಗೆ ರಾಷ್ಟ್ರೀಯ ಹೆದ್ದಾರಿ 48ರಿಂದ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇತುವೆ ಕುಸಿದು, ರಸ್ತೆಯೂ ಕುಸಿಯುತ್ತಿದೆ. ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿದ್ದ ಸೇತುವೆ/ಬ್ಯಾರೇಜ್ ಇತ್ತೀಚೆಗೆ ಕುಸಿದಿದ್ದು ರಸ್ತೆಯೂ ಅರ್ಧ ಕೊಚ್ಚಿ ಹೋಗಿದೆ.

    ರಸ್ತೆ ಸಂಪೂರ್ಣ ಹಾಳಾಗಿದ್ದು, ಜನರು ಅಪಾಯದಲ್ಲಿಯೇ ಓಡಾಟ ನಡೆಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ಕಡೆ ಸುಳಿದಿಲ್ಲ. ಕಳೆದ ಎರಡು ತಿಂಗಳಿನಿಂದಲೂ ವಾಹನ ಸವಾರರು ಪ್ರಾಣ ಕೈಯಲ್ಲಿಡಿದುಕೊಂಡು ಓಡಾಡುವ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

    ಅಪರೂಪಕ್ಕೆ ಸುರಿದ ಭಾರಿ ಮಳೆಗೆ ಹಳ್ಳದಲ್ಲಿ ಹರಿದ ರಭಸವಾದ ನೀರಿಗೆ ಕಸ, ಕಡ್ಡಿಯೆಲ್ಲಾ ಬಂದು ಸೇತುವೆ ಮುಚ್ಚಿಹೋಗಿದ್ದರಿಂದ ನೀರು ರಸ್ತೆಯ ಮೇಲೆ ಹರಿದು ಸಂಪೂರ್ಣ ರಸ್ತೆಯೇ ಕುಸಿದು ಬಿದ್ದಿದೆ. ಕೂಡಲೇ ಸ್ಥಳೀಯ ಗ್ರಾಪಂ ಸದಸ್ಯ ಚಿದಾನಂದ್ ಸೇತುವೆ ಗೇಟ್‌ಗಳಲ್ಲಿ ಭರ್ತಿಯಾಗಿದ್ದ ಕಸಕಡ್ಡಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದರು. ರಸ್ತೆ ಕೊರೆತವಾಗಿದ್ದರೂ ಇಲಾಖೆಗಳು ಗಮನ ಹರಿಸದೆ ಇರುವುದು ಜನರಿಗೆ ತೊಂದರೆ ತಂದೊಡ್ಡಿದೆ.

    ರಸ್ತೆ ಹಾಳಾಗಿ ಎರಡು ತಿಂಗಳಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಕಡೆ ಸುಳಿದಿಲ್ಲ, ಅಪರಿಚಿತರು ಈ ರಸ್ತೆಯಲ್ಲಿ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೂಡಲೇ ಕುಸಿದ ರಸ್ತೆ ಸರಿಪಡಿಸಿ ಮುಂದಾಗಬಹುದಾದ ಅಪಾಯ ತಪ್ಪಿಸಬೇಕಿದೆ.
    ಮಂಜುನಾಥ್ ಅಮಲಗೊಂದಿ ಗ್ರಾಮಸ್ಥ

    ಸಮಸ್ಯೆ ಬಗ್ಗೆ ಅರಿವಿದ್ದು ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದೇವೆ, ನೆರೆ ಪರಿಹಾರ ಯೋಜನೆಯಲ್ಲಿ ಇದನ್ನು ಸೇರಿಸಲಾಗಿದ್ದು ಸರ್ಕಾರದ ಅನುದಾನಕ್ಕಾಗಿ ಕಾಯಲಾಗುತ್ತಿದೆ. ಒನ್ ಟೈಮ್ ರಸ್ತೆ ಕಾಮಗಾರಿಯಾದ ಕಾರಣಕ್ಕೆ ನಿರ್ವಹಣೆ ಕೂಡ ಸಾಧ್ಯವಾಗುತ್ತಿಲ್ಲ.
    ಗಂಗಾಧರ್ ಎಇಇ, ಪಿಆರ್‌ಇಡಿ, ಶಿರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts